ವೇತನ ಬಿಡುಗಡೆಗೆ ಆಗ್ರಹಿಸಿ ಹೊರಗುತ್ತಿಗೆ ನೌಕರರ ಧರಣಿ

| Published : Jan 12 2024, 01:46 AM IST

ವೇತನ ಬಿಡುಗಡೆಗೆ ಆಗ್ರಹಿಸಿ ಹೊರಗುತ್ತಿಗೆ ನೌಕರರ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊರಗುತ್ತಿಗೆ ನೌಕರರ ಮುಷ್ಕರದಿಂದಾಗಿ ಪಟ್ಟಣದಾದ್ಯಂತ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಮತ್ತು ಸಾಗಾಣಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ನಾಗರಿಕರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.

ಕಳೆದ ನಾಲ್ಕು ತಿಂಗಳಿನಿಂದ ವೇತನ ಪಾವತಿಸದ ಪುರಸಭೆ । ಹೊರಗುತ್ತಿಗೆ ನೌಕರರ ಆರೋಪ

ಕನ್ನಡಪ್ರಭ ವಾರ್ತೆ ಮದ್ದೂರು

ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವವರಿಗೆ ವೇತನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪುರಸಭೆ ನೌಕರರು ಗುರುವಾರದಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ಹೊರಗುತ್ತಿಗೆ ನೌಕರರ ಮುಷ್ಕರದಿಂದಾಗಿ ಪಟ್ಟಣದಾದ್ಯಂತ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಮತ್ತು ಸಾಗಾಣಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ನಾಗರಿಕರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.

ಪುರಸಭೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ವಾಹನ ಚಾಲಕರು, ಸ್ಯಾನಿಟರಿ ಸೂಪರ್ವೈಸರ್, ವಾಚ್ಮನ್ ಸೇರಿದಂತೆ ಹಲವು ನೌಕರರಿಗೆ ಕಳೆದ ನಾಲ್ಕು ತಿಂಗಳಿಂದ ವೇತನ ಪಾವತಿ ಮಾಡಿಲ್ಲ. ಈ ಬಗ್ಗೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಪುರಸಭೆ ಆಡಳಿತಾಧಿಕಾರಿ ಹಾಗೂ ಮುಖ್ಯ ಅಧಿಕಾರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪೌರನೌಕರರ ಸಂಘದ ಮದ್ದೂರ್ ಶಾಖೆ ಅಧ್ಯಕ್ಷ ಎಂ.ಎನ್.ಶ್ರೀನಿವಾಸ್ ಆರೋಪಿಸಿದರು.

ಪುರಸಭೆಯಿಂದ ಘನ ತ್ಯಾಜ್ಯ ವಿಲೇವಾರಿಗಾಗಿ ಬೆಂಗಳೂರಿನ ಜಿ.ಪಾಕ್ ಸೆಕ್ಯೂರಿಟಿ ಹಾಗೂ ಮೈಸೂರಿನ ಆರ್.ಸಿ. ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆದಾರರಿಗೆ ಪುರಸಭೆಯಿಂದ ಕಳೆದ ನಾಲ್ಕು ತಿಂಗಳಿನಿಂದ ಬಿಲ್ ಪಾವತಿ ಮಾಡದ ಕಾರಣ ನೌಕರರಿಗೆ ವೇತನ ಪಾವತಿಸದೇ ವಿಳಂಬ ಮಾಡುತ್ತಿದ್ದಾರೆ. ಇದಕ್ಕೆ ಪುರಸಭೆ ಮುಖ್ಯಾಧಿಕಾರಿಯೇ ಕಾರಣ ಎಂದು ದೂರಿದರು.

ಜಿಲ್ಲಾಡಳಿತ ಹಾಗೂ ನಗರ ಅಭಿವೃದ್ಧಿ ಯೋಜನೆಯ ನಿರ್ದೇಶಕರು ಮಧ್ಯಪ್ರವೇಶಿಸಿ ತಕ್ಷಣ ನಾಲ್ಕು ತಿಂಗಳ ವೇತನ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಮುಷ್ಕರ ತೀವ್ರಗೊಳಿಸುವುದಾಗಿ ನೌಕರರ ಸಂಘದ ಮುಖಂಡರು ಎಚ್ಚರಿಕೆ ನೀಡಿದರು.

ಧರಣಿಯಲ್ಲಿ ನೌಕರರ ಸಂಘದ ಕಾಂತರಾಜು, ಬಸವರಾಜು, ಸುರೇಶ, ಶಂಕರ್ಸ ಅನಿಲ್ ದಾಸ್, ಪ್ರತಾಪ್, ಸುನಿಲ್, ಜಗದೀಶ್. ಸೈಯದ್, ದರ್ಶನ್, ನವೀನ್ ಹಲವರು ಪಾಲ್ಗೊಂಡಿದ್ದರು.