ಕುಂದಾಪುರಕ್ಕೆ ಸಿಐಎಸ್‌ಎಫ್‌ ನೇತೃತ್ವದ ಸೈಕಲ್‌ ಜಾಥಾ ಆಗಮನ

| Published : Mar 27 2025, 01:04 AM IST

ಸಾರಾಂಶ

ಸಿಐಎಸ್‌ಎಫ್ ನೇತೃತ್ವದಲ್ಲಿ ‘ಸುರಕ್ಷಿತ ತಟ, ಸಮೃದ್ಧ ಭಾರತ’ ಪರಿಕಲ್ಪನೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಗುಜರಾತ್‌ನಿಂದ ಕನ್ಯಾಕುಮಾರಿ ತನಕ ಆರಂಭಗೊಂಡಿರುವ ಸೈಕಲ್ ಜಾಥಾ ಬುಧವಾರ ಕುಂದಾಪುರಕ್ಕೆ ಆಗಮಿಸಿತು.

ಕನ್ನಡಪ್ರಭ ವಾರ್ತೆ ಕುಂದಾಪುರ

ದೇಶದಲ್ಲಿ ಶೇ.95 ರಷ್ಟು ವ್ಯಾಪಾರ ವಹಿವಾಟು ಸಮುದ್ರ ಮಾರ್ಗದ ಮೂಲಕವೇ ನಡೆಯುತ್ತದೆ. ಹೀಗಾಗಿ ಸಮುದ್ರತೀರದ ಭದ್ರತೆ ನಿಶ್ಚಿತವಾಗಿದ್ದರೆ ದೇಶದ ಸಮೃದ್ಧಿಗೆ ಇನ್ನಷ್ಟು ವೇಗ ಸಿಗಲಿದೆ. ಕರಾವಳಿ ತೀರ ಭದ್ರತೆಯನ್ನು ಶಾಶ್ವತವಾಗಿ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಸಿಐಎಸ್‌ಎಫ್ ಡೆಪ್ಯೂಟಿ ಕಮಾಂಡೆಂಟ್ ವಿಭು ಸಿಂಗ್ ಪ್ರತಿಹಾರ್ ಹೇಳಿದ್ದಾರೆ.

ಸಿಐಎಸ್‌ಎಫ್ ನೇತೃತ್ವದಲ್ಲಿ ‘ಸುರಕ್ಷಿತ ತಟ, ಸಮೃದ್ಧ ಭಾರತ’ ಪರಿಕಲ್ಪನೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಗುಜರಾತ್‌ನಿಂದ ಕನ್ಯಾಕುಮಾರಿ ತನಕ ಆರಂಭಗೊಂಡಿರುವ ಸೈಕಲ್ ಜಾಥಾ ಬುಧವಾರ ಕುಂದಾಪುರಕ್ಕೆ ಆಗಮಿಸಿದ ಬಳಿಕ ಸೇನಾಭಿಮಾನಿ ಬಳಗದ ವತಿಯಿಂದ ಇಲ್ಲಿನ ಮೊಗವೀರ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.ಕರಾವಳಿ ಮಾತ್ರವಲ್ಲದೆ ಇತರೆ ಭಾಗಗಳಲ್ಲಿ ಏನೇ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಗಮನಕ್ಕೆ ಬಂದ ಕೂಡಲೇ ತಕ್ಷಣವೇ ತಂದೆ-ತಾಯಿ ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ಮುಟ್ಟಿಸಬೇಕು. ಯುವ ಜನತೆ ಯಾವುದೇ ಕಾರಣಕ್ಕೂ ಮಾದಕ ವ್ಯಸನಗಳಿಗೆ ಬಲಿಯಾಗಬಾರದು ಎಂದರು.

ರ‍್ಯಾಲಿಯಲ್ಲಿ ಸುಮಾರು 125 ಸೈಕ್ಲಿಸ್ಟ್‌ಗಳು ಭಾಗಿಯಾಗಿದ್ದು, ಪಶ್ಚಿಮ ಭಾರತವನ್ನು ಕೇಂದ್ರೀಕರಿಸಿಕೊಂಡು ಗುಜರಾತ್, ದೀಯು ದಾಮನ್, ಮಹಾರಾಷ್ಟ್ರ, ಗೋವಾ ಸಂಚರಿಸಿ ಇದೀಗ ಕರ್ನಾಟಕಕ್ಕೆ ಬಂದಿದ್ದೇವೆ. ಇಲ್ಲಿಂದ ಕೇರಳ ಮಾರ್ಗವಾಗಿ 31 ರೊಳಗೆ ಕನ್ಯಾಕುಮಾರಿ ತಲುಪಲಿದ್ದೇವೆ. ನಮ್ಮ ಇನ್ನೊಂದು ತಂಡ ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರ ಪ್ರದೇಶ, ಪುದುಚೇರಿ ಮಾರ್ಗವಾಗಿ ಕನ್ಯಾಕುಮಾರಿಗೆ ಮಾ.31 ರಂದು ತಲುಪಲಿದೆ ಎಂದರು.

ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ದೇಶದ ಐಕ್ಯತೆ, ಭದ್ರತೆಯ ದ್ಯೇಯವನ್ನಿಟ್ಟುಕೊಂಡು ಗುಜರಾತಿನಿಂದ ಕನ್ಯಾಕುಮಾರಿಯ ತನಕ ಕ್ರಮಿಸಿ ಸಿಐಎಸ್‌ಎಫ್ ಯೋಧರು ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.

ಸಹಾಯಕ ಕಮಾಂಡೆಂಟ್‌ಗಳಾದ ರಾಮಮೂರ್ತಿ ಕೌಂಡಲ್, ಸಾಯಿ ನಾಯಕ್, ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಮಹೇಶ್ಚಂದ್ರ, ಡಿವೈಎಸ್ಪಿ ಎಚ್.ಡಿ ಕುಲಕರ್ಣಿ, ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ಪುರಸಭೆಯ ಅಧ್ಯಕ್ಷ ಮೋಹನ್‌ದಾಸ್ ಶೆಣೈ, ನಗರ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತಾ, ಪುರಸಭೆಯ ಮುಖ್ಯಾಧಿಕಾರಿ ಆನಂದ್ ಜೆ, ಮೊಗವೀರ ಯುವ ಸಂಘಟನೆಯ ಉದಯ್ ಕುಮಾರ್ ಹಟ್ಟಿಯಂಗಡಿ ಇದ್ದರು.

ಸೈಕಲ್ ರ‍್ಯಾಲಿಯ ಮೂಲಕ ಕುಂದಾಪುರಕ್ಕೆ ಆಗಮಿಸಿದ ಯೋಧರನ್ನು ಕುಂದಾಪುರದ ಸಂಗಮ್ ಜಂಕ್ಷನ್‌ನಲ್ಲಿ ಸ್ವಾಗತಿದ ಬಳಿಕ, ಭಂಡಾರ್ಕಾರ್ಸ್ ಹಾಗೂ ಬಿ.ಬಿ ಹೆಗ್ಡೆ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿಗಳು ದೇಶಾಭಿಮಾನದ ಘೋಷಣೆಗಳನ್ನು ಕೂಗುತ್ತಾ ಚಂಡೆವಾದ್ಯಗಳ ಭವ್ಯ ಮೆರವಣಿಗೆಯೊಂದಿಗೆ ಚಿಕನ್‌ಸಾಲ್ ರಸ್ತೆಯ ಮಾರ್ಗವಾಗಿ ಮೊಗವೀರ ಭವನಕ್ಕೆ ಬರಮಾಡಿಕೊಂಡರು.

ಸೇನಾಭಿಮಾನಿ ಬಳಗದ ರಾಜೇಶ್ ಕಾವೇರಿ ಸ್ವಾಗತಿಸಿದರು. ಭಂಡಾರ್ಕಾರ್ಸ್ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿನಿ ಸಿಂಧು ನಿರೂಪಿಸಿದರು.