ಸಾರಾಂಶ
ನರೇಗಾ ಕೂಲಿ ಕಾರ್ಮಿಕರಲ್ಲಿಯೂ ಮತದಾನ ಜಾಗೃತಿ ಮೂಡಿಸಲು ಚುನಾವಣಾ ಅಧಿಕಾರಿಗಳು ಮುಂದಾಗಿದ್ದಾರೆ.
ಇಂದರಪಾಶ ಚಿಂಚರಕಿ
ಕನ್ನಡಪ್ರಭ ವಾರ್ತೆ ಮಸ್ಕಿ2024ರ ಸಾರ್ವತ್ರಿಕ 18ನೇ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಮಸ್ಕಿ-59 ಕ್ಷೇತ್ರದಲ್ಲಿ ಶೇಕಡಾವಾರು ಮತದಾನ ಪ್ರಮಾಣ ಹೆಚ್ಚಿಸಲು ಮತ್ತು ಮತದಾರರಲ್ಲಿ ನೈತಿಕ ಮತದಾನದ ಕುರಿತು ಶಿಕ್ಷಣ ಹಾಗೂ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ.
ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮಸ್ಕಿ ವಿಧಾನಸಾಭಾ ಕ್ಷೇತ್ರದ ಮಸ್ಕಿ ಪಟ್ಟಣ, ಗ್ರಾಮೀಣ ಭಾಗದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ಪಟ್ಟಣ ಪ್ರದೇಶಗಳಲ್ಲಿಯೇ ಮತದಾನ ಪ್ರಮಾಣ ಕಡಿಮೆಯಾಗಿರುವುದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇಕಡವಾರು ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗದ ಸೂಚನೆಯಂತೆ ಇಲ್ಲಿನ ಅಧಿಕಾರಿಗಳು ಅತ್ಯಂತ ಕಡಿಮೆ ಮತದಾನ ಆಗಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮತದಾನ ಹೆಚ್ಚಿಸಲು ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಸ್ಟಿಕ್ಕರ್‌ಗಳನ್ನು ಹಚ್ಚುವುದು, ಮೆಹಂದಿ ಕಾರ್ಯಕ್ರಮ ಹಾಗೂ ಸೈಕಲ್ ಜಾಥಾ, ಮದುವೆ ಸಮಾರಂಭಗಳಲ್ಲಿ ಜನಸಾಮಾನ್ಯರಿಗೆ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು, ಹಾಡು, ಬೀದಿ ನಾಟಕ, ಕಿರು ನಾಟಕ ಹಾಗೂ ನರೇಗಾ ಕೂಲಿ ಕಾರ್ಮಿಕರಲ್ಲಿಯೂ ಮತದಾನ ಜಾಗೃತಿ ಮೂಡಿಸಲು ಚುನಾವಣಾ ಅಧಿಕಾರಿಗಳು ಮುಂದಾಗಿದ್ದಾರೆ.ಸಾಮಾಜಿಕ ಜಾಲತಾಣಗಳ ಮೊರೆ
ಕಳೆದ ಹಲವಾರು ಚುನಾವಣೆಗಳಲ್ಲಿ ಮತದಾನ ಪ್ರಮಾಣ ಏರಿಕೆ ಮಾಡಲು ಚುನಾವಣಾ ಅಧಿಕಾರಿಗಳು ಸಾಕಷ್ಟು ಪ್ರಯತ್ನ ನಡೆಸಿದ್ದರೂ ಸಹ ಶೇಕಡವಾರು ಮತದಾನ ಪ್ರಮಾಣ ಏರಿಕೆಯೇ ಆಗಿಲ್ಲ. ಮತದಾರರನ್ನು ಹೇಗಾದರೂ ಮಾಡಿ ಮತಗಟ್ಟೆ ಕೇಂದ್ರಗಳಿಗೆ ಕರೆತರಲು ಶಕ್ತಿ ಮೀರಿ ಪ್ರಯತ್ನ ನಡೆಸುತ್ತಿದ್ದು ಈ ಬಾರಿಯ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಗಳು ಯುವ ಸಮುದಾಯವನ್ನು ಮತಗಟ್ಟೆ ಕೇಂದ್ರಗಳಿಗೆ ಸೆಳೆಯುವುದಕ್ಕಾಗಿ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ.ಮತದಾನ ಪ್ರಮಾಣ:
ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಶೇಕಡ 62ರಷ್ಟು ಮತದಾನವಾಗಿತ್ತು. ಈ ಬಾರಿಯ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಅಧಿಕಾರಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದು, ಮತದಾರ ಪ್ರಭು ಹೇಗೆ ಸ್ಪಂದಿಸುತ್ತಾನೆಂದು ಕಾದು ನೋಡಬೇಕಿದೆ.