ರೈಲ್ವೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸಂಸದ ಮನವಿ

| Published : Jan 12 2024, 01:46 AM IST

ಸಾರಾಂಶ

ಕೇಂದ್ರ ರೈಲ್ವೆ ಸಚಿವರಿಗೆ ರಾಜಾ ಅಮರೇಶ್ವರ ನಾಯಕ ಪತ್ರ. ರಾಯಚೂರಿನ ರೈಲ್ವೆ ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿ ಬೇಗ ಮುಗಿಸಲು ಸಂಬಂಧಪಟ್ಟವಿಗೆ ಸೂಚಿಸುವಂತೆ ಸಂಸದರು ಪತ್ರದಲ್ಲಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ರಾಯಚೂರು

ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಎರಡನೇ ಪ್ಲಾಟ್‌ಫಾರ್ಮ್‌ ಕಾಮಗಾರಿ ವಿಧಾನವಾಗಿ ನಡೆಯುತ್ತಿರುವುದರಿಂದ ಹಾಗೂ ಇದರಿಂದ ಜನರಿಗೆ ಆಗುವ ತೊಂದರೆಗಳ ಬಗ್ಗೆ ವಿವರಣೆ ನೀಡಿ, ಶೀಘ್ರ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಅವರು ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದಾರೆ.

ರಾಯಚೂರು ನಿಲ್ದಾಣದಲ್ಲಿ ಮೂರು ತಿಂಗಳಿನಿಂದ ನಿಲ್ಲಿಸಲಾಗಿರುವ ರೈಲ್ವೆ ಕಾಮಗಾರಿಗಳನ್ನು ಶೀಘ್ರ ಪ್ರಾರಂಭಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿದ ಪ್ರಯುಕ್ತ ಈಗಾಗಲೇ ಕಳೆದ ಜ.6 ರಿಂದ ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಎರಡನೇ ಪ್ಲಾಟ್‌ಫಾರ್ಮ್‌ನಲ್ಲಿ ಕಾಮಗಾರಿ ಹಾಗೂ ಎಸ್ಕಲೇಟರ್ ಹಾಗೂ ಫುಟ್ ಓವರ್ ಬ್ರಿಡ್ಜ್‌ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಎಲ್ಲಾ ಕಾಮಗಾರಿಗಳು ಮೂರು ತಿಂಗಳ ಒಳಗೆ ಪೂರ್ಣಗೊಳಿಸಲಾಗುವುದು ಎಂದು ರೈಲ್ವೆ ಇಲಾಖೆಯವರು ಭರವಸೆ ನೀಡಿರುತ್ತಾರೆ ಎಂದು ಸಂಸದರು ತಿಳಿಸಿದ್ದಾರೆ.

ತಿಂಗಳಲ್ಲಿ ಕೆಲಸ ಪೂರ್ಣ: ಬಾಬುರಾವ್‌

ಇಲ್ಲಿನ ರೈಲ್ವೆ ನಿಲ್ದಾಣದಲ್ಲಿನ ಎರಡನೇ ಪ್ಲಾಟ್ ಫಾರ್ಮ್‌ ಕಾಮಗಾರಿ ತಿಂಗಳೊಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಕೆಲಸ-ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಜೆಡ್.ಆರ್.ಯು.ಸಿ.ಸಿ ಸದಸ್ಯ ಬಾಬುರಾವ್ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಯಚೂರು ನಗರದ ರೈಲ್ವೆ ನಿಲ್ದಾಣದ ಎರಡನೇ ಪ್ಲಾಟ್ ಫಾರಂನಲ್ಲಿ ನಡೆಯುತ್ತಿರುವ ಕಾಮಗಾರಿ ಭರದಿಂದ ಸಾಗುತ್ತಿದೆ. ಕಳೆದ ಎರಡು ತಿಂಗಳ ಹಿಂರ್‌ದೆ ಕಾಮಗಾರಿ ಆರಂಭಿಸಿದ್ದು, ಮುಂದಿನ 30ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ರೈಲ್ವೆ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಮತ್ತು ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಪಾದದ ಮೇಲ್ಸೇತುವೆ ಒಂದೇ ಇರುವದರಿಂದ ಪ್ರಯಾಣಿಕರಿಗೆ ಹೊರಪ್ರವೇಶಕ್ಕೆ ತೀವ್ರ ಸಮಸ್ಯೆಯಾಗುತ್ತಿದೆ ಎಂಬ ದೂರುಗಳು ಸಾರ್ವಜನಿಕರಿಂದ ಬಂದಿದೆ ಎಂದರು.

ಈ ಭಾಗದ ಜನರ ಬೇಡಿಕೆ ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿಲ್ದಾಣದ 1,2 ಮತ್ತು 3ನೇ ಪ್ಲಾಟ್ ಫಾರಂನಲ್ಲಿ ಪಾದದ ಮೇಲ್ವೇತುವೆ ಹಾಗೂ ಎಕ್ಸ್ ಲೇಟರ್ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ ಎಂದು ವಿವರಿಸಿದರು.

ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಗೆ ಅನುಕೂಲಕ್ಕಾಗಿ ಈ ಕಾಮಗಾರಿ ಕೈಗೊಳ್ಳಲಾಗಿದೆ. ರಾಯಚೂರು ರೈಲ್ವೆ ನಿಲ್ದಾಣ ಮಾದರಿಯಲ್ಲಿ ಯಾದಗಿರಿ ನಿಲ್ದಾಣದಲ್ಲಿ ಪ್ಲಾಟ್ ಫಾರಂ ಕಾಮಗಾರಿ ಸೇರಿದಂತೆ ಪ್ರಯಾಣಿಕರ ಅನುಕೂಲಕ್ಕಾಗಿ ಎಸ್ಕಲೇಟರ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮೂರು ತಿಂಗಳದೊಳಗೆ ಪೂರ್ಣವಾಗಲಿದೆ ಎಂದು ಹೇಳಿದರು.

ರಾಯಚೂರು ಮತ್ತು ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ರೈಲು ಸಂಚಾರ ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಪ್ಲಾಟ್‌ಫಾರಂ ವಿನ್ಯಾಸಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸದಸ್ಯರಾದ ಜಂಬಣ್ಣ, ಎ.ಚಂದ್ರಶೇಖರ್,ಎಂ.ಮಾರೆಪ್ಪ, ಬಸವರಾಜ, ವಿಜಯಕುಮಾರ, ಮಹೇಶ, ಶ್ರೀಲಿಂಗಯ್ಯ, ಪ್ರಸಾದ್ ಇದ್ದರು.