ಸಾರಾಂಶ
ಮಾನವ ಸರಪಳಿ ಮಾಡುವ ಸಂದರ್ಭದಲ್ಲಿ ಯಾವುದೇ ಅವ್ಯವಸ್ಥೆ ಉಂಟಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ಕನ್ನಡಪ್ರಭ ವಾರ್ತೆ ರಾಮದುರ್ಗ
ಮಾನವ ಸರಪಳಿ ಮಾಡುವ ಸಂದರ್ಭದಲ್ಲಿ ಯಾವುದೇ ಅವ್ಯವಸ್ಥೆ ಉಂಟಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಕೆ.ಚಂದರಗಿ ಗ್ರಾಮದಲ್ಲಿ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರದಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಅಧಿಕಾರಿಗಳು ಗೈರು ಉಳಿಯುವುದು ಸಾಮಾನ್ಯವಾಗಿದೆ. ಭಾನುವಾರ ಯಾರೂ ಗೈರು ಉಳಿಯುವ ಹಾಗಿಲ್ಲ. ಗೈರು ಉಳಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಅವಕಾಶ ನೀಡಬಾರದು ಎಂದು ಎಚ್ಚರಿಸಿದರು.
ತಾಲೂಕಿನ ದಾ. ಸಾಲಾಪುರದಿಂದ ಆರಂಭವಾಗುವ ಮಾನವ ಸರಪಳಿ ಕೊನೆಯ ಹಳ್ಳಿ ಎಂ.ಚಂದರಗಿ ಕ್ರಾಸ್‌ವರೆಗೆ 25 ಕಿ.ಮೀ ಮಾನವ ಸರಪಳಿ ನಿರ್ಮಿಸಲಾಗುವುದು. ಇದಕ್ಕೆ ತಾಲೂಕು ಆಡಳಿತ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಎಲ್ಲರೂ ನಿಗದಿತ ಸಮಯಕ್ಕೆ ಬರಬೇಕೆಂದು ತಹಸೀಲ್ದಾರ ಪ್ರಕಾಶ ಹೊಳೆಪ್ಪಗೋಳ ಹೇಳಿದರು.ತಾಲೂಕು ಮಟ್ಟದ ಅಧಿಕಾರಿಗಳು, ಶಿಕ್ಷಕರು, ಸಿಆರ್‌ಸಿ ಸಿಬ್ಬಂದಿ, ಗ್ರಾಮ ಪಂಚಾಯತಿ ಪಿಡಿಒ, ಅಧ್ಯಕ್ಷರು, ಉಪಾಧ್ಯಕ್ಷರು, ಆಶಾ, ಅಂಗನವಾಡಿ ನೌಕರರು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಸಭೆಯಲ್ಲಿ ಇದ್ದರು.
ವೇದಿಕೆಯಲ್ಲಿ ತಾಪಂಇಒ ಪ್ರವೀಣಕುಮಾರ ಸಾಲಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಶುರಾಮ ಪತ್ತಾರ, ಸಿಪಿಐ ಈರಣ್ಣ ಪಟ್ಟಣಶೆಟ್ಟಿ, ಚಂದರಗಿ ಕ್ರೀಡಾ ವಸತಿ ಶಾಲೆಯ ಪ್ರಾಚಾರ್ಯ ಸಂತೋಷ ಮಿರಜಕರ ಇತರರು ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ. ಬಳಿಗಾರ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಆನಂದತೀರ್ಥ ಜೋಶಿ ನಿರೂಪಿಸಿ, ವಂದಿಸಿದರು.