CITU Delhi Chalo from December 1
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಾರ್ಮಿಕ ವಿರೋಧಿ ಸಂಹಿತೆಗಳನ್ನು ರದ್ದುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ನೇತೃತ್ವದಲ್ಲಿ ಡಿ.1 ರಿಂದ 3 ರವರೆಗೆ ದೆಹಲಿಯಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಂಚಾಲಕ ಎಂ. ನಾರಾಯಣ ತಿಳಿಸಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾರ್ಮಿಕರ ನಡೆ ಸಂಸತ್ತಿನ ಕಡೆ ಘೋಷಣೆಯೊಂದಿಗೆ ನಡೆಯುವ ಹೋರಾಟದಲ್ಲಿ ದೇಶಾದ್ಯಂತ ಒಂದು ಲಕ್ಷಕ್ಕೂ ಅಧಿಕ ಕಾರ್ಮಿಕರು ಪಾಲ್ಗೊಳ್ಳಲಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದ 120 ಮಂದಿ ಹಾಗೂ ರಾಜ್ಯದಿಂದ 6700 ಮಂದಿ ಭಾಗವಹಿಸಲಿದ್ದಾರೆ ಎಂದರು.
ಎಲ್ಲ ಕಾರ್ಮಿಕರಿಗೆ 42 ಸಾವಿರ ಕನಿಷ್ಠ ವೇತನ ಹಾಗೂ 21 ಸಾವಿರ ಸಾರ್ವತ್ರಿಕ ಕನಿಷ್ಠ ಪಿಂಚಣಿ ನಿಗದಿಪಡಿಸಬೇಕು. ಸ್ಕೀಂ ನೌಕರರನ್ನು ಕಾರ್ಮಿಕರೆಂದು ಗುರುತಿಸಿ ಶಾಸನಬದ್ಧ ಸೌಲಭ್ಯ ಒದಗಿಸಬೇಕು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ, ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿದರು.ಕಾರ್ಮಿಕ ಸಂಘಟನೆಗಳ ಹೋರಾಟಗಳನ್ನು ಅಪರಾಧೀಕರಿಸುವುದನ್ನು ನಿಲ್ಲಿಸಬೇಕು. ನೈಸರ್ಗಿಕ ಸಂಪನ್ಮೂಲ ಹಾಗೂ ಜನರ ಹಕ್ಕುಗಳನ್ನು ರಕ್ಷಿಸಬೇಕು. ಭೂಸ್ವಾಧೀನದಿಂದ ಸ್ಥಳಾಂತರಗೊಳ್ಳುವವರಿಗೆ ಪುನರ್ವಸತಿ ಮತ್ತು ಉದ್ಯೋಗ ಭದ್ರತೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಬಿಸಿಯೂಟ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಹನುಮಕ್ಕ ಮಾತನಾಡಿ, ಕ್ಲಸ್ಟರ್ ಕಿಚನ್ ಯೋಜನೆ ವಿರೋಧಿಸಿ ನ. 25 ರಿಂದ ರಾಜ್ಯದ 28 ಜಿಲ್ಲೆಗಳಲ್ಲಿ ಬಿಸಿಯೂಟ ನೌಕರರು ಅಡುಗೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದಾರೆ. ಶಾಲೆಗಳಲ್ಲಿಯೇ ಹಿಂದಿನಂತೆ ಅಡುಗೆ ವ್ಯವಸ್ಥೆ ಮುಂದುವರಿಸಬೇಕು. ಮುಖ್ಯಮಂತ್ರಿಗಳು ಸಂಘಟನೆಯೊಂದಿಗೆ ಮಾತುಕತೆ ನಡೆಸಿ ಬೇಡಿಕೆ ಈಡೇರಿಸುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.ಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷೆ ಚಂದ್ರಮ್ಮ, ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ, ಸಹ ಸಂಚಾಲಕ ಷಣ್ಮುಖಪ್ಪ ಇದ್ದರು.
-------------ಪೊಟೋ: 19ಎಸ್ಎಂಜಿಕೆಪಿ02
ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಸಂಚಾಲಕ ಎಂ. ನಾರಾಯಣ ಮಾತನಾಡಿದರು.