ಶಾಲೆ, ಕಾಲೇಜುಗಳಲ್ಲಿ ವಿಜ್ಞಾನ ಪ್ರಯೋಗಾಲಯ ಅಗತ್ಯ: ಶಾಸಕ ಮಾನೆ

| Published : Jan 12 2024, 01:46 AM IST

ಶಾಲೆ, ಕಾಲೇಜುಗಳಲ್ಲಿ ವಿಜ್ಞಾನ ಪ್ರಯೋಗಾಲಯ ಅಗತ್ಯ: ಶಾಸಕ ಮಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲ ಶಾಲೆ, ಕಾಲೇಜುಗಳಲ್ಲಿ ವಿಜ್ಞಾನ ಪ್ರಯೋಗಾಲಯದಂಥ ಆಧುನಿಕ ವ್ಯವಸ್ಥೆ ಕಲ್ಪಿಸಬೇಕಿದೆ.

ಕನ್ನಡಪ್ರಭ ವಾರ್ತೆ ಹಾನಗಲ್ಲ

ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬಹುಮುಖ್ಯ ಪಾತ್ರ ವಹಿಸಲಿದ್ದು, ಪ್ರಾಥಮಿಕ ಮತ್ತು ಪ್ರೌಢ ಹಂತದಿಂದಲೇ ಮಕ್ಕಳಲ್ಲಿ ಈ ಕುರಿತು ಅರಿವು ಮೂಡಿಸುವ ಅಗತ್ಯವಿದೆ. ಎಲ್ಲ ಶಾಲೆ, ಕಾಲೇಜುಗಳಲ್ಲಿ ವಿಜ್ಞಾನ ಪ್ರಯೋಗಾಲಯದಂಥ ಆಧುನಿಕ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮದ ವಿ.ಆರ್. ಪಾಟೀಲ ಸರ್ಕಾರಿ ಪ್ರೌಢಶಾಲೆಯಲ್ಲಿ ನೂತನ ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿ ಅವರು ಮಾತನಾಡಿದರು. ಅತಿವೃಷ್ಟಿ, ಅನಾವೃಷ್ಟಿ, ಕೊರೋನಾ ಸೇರಿದಂತೆ ಮತ್ತಿತರ ಕಾರಣಗಳಿಂದ ಆರ್ಥಿಕತೆಗೆ ಪೆಟ್ಟು ಬಿದ್ದಿದೆ. ಹೀಗಾಗಿ ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರದ ಅನುದಾನದ ಕೊರತೆ ಉಂಟಾಗಿದೆ. ಇಂಥ ಸಂದರ್ಭದಲ್ಲಿ ಅನುದಾನ ನೆಚ್ಚದೇ ಸಮುದಾಯವೂ ಕೈ ಜೋಡಿಸಿದರೆ ಅಗತ್ಯ ಮೂಲಸೌಕರ್ಯ ಕಲ್ಪಿಸಬಹುದಾಗಿದೆ ಎಂದ ಅವರು, ಈಗಾಗಲೇ ತಾಲೂಕಿನಲ್ಲಿ ಸಮುದಾಯದ ಸಹಭಾಗಿತ್ವದಲ್ಲಿ ಅನೇಕ ಶಾಲೆಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸಮುದಾಯ ಸೇರಿಸುವಷ್ಟು ವಂತಿಗೆಗೆ ಸಮನಾಗಿ ತಾವೂ ಸಹ ಅಷ್ಟೇ ವಂತಿಗೆ ನೀಡಿ, ಶಾಲೆಗಳಿಗೆ ಡೆಸ್ಕ್, ವಿಜ್ಞಾನ ಪ್ರಯೋಗಾಲಯ, ಪೀಠೋಪಕರಣ, ಸ್ಮಾರ್ಟ್‌ಕ್ಲಾಸ್, ಕಂಪ್ಯೂಟರ್‌ನಂಥ ಸೌಲಭ್ಯಗಳನ್ನು ಸರ್ಕಾರದ ಅನುದಾನದ ಸಹಾಯವಿಲ್ಲದೇ ಒದಗಿಸುತ್ತಿರುವುದಾಗಿ ತಿಳಿಸಿದರು.

ಹಾನಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ ಮಾತನಾಡಿ, ಹಾನಗಲ್ ತಾಲೂಕಿನಲ್ಲಿ ಶಾಸಕ ಶ್ರೀನಿವಾಸ ಮಾನೆ ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಪರಿಣಾಮ ಶಾಲೆಗಳಲ್ಲಿ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಯಾಗುತ್ತಿದೆ. ಮೊದಲ ಹಂತದಲ್ಲಿ ಎಲ್ಲ ಸರ್ಕಾರಿ ಪ್ರೌಢಶಾಲೆಗಳಿಗೆ ಸ್ಮಾರ್ಟ್‌ಕ್ಲಾಸ್ ಅಳವಡಿಸಲಾಗುತ್ತಿದ್ದು, ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸಲು ಪೂರಕವಾಗಿ ಶಾಲೆಗಳು ಸಜ್ಜಾಗುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಗುಡ್ಡಪ್ಪ ಕೆಮ್ಮಣಕೇರಿ ಅಧ್ಯಕ್ಷತೆ ವಹಿಸಿದ್ದರು. ಬಿಇಒ ವಿ.ವಿ. ಸಾಲಿಮಠ, ಸಾಂವಸಗಿ ಗ್ರಾಪಂ ಅಧ್ಯಕ್ಷೆ ರೇಣುಕಾ ಅಜಗುಂಡಿ, ಸದಸ್ಯರಾದ ಚಂದ್ರಗೌಡ ಪಾಟೀಲ, ಚಂದ್ರಶೇಖರ ದೊಡ್ಡಮನಿ, ಚಂದ್ರಯ್ಯ ಚಿಕ್ಕಮಠ, ಚಂಪಾವತಿ ಪೂಜಾರ, ಮಾಜಿ ಅಧ್ಯಕ್ಷರಾದ ರಮೇಶಗೌಡ ಪಾಟೀಲ, ಬಸವರಾಜ ಅಗಸನಹಳ್ಳಿ, ಎಸ್‌ಡಿಎಂಸಿ ಸದಸ್ಯರಾದ ಸುರೇಶ ಹಂಚಿನಮನಿ, ವಹಾಬ ಕೋಟಿ, ಮುಖ್ಯಶಿಕ್ಷಕ ಆರ್.ಎನ್. ಪಾಟೀಲ, ಅಶೋಕ ಹಲಸೂರ ಈ ಸಂದರ್ಭದಲ್ಲಿದ್ದರು.