ಕನ್ನಡಪ್ರಭ ವಾರ್ತೆ ಹಾಸನದೇಶದ ಪ್ರಮುಖ ಕೈಗಾರಿಕಾ ಸಂಸ್ಥೆಗಳು, ವಿಮಾನ ನಿಲ್ದಾಣಗಳು, ಬಂದರುಗಳು ಹಾಗೂ ರಾಷ್ಟ್ರೀಯ ಮಹತ್ವದ ಸ್ಥಳಗಳ ಭದ್ರತೆಯಲ್ಲಿ ಕೇಂದ್ರಿಯ ಔದ್ಯೋಗಿಕ ಸುರಕ್ಷಾ ಪಡೆ (ಸಿ.ಐ.ಎಸ್.ಎಫ್.) ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಡೆಪ್ಯೂಟಿ ಕಮಾಂಡೆಂಟ್ ಎಂ.ಸಿ.ಎಫ್. ಅಧಿಕಾರಿ ಆಶೀಸ್ ದಾಲಿಯನ್ ಶ್ಲಾಘನೆ ವ್ಯಕ್ತಪಡಿಸಿದರು.ನಗರದ ಹೊರವಲಯ ಬೆಂಗಳೂರು ರಸ್ತೆ ಕೆಂಚಟ್ಟಹಳ್ಳಿ ಬಳಿ ನಿವೃತ್ತ ಯೋಧರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಿಐಎಸ್‌ಎಫ್ ೫೭ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಮೊದಲು ಧ್ವಜಾರೋಹಣ ನೆರವೇರಿಸಿ ನಂತರ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಆಂತರಿಕ ಭದ್ರತೆಯನ್ನು ಕಾಪಾಡುವಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ದೇಶದಾದ್ಯಂತ ಇರುವ ವಿಮಾನ ನಿಲ್ದಾಣಗಳು, ಸಮುದ್ರ ಬಂದರುಗಳು, ಮಹತ್ವದ ಕೈಗಾರಿಕಾ ಘಟಕಗಳು, ಸಂಸತ್ ಭವನ ಸೇರಿದಂತೆ ಹಲವು ವಿಐಪಿ ಭದ್ರತಾ ವ್ಯವಸ್ಥೆಗಳಲ್ಲಿ ಈ ಪಡೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಸಿಐಎಸ್‌ಎಫ್ ಅನ್ನು ೧೯೬೯ರಲ್ಲಿ ಆಗಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ಸ್ಥಾಪಿಸಿದರು. ಆರಂಭದಲ್ಲಿ ಕೈಗಾರಿಕಾ ಸಂಸ್ಥೆಗಳ ಭದ್ರತೆಯ ಉದ್ದೇಶದಿಂದ ಸ್ಥಾಪನೆಯಾದ ಈ ಪಡೆ, ನಂತರ ದೇಶದ ವಿವಿಧ ಪ್ರಮುಖ ಕ್ಷೇತ್ರಗಳ ಭದ್ರತೆಯನ್ನು ಹೊತ್ತುಕೊಂಡು ಇಂದು ರಾಷ್ಟ್ರದ ಪ್ರಮುಖ ಸುರಕ್ಷಾ ಪಡೆಯಾಗಿ ಬೆಳೆದಿದೆ ಎಂದು ಕಿವಿಮಾತು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ದೇಶದ ಭದ್ರತಾ ವ್ಯವಸ್ಥೆಯಲ್ಲಿ ಸಿಐಎಸ್‌ಎಫ್ ಮಹತ್ವ ಹೆಚ್ಚುತ್ತಲೇ ಬಂದಿದೆ. ವಿಮಾನ ನಿಲ್ದಾಣಗಳ ಭದ್ರತೆ, ಬಂದರುಗಳ ಸುರಕ್ಷತೆ, ಪ್ರಮುಖ ವಿದ್ಯುತ್ ಉತ್ಪಾದನಾ ಘಟಕಗಳು, ಅಣುಶಕ್ತಿ ಕೇಂದ್ರಗಳು ಸೇರಿದಂತೆ ಹಲವಾರು ಸೂಕ್ಷ್ಮ ಪ್ರದೇಶಗಳಲ್ಲಿ ಈ ಪಡೆ ತನ್ನ ಸೇವೆಯನ್ನು ನೀಡುತ್ತಿದೆ. ಸಾರ್ವಜನಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಆಸ್ತಿ ರಕ್ಷಣೆ ಎಂಬ ಎರಡು ಪ್ರಮುಖ ಗುರಿಗಳನ್ನು ಹೊಂದಿಕೊಂಡು ಸಿಐಎಸ್‌ಎಫ್ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿಯೂ ಈ ಪಡೆ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸುನಾಮಿ ಸೇರಿದಂತೆ ಅನೇಕ ವಿಪತ್ತುಗಳ ಸಮಯದಲ್ಲಿ ರಕ್ಷಣಾ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡು ಜನರ ಜೀವ ರಕ್ಷಣೆಗಾಗಿ ಮಹತ್ವದ ಕೊಡುಗೆ ನೀಡಲಾಗಿದೆ. ಸಂಕಷ್ಟದ ಸಂದರ್ಭಗಳಲ್ಲಿ ಜನರಿಗೆ ನೆರವಾಗುವುದು ಕೂಡ ಈ ಪಡೆಯ ಪ್ರಮುಖ ಕರ್ತವ್ಯಗಳಲ್ಲಿ ಒಂದಾಗಿದೆ. ಮಿಲಿಟರಿ ಪಡೆಗಳು ಯುದ್ಧ ಸಮಯದಲ್ಲಿ ದೇಶವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸಿದರೆ, ಸಿಐಎಸ್‌ಎಫ್ ಸೇರಿದಂತೆ ಭದ್ರತಾ ಪಡೆಗಳು ಶಾಂತಿ ಕಾಲದಲ್ಲಿಯೂ ದೇಶದ ಆಂತರಿಕ ಭದ್ರತೆಯನ್ನು ಕಾಪಾಡುವ ಮಹತ್ವದ ಜವಾಬ್ದಾರಿಯನ್ನು ಹೊತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ನಿವೃತ್ತ ಯೋಧರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು. ಅವರ ಸೇವೆಯನ್ನು ಸಮಾಜ ಯಾವತ್ತೂ ಮರೆಯಬಾರದು ಎಂದು ನೆನಪಿಸಿದರು.ಕಾರ್ಯಕ್ರಮದಲ್ಲಿ ಸಿಐಎಸ್‌ಎಫ್ ೫೭ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಅಧ್ಯಕ್ಷ ಹನುಮಂತಪ್ಪ, ಗೌರವಾಧ್ಯಕ್ಷ ಶೇಖ್ ನವಾಬ್ ಖಾನ್, ಸಿ.ಎಫ್‌.ಎಸ್. ಅಧ್ಯಕ್ಷ ನಾಗೇಶ್, ಬೆಂಗಳೂರು ರಾಜ್ಯ ಸಮಿತಿ ಕಾರ್ಯದರ್ಶಿ ಶಿವಲಿಂಗಪ್ಪ ಸಂಪಗಾವಿ, ಮುಕುಂದಸ್ವಾಮಿ, ಖಜಾಂಚಿ ನಿಂಗೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.