ವಿದ್ಯೆ ಜೊತೆಗೆ ಉದ್ಯೋಗವೂ ಲಭ್ಯವಾಗಲಿದೆ: ಮುರಳೀಧರ ಹಾಲಪ್ಪ

| Published : Jan 12 2024, 01:46 AM IST

ವಿದ್ಯೆ ಜೊತೆಗೆ ಉದ್ಯೋಗವೂ ಲಭ್ಯವಾಗಲಿದೆ: ಮುರಳೀಧರ ಹಾಲಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಹತ್ತನೇ ತರಗತಿ ನಂತರ ಗ್ರಾಮೀಣ ಭಾಗದ ಯುವಕರಿಗೆ ಇರುವ ಅವಕಾಶಗಳು ಎಂಬ ವಿಚಾರ ಕುರಿತು ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ತುಮಕೂರು

ಅರ್ಧಕ್ಕೆ ಓದು ನಿಲ್ಲಿಸಿದ, ಹತ್ತನೇ ತರಗತಿಯ ನಂತರ ಕಲಿಯಲಾಗದೆ, ಉದ್ಯೋಗ ಮಾಡಬೇಕೆಂಬ ಗ್ರಾಮೀಣ ಯುವ ಜನತೆಗೆ ಜಿಟಿಟಿಸಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಕೇಂದ್ರ ಸೇರುವುದರಿಂದ ವಿದ್ಯೆಯ ಜೊತೆಗೆ, ಉದ್ಯೋಗವೂ ಲಭ್ಯವಾಗಲಿದೆ ಎಂದು ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.

ಹೀರೆಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಜಿಟಿಟಿಸಿ ಕೇಂದ್ರದಲ್ಲಿ ಜಿಟಿಟಿಸಿ ಮತ್ತು ಗ್ರಾಮೀಣಾಭಿವೃದ್ದಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹತ್ತನೇ ತರಗತಿ ನಂತರ ಗ್ರಾಮೀಣ ಭಾಗದ ಯುವಕರಿಗೆ ಇರುವ ಅವಕಾಶಗಳು ಎಂಬ ವಿಚಾರ ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಜಿಟಿಟಿಸಿ ಸೇರುವುದರಿಂದ ಕಲಿಕೆಯ ಜೊತೆ ಶೇ.100 ರಷ್ಟು ಉದ್ಯೋಗ ಲಭಿಸಲಿದೆ. ಸ್ವಯಂ ಉದ್ಯೋಗ ತರಬೇತಿಯಿಂದ ತನ್ನ ಕಾಲಮೇಲೆ ತಾನೇ ನಿಲ್ಲಬೇಕೆಂಬ ಯುವಜನತೆಯ ಆಶಯ ಈಡೇರಲಿದೆ. ಹಾಗಾಗಿ ಈ ಎರಡು ಕಲಿಕಾ ಕೇಂದ್ರಗಳತ್ತ ಜಿಲ್ಲೆಯ ಯುವಜನರು ಗಮನಹರಿಸಬೇಕೆಂದರು.

ಜಿಟಿಟಿಸಿಯ ಪ್ರಾಂಶುಪಾಲ ಅಶ್ವಿನ್ ಕುಮಾರ್ ಸೋಮಣ್ಣ ಮಾತನಾಡಿ, ತುಮಕೂರಿನ ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 2008 ರಲ್ಲಿ ಅರಂಭವಾದ ನಮ್ಮ ಸಂಸ್ಥೆ ಇದುವರೆಗೂ ಸುಮಾರು 2 ಸಾವಿರಕ್ಕೂ ಅಧಿಕ ಜನರಿಗೆ ತರಬೇತಿ ನೀಡಿದೆ. ಯಾರೊಬ್ಬರು ನಿರುದ್ಯೋಗಿಯಾಗಿಲ್ಲ. ಅಲ್ಲದೆ ಇಂದಿನ ಕೈಗಾರಿಕೆಗಳ ಅಗತ್ಯತೆಯನ್ನು ಅರಿತು, ಅದನ್ನು ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳುವುದರಿಂದ ಕೌಶಲ್ಯಭರಿತ ಕೆಲಸಗಾರರನ್ನು ತಯಾರಾಗುತ್ತಾರೆ. ಅಲ್ಲದೆ ನಾಲ್ಕು ವರ್ಷಗಳ ಕೋರ್ಸ್ ನ ಕೊನೆಯ ವರ್ಷ ಕನಿಷ್ಠ 14 ಸಾವಿರ ಮಾಸಿಕ ಶಿಷ್ಯವೇತನದೊಂದಿಗೆ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಕೈಗಾರಿಕೆಗಳಲ್ಲಿ ಇನ್‌ಟ್ರನ್‌ಶಿಪ್‌ ಮಾಡುವುದರಿಂದ ಮತ್ತಷ್ಟು ನುರಿತ ಕೌಶಲ್ಯಭರಿತ ಕೆಲಸಗಾರರಾಗುವುದರಲ್ಲಿ ಸಂದೇಹವೇ ಇಲ್ಲ. ದೇಶದಲ್ಲಿ ಸುಮಾರು 400 ಹಾಗೂ ತುಮಕೂರಿನಲ್ಲಿ ಸುಮಾರು 30 ಕಂಪನಿಗಳ ಜೊತೆಗೆ ಒಪ್ಪಂದವನ್ನು ಜಿಟಿಟಿಸಿ ಮಾಡಿಕೊಂಡಿದೆ. ಇದರ ಸದುಪಯೋಗವನ್ನು ಯುವಜನರು ಪಡೆದುಕೊಳ್ಳಬೇಕೆಂದರು.

ಗ್ರಾಮೀಣಾಭಿವೃದ್ದಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಅರುಣ್ ಕುಮಾರ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಜಿಟಿಟಿಸಿ ಆವರಣದಲ್ಲಿಯೇ ನಮ್ಮ ತರಬೇತಿ ಸಂಸ್ಥೆ ಕೆಲಸ ಮಾಡುತ್ತಿದೆ. ಸುಮಾರು 60 ರೀತಿಯ ವಿವಿಧ ತರಬೇತಿಗಳನ್ನು ನೀಡಿ, ಸ್ವಯಂ ಉದ್ಯೋಗಕ್ಕೆ ಪ್ರೇರೆಪಿಸಲಾಗುವುದು. 18-45 ವರ್ಷ ವಯಸ್ಸಿನ ಓದು ಬರಹ ಬರುವವರು, ಬರದೆ ಇರುವವರು ಸಹ ಇಲ್ಲಿ ತರಬೇತಿ ಪಡೆಯಲು ಅವಕಾಶವಿದೆ. ಜನರ ಬೇಡಿಕೆಯನ್ನು ಆಧರಿಸಿ ತರಬೇತಿಗಳನ್ನು ಅರಂಭಿಸಲಾಗುತ್ತಿದೆ. ಡಿಟಿಪಿ, ಬ್ಯೂಟಿಷಿಯನ್, ಟೈಲರಿಂಗ್, ಮೊಬೈಲ್ ರಿಪೇರಿ, ಮೋಟಾರ್ ರಿಪೇರಿ, ಎಲೆಕ್ಟ್ರಿಕಲ್, ಟಿ.ವಿ.ರಿಪೇರಿಯಂತಹ ತರಬೇತಿಗಳನ್ನು ಸಹ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸ್ವಯಂ ಉದ್ಯೋಗ ಪ್ರಾರಂಭಿಸಬೇಕೆಂಬ ಆಸೆ ಇರುವ ಯುವಜನರು ತರಬೇತಿಗೆ ಅರ್ಜಿ ಸಲ್ಲಿಸಬಹುದೆಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಸೂರ್ಯಕಲಾ ಮಾತನಾಡಿ, ಸ್ವಾವಲಂಬನೆಯ ಜೀವನ ನಡೆಸಬೇಕೆಂಬ ಇಚ್ಛೆ ಇರುವ ಯುವಕರಿಗೆ ಜಿಟಿಟಿಸಿ ಮತ್ತು ಸ್ವಯಂ ಉದ್ಯೋಗ ತರಬೇತಿ ಕೇಂದ್ರ ಮೊದಲ ಆಯ್ಕೆಯಾಗಿದೆ. ಇಂದು ದೇಶದ ದೊಡ್ಡ ಕಂಪನಿಗಳು ಎನಿಸಿಕೊಂಡ, ಟಾಟಾ, ಅಂಬಾನಿ, ಅದಾನಿ ಅವರೆಲ್ಲರ ಆರಂಭ ಒಂದು ಚಿಕ್ಕ ಉದ್ಯಮದಿಂದಲೇ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇದು ದೇಶದ ಅರ್ಥಿಕತೆಗೆ ಪೂರಕವಾಗಿದೆ. ಹಾಗಾಗಿ ಶಾಲಾ ಶಿಕ್ಷಣ ಇಲಾಖೆವತಿಯಿಂದ ಆಯೋಜಿಸುವ ಸಭೆ, ಸಮಾರಂಭ, ಸಮಾಲೋಚನಾ ಸಭೆಗಳಲ್ಲಿ ಈ ವಿಚಾರವನ್ನು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ತಿಳಿಸಿ, ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಲಾಗುವುದು. ಕೆಲಸ ಸಿಗದೆ ಸಮಾಜ ವಿದ್ರೋಹಿ ಶಕ್ತಿಗಳಾಗಿ ಬದುಕುವುದಕ್ಕಿಂತ ಈ ರೀತಿ ತರಬೇತಿ ಪಡೆದು ಸ್ವಯಂ ಉದ್ಯೋಗ ಮಾಡುತ್ತಾ ಸ್ವಾವಲಂಬನೆಯ ಜೀವನ ನಡೆಸುವುದು ಒಳ್ಳೆಯದೆಂದರು.

ಕಾರ್ಯಾಗಾರದಲ್ಲಿ ಹಿರೇಹಳ್ಳಿಯ ಶ್ರೀಸಿದ್ಧಗಂಗಾ ಗ್ರಾಮಾಂತರ ಪ್ರೌಢಶಾಲೆಯ ಮಕ್ಕಳು ಹಾಗೂ ತಾಲೂಕಿನ ವಿವಿಧ ಸರಕಾರಿ ಪ್ರೌಢಶಾಲೆಗಳ ಉಪಾಧ್ಯಾಯರು ಮತ್ತು ಸಿಬ್ಬಂದಿವರ್ಗ ಪಾಲ್ಗೊಂಡಿದ್ದರು.ಕೋಟ್‌.....

ಪದವಿ ಪೂರೈಸಿದ ಎಲ್ಲರಿಗೂ ಅವರ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ದೊರೆಯುತ್ತದೆ ಎಂಬ ಖಾತರಿ ಇಲ್ಲ. ಹಾಗಾಗಿ ಪಿಯುಸಿಗೆ ಸರಿಸಮಾನ ಜಿಟಿಟಿಸಿಯಲ್ಲಿ ಮೂರು ವರ್ಷಗಳ ಥಿಯರಿ ಮತ್ತು ಒಂದು ವರ್ಷದ ಪ್ರಾಕ್ಟಿಕಲ್ ಶಿಕ್ಷಣ ಪಡೆದರೆ, ಸ್ಥಳೀಯ ಕೈಗಾರಿಕಾ ಪ್ರದೇಶಗಳಲ್ಲಿ ಲಭ್ಯವಿರುವ ಉದ್ಯೋಗವನ್ನು ದೊರಕಿಸಿಕೊಡಲು ಸಂಸ್ಥೆ ನೆರವಾಗಲಿದೆ. ಇದರಿಂದ ಮಕ್ಕಳು ಶಿಕ್ಷಣದ ನಂತರವೂ ಪೋಷಕರಿಗೆ ಭಾರವಾಗಿ ಬದುಕುವುದು ತಪ್ಪುತ್ತದೆ. ಜಿಟಿಟಿಸಿಗೆ ಹೊರದೇಶಗಳೊಂದಿಗೆ ಒಪ್ಪಂದವಿದ್ದು, ಇಲ್ಲಿ ಕಲಿತವರು ವಿದೇಶದಲ್ಲಿ ಹೋಗಿ ಸಹ ಉದ್ಯೋಗ ಮಾಡಲು ಅವಕಾಶ ದೊರೆಯುವ ಸಾಧ್ಯತೆ ಇದೆ.

ಮುರುಳೀಧರ ಹಾಲಪ್ಪ ಮಾಜಿ ಅಧ್ಯಕ್ಷರು, ಕೌಶಲ್ಯಾಭಿವೃದ್ಧಿ ನಿಗಮ