ಶಿರಹಟ್ಟಿ: ಜನಗಣತಿ ದೇಶದ ಜನಸಂಖ್ಯೆ, ಶಿಕ್ಷಣ, ಉದ್ಯೋಗ, ವಾಸ ಸ್ಥಿತಿ ಮುಂತಾದ ಮಾಹಿತಿಗಳನ್ನು ಸಂಗ್ರಹಿಸುವ ಪ್ರಮುಖ ಪ್ರಕ್ರಿಯೆ. ಈ ಮಾಹಿತಿಯಿಂದ ಸರ್ಕಾರ ಯೋಜನೆಗಳನ್ನು ರೂಪಿಸಲು, ಅಭಿವೃದ್ದಿ ಕಾರ್ಯಗಳನ್ನು ಸುಧಾರಿಸಲು ಸಹಾಯವಾಗುತ್ತದೆ. ಆದ್ದರಿಂದ ಸರಿಯಾದ ಮಾಹಿತಿ ನೀಡಬೇಕು. ಗಣತಿ ಸಿಬ್ಬಂದಿಗೆ ಸಹಕರಿಸುವ ಮೂಲಕ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಕರೆ ನೀಡಿದರು.
ಶನಿವಾರ ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಏಪ್ರಿಲ್ ೧ರಿಂದ ಆರಂಭವಾಗಿರುವ ಸ್ವಯಂ ಗಣತಿಯಲ್ಲಿ ನಮ್ಮ ಸಹಕಾರವೇ ದೇಶದ ಅಭಿವೃದ್ದಿಗೆ ಅಡಿಪಾಯವಾಗಿದೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ಭಾರತ ಸರ್ಕಾರ ಜನಗಣತಿ ಮಾಡುತ್ತದೆ. ಅಂತೆಯೇ ಇದೀಗ ೨೦೨೭ರ ಜನಗಣತಿ ಏಪ್ರಿಲ್ ೧ರಿಂದ ಆರಂಭವಾಗಿ ಏಪ್ರಿಲ್ ೧೫ರ ವರೆಗೆ ಸ್ವಯಂ ಗಣತಿ ನಂತರ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಗಣತಿ ಮಾಡಲಿದ್ದಾರೆ ಎಂದರು.೨೦೧೧ರ ಜನಗಣತಿ ನಂತರ ತಂತ್ರಜ್ಞಾನದ ಬೆಳವಣಿಗೆಯಿಂದ ಗಣತಿ ಪ್ರಕ್ರಿಯೆಯಲ್ಲಿ ಮೊಬೈಲ್ ಆ್ಯಪ್‌ಗಳನ್ನು ಬಳಸಲಾಗುತ್ತಿದೆ. ಈಗ ಡಿಜಿಟಲ್ ಆ್ಯಪ್‌ಗಳ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದರಿಂದ ಮಾಹಿತಿ ಸಂಗ್ರಹಣೆ ವೇಗವಾಗಿ ಮತ್ತು ನಿಖರವಾಗಿ ಆಗುತ್ತದೆ. ಗ್ರಾಮೀಣ ಪ್ರದೇಶಕ್ಕೆ ನನ್ನನ್ನು ಚಾರ್ಜ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ೧೨೭ ಬ್ಲಾಕ್ ರಚನೆ ಮಾಡಲಾಗಿದೆ. ಪ್ರತಿ ಬ್ಲಾಕ್‌ಗೆ ಒಬ್ಬ ಗಣತಿದಾರನಿಗೆ 150ರಿಂದ 200 ಮನೆಗಳು ಬರುವ ಹಾಗೆ ಬ್ಲಾಕ್ ರಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕಾಯ್ದಿರಿಸಿದ 17 ಜನ ಗಣತಿದಾರರಿದ್ದಾರೆ. 6 ಗಣತಿದಾರರಿಗೆ ಒಬ್ಬರಂತೆ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಒಟ್ಟು 21 ಜನ ಮೇಲ್ವಿಚಾರಕರಿದ್ದಾರೆ. ಗ್ರಾಮೀಣ ಪ್ರದೇಶಕ್ಕೆ ಒಟ್ಟು 171 ಗಣತಿದಾರರನ್ನು ನೇಮಕ ಮಾಡಲಾಗಿದೆ. ಭಾರತ ಜನಗಣತಿ ಆಯೋಗದಿಂದ ಜಾಗೃತಿ ಮೂಡಿಸಲಾಗುತ್ತಿದೆ. ಸ್ಥಳೀಯವಾಗಿ ಕೂಡ ಧ್ವನಿ ವರ್ಧಕಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.ದೇಶದ ಜನಸಂಖ್ಯೆ ಮಾಹಿತಿ ಪಡೆದು ಅದಕ್ಕನುಗುಣವಾಗಿ ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳಿಗನುಸಾರ ನೀತಿಗಳನ್ನು ರೂಪಿಸಲು ಗಣತಿಅಂಕಿ ಅಂಶಗಳು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲ ಜನರು ಜನಗಣತಿಯಲ್ಲಿ ಪಾಲ್ಗೊಳ್ಳಬೇಕಿದೆ. ಪ್ರಸ್ತುತ ಏಪ್ರಿಲ್ ೧ರಿಂದ ೧೫ರ ವರೆಗೆ ಸ್ವಯಂ ಗಣತಿ ಆರಂಭವಾಗಿದ್ದು ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕ ವಿವರಗಳನ್ನು ದಾಖಲಿಸಬೇಕಿದೆ. ಈ ದಾಖಲೆಗಳನ್ನು ಅತ್ಯಂತ ಗೌಪ್ಯವಾಗಿರಿಸಲಾಗುವುದು ಮತ್ತು ಇದು ಸರ್ಕಾರದ ಯೋಜನೆಗಳ ರೂಪಿಸುವ ಉದ್ದೇಶಕ್ಕೆ ಮಾತ್ರ ಬಳಕೆ ಆಗಲಿದೆ ಎಂದರು.
ತಮ್ಮ ಮೊಬೈಲ್‌ನಲ್ಲಿ ಲಿಂಕ್ ತೆರೆದು ಅಲ್ಲಿ ತಮ್ಮ ಕುಟುಂಬ ಮುಖ್ಯಸ್ಥರ ವಿವರಗಳನ್ನು ದಆಖಲಿಸಬೇಕಿದೆ. ಕೇವಲ ೩೩ ಪ್ರಶ್ನೆಗಳಿಗೆ ೩ ನಿಮಿಷದಲ್ಲಿ ಉತ್ತರಿಸಿ ಗಣತಿ ಕಾರ್ಯವನ್ನು ಸುಲಭವಾಗಿ ಯಶಸ್ವಿಯಾಗಿ ಪೂರ್ಣಗೊಳಿಸಬಹುದು. ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಒಂದು ಐಡಿ ನಂಬರ್ ಬರುತ್ತದೆ. ಅದನ್ನು ಸ್ಕ್ರೀನ್ ಶಾಟ್ ತೆಗೆದಿಟ್ಟುಕೊಂಡು ಏಪ್ರಿಲ್ ೧೬ರಿಂದ ಗಣತಿದಾರರು ಮನೆ ಮನೆಗೆ ಗಣತಿಗಾಗಿ ಆಗಮಿಸಿದಾಗ ತೋರಿಸಬೇಕು ಎಂದರು.