ಸಾರಾಂಶ
ಶಿಗ್ಗಾಂವಿ: ಭಯೋತ್ಪಾದನೆ ನಮ್ಮ ದೇಶಕ್ಕಂಟಿದ ಶಾಪವಾಗಿದೆ. ಅದನ್ನು ಹತ್ತಿಕ್ಕುವ ಮೂಲಕ ಸಬಲ ರಾಷ್ಟ್ರಕಟ್ಟುವ ಕೈಂಕರ್ಯದಲ್ಲಿ ಪಕ್ಷಾತೀತವಾಗಿ ಎಲ್ಲರೂ ಪ್ರಯತ್ನಿಸಬೇಕಿದೆ. ಭಾರತದ ಸಮಗ್ರತೆ ಹಾಗೂ ಏಕತೆ ಎತ್ತಿ ಹಿಡಿಯುವ ಜೊತೆಗೆ ದೇಶದ ಪ್ರತಿಯೊಬ್ಬ ನಾಗರಿಕರ ಆತ್ಮಗೌರವ ರಕ್ಷಿಸುವ ಕೆಲಸವಾಗಬೇಕಾಗಿದೆ ಎಂದು ಶ್ರೀ ಚನ್ನಬಸವೇಶ್ವರ ಗ್ರಾಮೀಣ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಾಜು ಎಂ. ಕುನ್ನೂರ ಹೇಳಿದರು.
ಪಟ್ಟಣದ ಶ್ರೀ ಚನ್ನಬಸವೇಶ್ವರ ಗ್ರಾಮೀಣ ವಿದ್ಯಾಸಂಸ್ಥೆಯ, ಶ್ರೀ ಚನ್ನಪ್ಪ ಕುನ್ನೂರ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಜರುಗಿದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿ ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ಅನೇಕರ ತ್ಯಾಗ ಬಲಿದಾನಗಳ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಈ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಭಾರತೀಯರಾದ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ, ಆಡಳಿತಾಧಿಕಾರಿ ಮಂಜುನಾಥ ಬ್ಯಾಳಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಜಿ.ಎಂ. ಅರಗೋಳ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಂ.ಎ. ಗಾಣಿಗೇರ, ಕಿವುಡ-ಮೂಕ ಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯ ಎಂ.ಬಿ. ನೀರಲಗಿ, ವೀರಣ್ಣ ಬಡ್ಡಿ, ಶಿವಪುತ್ರಪ್ಪ ಜಕ್ಕಣ್ಣವರ, ರವಿ ಮಹಾಂತಶೆಟ್ಟರ್ ಮುಂತಾದವರು ಇದ್ದರು.
ಇದೇ ಸಂದರ್ಭದಲ್ಲಿ ಆಸ್ಸಾಂ ರೆಜಿಮೆಂಟ್‌ನಲ್ಲಿ ಕೊಬ್ರಾ ಕಮಾಂಡೊ ಆಗಿ ಸೇವೆ ಸಲ್ಲಿಸುತ್ತಿರುವ ಬಸಲಿಂಗಯ್ಯ ಕಲ್ಲೂರ (ಪೂಜಾರ) ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಎಸ್.ಎಸ್. ಘೋಡಗೇರಿ ನಿರೂಪಿಸಿದರು.