ಸಾರಾಂಶ
ಗಂಗಾವತಿ: ಅಗತ್ಯ ವಸ್ತುಗಳ ಬೆಲೆ ಏರಿಕೆ, ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಖಂಡಿಸಿ ಸಿಐಟಿಯು ನೇತೃತ್ವದಲ್ಲಿ ಕೃಷಿ ಕೂಲಿಕಾರರು, ಹಮಾಲಿ ಕಾರ್ಮಿಕರು ಕೇಂದ್ರ ಸರ್ಕಾರದ ವಿರುದ್ಧ ನಗರದ ಶ್ರೀ ಕೃಷ್ಣ ದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಎಂ. ನಿರುಪಾದಿ ಬೆಣಕಲ್ ಮಾತನಾಡಿ, ರಾಜ್ಯದಲ್ಲಿ ಕೆಲಸದ ಅವಧಿಯ ಹೆಚ್ಚಳವನ್ನು ತಂದಿರುವ ಕಾರ್ಖಾನೆ ಕಾಯ್ದೆ ತಿದ್ದುಪಡಿ ಕೈ ಬಿಡಬೇಕು. ಕೆಲಸದ ಅವಧಿ ಹೆಚ್ಚಿಸುವ, ಮಹಿಳೆಯರನ್ನು ರಾತ್ರಿಪಾಳಿಯಲ್ಲಿ ದುಡಿಸಿಕೊಳ್ಳಲು ಅವಕಾಶ ನೀಡುವುದು ಸೇರಿದಂತೆ ಎಲ್ಲ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ವಾಪಸ್ ಪಡೆಯಬೇಕು. ರೈತ ವಿರೋಧಿ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕು. ಕೃಷಿ ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ ಖಾತರಿಪಡಿಸಬೇಕು. ಎಪಿಎಂಸಿ ವ್ಯವಸ್ಥೆ ಬಲಗೊಳಿಸಬೇಕು. ಗೊಬ್ಬರ ಒಳಗೊಂಡಂತೆ ಕೃಷಿ ಇಡುವಳಿಗಳಿಗೆ ಸಬ್ಸಿಡಿ ಕಡಿತಗೊಳಿಸುವ ನೀತಿಗಳನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.ಕೇಂದ್ರ ಸರ್ಕಾರದ ನವ ಉದಾರೀಕರಣ ನೀತಿಗಳ ಜಾರಿಯ ವೇಗದಲ್ಲಿ ತನ್ನ ನೀತಿಗಳ ಪರಿಕಲ್ಪನೆಯನ್ನು ಬದಲಾಯಿಸಿ ದೇಶದ ಅಭಿವೃದ್ಧಿಯ ಸಂಕೇತಗಳಾದ ಮಕ್ಕಳು ಮತ್ತು ಮಹಿಳೆಯರಿಗಾಗಿ ಕೊಡುವ ಸವಲತ್ತುಗಳಿಗೆ ಕತ್ತರಿ ಹಾಕುತ್ತಿದೆ. ಇದರಿಂದ ದೇಶದ 22 ಕೋಟಿ ಫಲಾನುಭವಿಗಳು ವಂಚಿತರಾಗುತ್ತಿದ್ದಾರೆ. ದೇಶದ ಬಂಡವಾಳಗಾರರು ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ₹14.5 ಲಕ್ಷ ಕೋಟಿ ಸಾಲ ಮನ್ನ ಮಾಡಿದ್ದು ಖಂಡನೀಯ ಎಂದು ಹೇಳಿದರು.ಕೇಂದ್ರ ಪ್ರಭುತ್ವ ಅಂಗನವಾಡಿ ನೌಕರರಿಗೆ ₹4500, ಸಹಾಯಕಿಯರಿಗೆ ₹2250, ಬಿಸಿಯೂಟದವರಿಗೆ ₹600, ಆಶಾ ಕಾರ್ಯಕರ್ತೆರಿಗೆ ₹2000 ಕೊಟ್ಟು ದುಡಿಸುವುದು ಸಾಮಾಜಿಕ ನ್ಯಾಯವಲ್ಲ. 2018ರಿಂದ ಈ ನೌಕರರಿಗೆ ಒಂದೂ ರುಪಾಯಿಯನ್ನೂ ಹೆಚ್ಚಳ ಮಾಡದೆ ಚುನಾವಣೆಗಳು, ಮಾತೃವಂದನಾ, ಪೋಷಣ್ ಟ್ರ‍್ಯಾಕರ್, ಸರ್ವೆ, ಗೃಹಲಕ್ಷ್ಮಿ ಮುಂತಾದ ಕೆಲಸಗಳನ್ನು ಹೇರಿ ಈ ಮಹಿಳೆಯರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. "ಗೌರವ ಧನ " ಎಂಬ ಪಟ್ಟಕಟ್ಟಿ ಎಲ್ಲ ಸವಲತ್ತುಗಳಿಂದ ವಂಚನೆ ಮಾಡಲಾಗುತ್ತಿದೆ ಎಂದು ನಿರೂಪಾದಿ ಆರೋಪಿಸಿದರು. ಅವರಿಗೆಲ್ಲ ವೇತನ ಹೆಚ್ಚಿಸಿ ಸೇವಾ ಭದ್ರತೆ ನೀಡಬೇಕು ಎಂದು ಆಗ್ರಹಿಸಿ, ಕೇಂದ್ರ ಸರ್ಕಾರದ ವೈಫಲ್ಯ ಖಂಡಿಸಿ ಜ. 23ರಂದು ದೆಹಲಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ಅಕ್ಷರದಾಸೋಹ ನೌಕರರ ಸಂಘದ ಅಧ್ಯಕ್ಷ ಲಕ್ಷ್ಮೀ ಸೋನಾರೆ, ಅಂಗನವಾಡಿ ನೌಕರರ ಸಂಘದ ಮುಖಂಡರಾದ ಗಿರಿಜಮ್ಮ, ಹುಸೇನಪ್ಪ, ಅಂಜನಾದೇವಿ, ರವಿ ಅಕ್ಕಿರೊಟ್ಟಿ, ರಮೇಶ, ಬಾಳಪ್ಪ ಹುಲಿಹೈದರ ಇತರರಿದ್ದರು.