ಕನ್ನಡಪ್ರಭ ವಾರ್ತೆ ಬೆಳಗಾವಿ ಚನ್ನಮ್ಮನ ಕಿತ್ತೂರು ತಾಲೂಕಿನ ಕುಲವಳ್ಳಿ ಕ್ರಾಸ್‌ ಬಳಿಯ ರಸ್ತೆಯಲ್ಲಿ ಶುಕ್ರವಾರ ಮಧ್ಯರಾತ್ರಿ ಎಂಟು ದರೋಡೆಕೋರರು ಸಿನಿಮೀಯ ರೀತಿಯಲ್ಲಿ ಕಾರನ್ನು ಅಡ್ಡಗಟ್ಟಿ ₹2 ಲಕ್ಷ ಮೌಲ್ಯದ 15 ಗ್ರಾಂ ಚಿನ್ನಾಭರಣ ದರೋಡೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಚನ್ನಮ್ಮನ ಕಿತ್ತೂರು ತಾಲೂಕಿನ ಕುಲವಳ್ಳಿ ಕ್ರಾಸ್‌ ಬಳಿಯ ರಸ್ತೆಯಲ್ಲಿ ಶುಕ್ರವಾರ ಮಧ್ಯರಾತ್ರಿ ಎಂಟು ದರೋಡೆಕೋರರು ಸಿನಿಮೀಯ ರೀತಿಯಲ್ಲಿ ಕಾರನ್ನು ಅಡ್ಡಗಟ್ಟಿ ₹2 ಲಕ್ಷ ಮೌಲ್ಯದ 15 ಗ್ರಾಂ ಚಿನ್ನಾಭರಣ ದರೋಡೆ ಮಾಡಿದ್ದಾರೆ.

ಮುಂಬೈ ಮೂಲದ ಎಂಜಿನಿಯರ್ ವೈಭವ ಮೋಹನ್ ವ್ಯವಹಾರೆ(30) ದರೋಡೆಗೆ ಒಳಗಾದವರು. ಇವರ ಸ್ನೇಹಿತ ದೇವೇಂದ್ರ ಕದಂ ಸಹ ಕಾರಲ್ಲಿ ಇದ್ದರು. ಕಾರನ್ನು ಬೆನ್ನಟ್ಟಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದರೋಡೆಕೋರರು, ಕಾರನ್ನು ಜಖಂ ಮಾಡಿ, ಹೆದರಿಸಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕಿತ್ತೂರು ಸಮೀಪದ ಪೆಟ್ರೋಲ್ ಬಂಕ್‌ನಲ್ಲಿ ಕಾರಿಗೆ ಇಂಧನ ತುಂಬಿಸಿಕೊಂಡು ಕುಲವಳ್ಳಿ ಕ್ರಾಸ್‌ನಿಂದ ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ದರೋಡೆಕೋರರು ಕಾರ್‌ನ್ನು ಅಡ್ಡಗಟ್ಟಿದರು. ಅಷ್ಟರಲ್ಲಿ ಒಬ್ಬ ದೊಡ್ಡ ಕಲ್ಲನ್ನು ಎತ್ತಿ ಕಾರಿನ ಮುಂಭಾಗಕ್ಕೆ ಎಸೆದಿದ್ದು, ನಂತರ ಕಾರ್‌ನ್ನು ನಿಲ್ಲಿಸಿದಾಗ ಇನ್ನುಳಿದವರು ಹೆದರಿಸಿ, ಚಿನ್ನದ ಸರ ಇನ್ನಿತರ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಸಂದರ್ಭದಲ್ಲಿ ದರೋಡೆಕೋರರ ಬಳಿ ಎರಡು ರಿವಾಲ್ವರ್‌ ಸಹ ಇದ್ದವು ಎಂದು ಮೂಲಗಳು ತಿಳಿಸಿವೆ.

ದರೋಡಗೊಳಗಾದ ವೈಭವ ಅವರು ಮುಂಬಯಿ ಮೂಲದ ಫ್ಯೂಚರ್ ಪ್ರೈವೇಟ್ ಕನೆಕ್ಟ್ ಲಿಮಿಟೆಡ್ ಸಂಸ್ಥೆಯಲ್ಲಿ ಪ್ಯಾನ್ ಇಂಡಿಯಾ ಟೆಕ್ನಿಕಲ್ ಹೆಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶುಕ್ರವಾರ ಮಧ್ಯಾಹ್ನ ಅವರು ತಮ್ಮ ಸಹೋದ್ಯೋಗಿ ದೇವೇಂದ್ರ ಕದಂ ಅವರೊಂದಿಗೆ ಮುಂಬೈಯಿಂದ ಮಂಗಳೂರಿನ ಸುರತ್ಕಲ್‌ ಕಾಲೇಜಿಗೆ ಕಾರಿನಲ್ಲಿ ಪ್ರಯಾಣ ಆರಂಭಿಸಿದ್ದರು. ದೂರದಿಂದ ಅವರನ್ನು ಹಿಂಬಾಲಿಸಿ ಈ ಕೃತ್ಯ ಎಸಗಲಾಗಿದೆ ಎನ್ನಲಾಗುತ್ತಿದೆ.

ಕಾರ್‌ ನಿಲ್ಲಿಸಿದ ತಕ್ಷಣ ದರೋಡೆಕೋರರು ಕಾರನ್ನು ಸುತ್ತುವರೆದರು. ಇಲ್ಲಿ ಸಹ ಪ್ರಯಾಣಿಕ ದೇವೇಂದ್ರ ಕದಂ ಅವರನ್ನು ಸಹ ತಪಾಸಣೆ ಮಾಡಿದರೂ ಏನನ್ನೂ ಕಸಿದುಕೊಳ್ಳಲಿಲ್ಲ. ನಂತರ ಕಾರಿನ ಡಿಕ್ಕಿಯನ್ನು ಪರಿಶೀಲಿಸಿ ಪರಾರಿಯಾಗಿದ್ದಾರೆ.

ನಂತರ ವೈಭವ ಅವರು ಅಳ್ನಾವರಕ್ಕೆ ತೆರಳಿ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಕಿತ್ತೂರು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್‌ ಹಾಗೂ ಹಿರಿಯ ಅಧಿಕಾರಿಗಳು ಶನಿವಾರ ಬೆಳಿಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲೇ ದರೋಡೆ ನಡೆದಿದ್ದರಿಂದ ಸುತ್ತಲಿನ ಗ್ರಾಮಗಳು ಹಾಗೂ ಪ್ರಯಾಣಿಕರಲ್ಲಿ ಆತಂಕ ಉಂಟಾಗಿದೆ. ಪೊಲೀಸರು ರಾತ್ರಿ ಪೆಟ್ರೊಲಿಂಗ್‌ ನಿಯೋಜಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.