ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮರಳು ಬಗೆತ, ಅತಿಯಾದ ನೀರಿನ ಬಳಕೆಯಿಂದಾಗಿ ನದಿ ಪಾತ್ರಗಳು ಬರಡಾಗುತ್ತಿದ್ದರೆ ಇನ್ನೊಂದೆಡೆ ನಗರಗಳೇ ನದಿ ಮಾಲಿನ್ಯದ ಫ್ಯಾಕ್ಟರಿಗಳಾಗುತ್ತಿವೆ ಎಂದು ವೃಕ್ಷ ಲಕ್ಷ ಆಂದೋಲನದ ರಾಜ್ಯ ಸಂಚಾಲಕ ಅನಂತ ಹೆಗಡೆ ಅಶೀಸರ ವಿಷಾದ ವ್ಯಕ್ತಪಡಿಸಿದರು.ಅವರು ಇಲ್ಲಿನ ಸರ್ಜಿ ಮಕ್ಕಳ ಆಸ್ಪತ್ರೆ ಎದುರು ಹೊಯ್ಸಳ ಫೌಂಡೇಶನ್ ಆವರಣದಲ್ಲಿ ನಿರ್ಮಲ ತುಂಗಾ ಭದ್ರಾ ಅಭಿಯಾನ, ಕರ್ನಾಟಕದ ಸಂಪರ್ಕ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ನಿರ್ಮಲ ತುಂಗಾ ಭದ್ರಾ ಅಭಿಯಾನದ ತಂಡವು ನವೆಂಬರ್ 1ರಿಂದ ಶೃಂಗೇರಿಯಿಂದ ಕಿಷ್ಕಿಂದೆಯವರೆಗೆ ತುಂಗಭದ್ರಾ ನದಿಗುಂಟ ಬೃಹತ್ ಸ್ವಚ್ಛತಾ ಜಾಗೃತಿ ಪಾದಯಾತ್ರೆ ಹಮ್ಮಿಕೊಂಡಿರುವುದು ಶ್ಲಾಘನೀಯ. ಇದರಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ಆಶಿಸಿದರು.
1987ರಲ್ಲಿಯೇ ಖ್ಯಾತ ಪರಿಸರವಾದಿಗಳಾಗಿದ್ದ ಡಾ.ಶಿವರಾಮ ಕಾರಂತ, ಡಾ.ಕುಸುಮಾ ಸೊರಬ, ಪ್ರೊ.ಮಾಧವ ಗಾಡ್ಗೀಳ್ ಮತ್ತಿತರರು ಹಮ್ಮಿಕೊಂಡಿದ್ದ 100 ದಿನಗಳ ಪಶ್ಚಿಮ ಘಟ್ಟ ಉಳಿಸಿ ಆಂದೋಲನದ ಪಾದಯಾತ್ರೆಯಲ್ಲಿ ತಾವೂ ಭಾಗಿ ಯಾಗಿದ್ದನ್ನು ಸ್ಮರಿಸಿದ ಅಶೀಸರ್, ತದ ನಂತರ ತಮ್ಮ ನೇತೃತ್ವದಲ್ಲೇ ಬೇಡ್ತಿ ಅಘನಾಶಿನಿ ನದಿ ತಿರುವು ಯೋಜನೆ ಹರಿಹರ ಪಾಲಿ ಪೈಬರ್ಸ್ ತ್ಯಾಜ್ಯದ ವಿರುದ್ಧದ ಹೋರಾಟಗಳಂತಹ ಅನೇಕ ಪರಿಸರ ಉಳಿಸಿ ಹೋರಾಟಗಳು ನಡೆದರೂ ಉನ್ನತಾಧಿ ಕಾರಿಗಳು ತಮ್ಮದೇ ಧೋರಣೆಯನ್ನು ಮುಂದುವರಿಸಿದ್ದಾರೆ ಎಂದು ಕಿಡಿಕಾರಿದರು.2011-12ರಲ್ಲಿ ಕಳಸಾ ಬಂಡೂರಿ ಯೋಜನೆ, ಬಳಿಕ ಭದ್ರಾವತಿಯಲ್ಲಿ ಭದ್ರಾ ನದಿಗೆ ಅಲ್ಲಿಯ ಫ್ಯಾಕ್ಟರಿಗಳಿಂದ ಬಿಡುತ್ತಿದ್ದ ತ್ಯಾಜ್ಯಗಳ ವಿರುದ್ಧ ನಡೆಸಿದ ಹೋರಾಟಗಳನ್ನು ಅವರು ಸ್ಮರಿಸಿದರು.
ಕೇಂದ್ರ ರಾಜ್ಯ ಸರ್ಕಾರಗಳು 48 ಔಷಧ ಕಂಪನಿಗಳನ್ನು ಬಂದ್ ಮಾಡಲು ಆದೇಶಿಸಿದ್ದರೂ ಮಾಲಿನ್ಯ ನಿಯಂತ್ರಣ ಮಂಡಳಿ ಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಔಷಧಿಗಳ ಉತ್ಪಾದನೆ ಇನ್ನೂ ಮುಂದುವರಿಯುತ್ತಲೇ ಇದೆ. ಮಾಲಿನ್ಯ ನಿಯಂತ್ರಣ ಮಂಡಳಿಯವರು ನೋಟಿಸ್ ಕೊಡುವುದನ್ನು ಬಿಟ್ಟರೆ ತಮಗೆ ಬೇರೇನೂ ಜವಾಬ್ದಾರಿ ಇಲ್ಲ ಎಂದುಕೊಂಡಿದ್ದಾರೆಂದು ಅಧಿಕಾರಿ ಗಳ ವಿರುದ್ಧ ಹರಿಹಾಯ್ದರು.ಮಾಜಿ ಶಾಸಕ ಎಸ್.ರುದ್ರೇಗೌಡ ಮಾತನಾಡಿ, ಪತ್ರಿಕೆಗಳಲ್ಲಿ ಕೋಟಿ ಸಸಿ ನೆಡುವುದನ್ನು ನೋಡಿದರೆ ಇಷ್ಟೊತ್ತಿಗೆ ಎಲ್ಲ ಕಡೆ ಮರ ಬೆಳೆದು ಹಸಿರು ನಳನಳಿಸಬೇಕಿತ್ತು. ಅದು ಕೇವಲ ಔಪಚಾರಿಕವಾಗಿದೆ. ನದಿಗಳು ಕಲುಷಿತಗೊಳ್ಳುತ್ತಿವೆ. ಕೇಂದ್ರ ಸರ್ಕಾರದ ಸಹಯೋಗದಲ್ಲಿ 30 ಕೋಟಿ ರು.ವೆಚ್ಚದಲ್ಲಿ ಮಾಲಿನ್ಯ ತಡೆ ಯೋಜನೆ ರೂಪುಗೊಳ್ಳುತ್ತಿದೆ. ಅಭಿಯಾನಕ್ಕೆ ಸಾರ್ವ ಜನಿಕರ ಪೂರ್ಣ ಸಹಕಾರ ಇದೆ ಎಂದರು.
ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಮಾತನಾಡಿ, ದೇಶದಲ್ಲಿ 90 ಲಕ್ಷ ಜನರು ಹಸಿವಿನಿಂದ ಬಳಲಿ ಮರಣ ಹೊಂದಿದರೆ, ಅದರ 2-3ಪಟ್ಟು ಹೆಚ್ಚು ಜನ ಕಲುಷಿತ ನೀರಿನ ಸೇವನೆಯಿಂದ ಸಾಯುತ್ತಿದ್ದಾರೆ. ಬೆಳೆಗಳಿಗೆ ಸಿಂಪಡಿಸುವ ಕ್ರಿಮಿ ನಾಶಕ ಔಷಧಿಗಳು ನದಿಗೆ ಸೇರಿ ನೀರು ಕಲುಷಿತವಾಗುತ್ತಿದೆ. ಸದರಿ ಅಭಿಯಾನಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು. ನದಿ ನೀರು ಕಲುಷಿತಕ್ಕೆ ಸಂಬಂಧಿಸಿದಂತೆ ಶಾಸನ ಸಭೆಯಲ್ಲಿ ಚರ್ಚಿಸುವೆ ಎಂದರು.ಪ್ರಾಸ್ತಾವಿಕ ನುಡಿಗಳನ್ನಾಡಿದ ಅಭಿಯಾನದ ಪ್ರಮುಖ ಎಂ.ಶಂಕರ್, ಇದು ಯಾವುದೇ ರಾಜಕೀಯ ಪ್ರೇರಿತ ಅಥವಾ ಯಾರದೇ ವಿರುದ್ಧವಾದ ಪಾದಯಾತ್ರೆಯಲ್ಲ. ತುಂಗಾ ಭದ್ರಾ ನದಿಗುಂಟ ವಾಸಿಸುವ ಜನರೊಂದಿಗೆ ಸಂವಾದ ಮಾಡುವ, ಜನ ಜಾಗೃತಿ, ಸಹಜ ಪಾದಯಾತ್ರೆ. ನದಿನೀರು ಕಲುಷಿತವಾಗಿದ್ದರ ಬಗ್ಗೆ ಈಗಾಗಲೇ ರಾಜ್ಯ ಸಕಾರ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರ ಮೂಲಕ ಕೇಂದ್ರ ಸರ್ಕಾರದ ಗಮನವನ್ನೂ ಸೆಳೆಯಲಾಗಿದೆ. ತುಂಗಭದ್ರಾ ನದಿ ತಟ್ ಎಲ್ಲ ಮಠಾಧೀಶರ, ಜನಪ್ರತಿನಿಧಿಗಳ, ಶಾಲಾ ಕಾಲೇಜುಗಳ, ಸಾರ್ವಜನಿಕರ ಬೆಂಬಲ ಪಡೆಯಲಾಗಿದೆ ಎಂದು ತಿಳಿಸಿದರು.
ಶ್ರೀಪಾದ ಬಿಚ್ಚುಗತ್ತಿ, ರಮೇಶ್ ಹೆಗಡೆ, ಗಿರೀಶ್ ಪಟೇಲ್, ಎಸ್.ಬಿ.ಅಶೋಕ ಕುಮಾರ್, ಕಾಂತೇಶ ಕದರಮಂಡಲಗಿ, ದಿನೇಶ್ ಕುಮಾರ್, ಸಿ.ಎಂ.ಮಂಜುನಾಥ, ಮೋಹನ ಬಾಳಿಕಾಯಿ, ತ್ಯಾಗರಾಜ ಮಿತ್ಯಾಂತ, ಬಾಲುನಾಯ್ಡು ಮತ್ತಿತರರು ಇದ್ದರು.