ಸಾರಾಂಶ
- ಬಂಡವಾಳಶಾಹಿಗಳ ಪರವಿರುವ ಕಾರ್ಮಿಕ ಸಂಹಿತೆಗಳು: ಕೆ.ಮಹಾಂತೇಶ ಆರೋಪ । ಕಾರ್ಮಿಕ ಸಂಹಿತೆಗಳ ದಹಿಸಿ ಆಕ್ರೋಶ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿಯಾದ ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿ ವಿರೋಧಿಸಿ, ಅಧಿಸೂಚನೆಯನ್ನು ದಹಿಸುವ ಮೂಲಕ ಸಿಐಟಿಯು ಜಿಲ್ಲಾ ಘಟಕದಿಂದ ನಗರದಲ್ಲಿ ಭಾನುವಾರ ಪ್ರತಿಭಟಿಸಲಾಯಿತು.ನಗರದ ಶ್ರೀ ಜಯದೇವ ವೃತ್ತದಲ್ಲಿ ಸಿಐಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿಯಾದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೈಬಿಡುವಂತೆ ಒತ್ತಾಯಿಸಿ, ಘೋಷಣೆ ಕೂಗಿದ ಪ್ರತಿಭಟನಾಕಾರರು ಅನಂತರ ಕಾರ್ಮಿಕ ಸಂಹಿತೆಗಳನ್ನು ಪ್ರತಿಗಳನ್ನು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ, ಉದ್ಯೋಗದಾತರ ಪರ ಕಾರ್ಮಿಕ ಸಂಹಿತೆಗಳನ್ನು ಏಕಪಕ್ಷೀಯ ವಾಗಿ ಅನುಷ್ಟಾನಗೊಳಿಸಲು ಮುಂದಾಗಿದ್ದು, ಇದಕ್ಕಾಗಿ ಅಧಿಸೂಚನೆ ಪ್ರಕಟಿಸಿದೆ. ಇದು ದೇಶದ ದುಡಿಯುವ ಜನರಿಗೆ ಕೇಂದ್ರ ಸರ್ಕಾರ ಮಾಡಿದ ವಂಚನೆಯಾಗಿದೆ ಎಂದು ಆರೋಪಿಸಿದರು.ನ.21ರಂದು ಅಧಿಸೂಚನೆಗೊಳ್ಳುವ ಪೂರ್ವದಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಕರೆದಿದ್ದ ಸಭೆಯಲ್ಲಿ 4 ಕಾರ್ಮಿಕ ಸಂಹಿತೆಗಳೆಂಬ ಅನಿಯಂತ್ರಿತ ಮತ್ತು ಪ್ರಜಾಪ್ರಭುತ್ವ ವಿರೋಧಿ ಅಧಿಸೂಚನೆಯು ಎಲ್ಲ ಪ್ರಜಾಸತ್ತಾತ್ಮಕ ನೀತಿಗಳನ್ನು ಧಿಕ್ಕರಿಸುತ್ತದೆ. ಭಾರತದ ಕಲ್ಯಾಣ ರಾಜ್ಯದ ಸ್ವರೂಪವನ್ನೇ ಇದು ನಾಶಪಡಿಸಲಿದೆ. ಸಿಐಟಿಯು ಹಾಗೂ ಇತರೆ ಕೇಂದ್ರ ಕಾರ್ಮಿಕ ಸಂಘಗಳು ಪ್ರತಿರೋಧ ವ್ಯಕ್ತಪಡಿಸಿದ್ದವು ಎಂದು ತಿಳಿಸಿದರು.
ಕಾರ್ಮಿಕ ಸಂಘಟನೆಗಳ ವಿರೋಧವನ್ನು ಲೆಕ್ಕಿಸದೇ, ಕೇಂದ್ರ ಸರ್ಕಾರವು ಬಿಹಾರ ಚುನಾವಣೆಯ ವಿಜಯದಿಂದ ಬೀಗಿ, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ಘೋಷಿಸಿದೆ. ಇದರಿಂದ ಭವಿಷ್ಯದಲ್ಲಿ ಕೋಟ್ಯಂತರ ಶ್ರಮಜವಿಗಳ ಬದುಕು ಅತಂತ್ರಗೊಳ್ಳಲಿದೆ. ಕೇಂದ್ರ ಸರ್ಕಾರವು ತಕ್ಷಣವೇ ಭಾರತೀಯ ಕಾರ್ಮಿಕ ಸಮ್ಮೇಳನ (ಐಎಲ್‌ಸಿ)ವನ್ನು ಕರೆಯಬೇಕು. ನ.26ಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ), ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ (ಜೆಸಿಟಿಯು) ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿವೆ ಎಂದು ಹೇಳಿದರು.ಸಿಐಟಿಯು ಜಿಲ್ಲಾ ಸಂಚಾಲಕ ಕೆ.ಮುದಿಮಲ್ಲನಗೌಡ ಮಾತನಾಡಿ, ನ.26ರಂದು ಹರಿಹರದ ಪಾಲಿಪೈಬರ್ಸ್, ಗ್ರಾಸಿಂ ಹಾಗೂ ರಾಮ್ ಕೊ ಕಂಪನಿ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು. ಮನುಸ್ಮೃತಿ ಆಧಾರಿತ ಶ್ರಮಶಕ್ತಿ ನೀತಿ- 2025ರ ಕರಡನ್ನು ಹಿಂತೆಗೆದುಕೊಳ್ಳಬೇಕು. ಇಲ್ಲದಿದ್ದರೆ ದೇಶವ್ಯಾಪಿ ದುಡಿಯುವ ಕಾರ್ಮಿಕ ವರ್ಗಗಳು ತೀವ್ರ ಸ್ವರೂಪದ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದರು.
ಸಂಘಟನೆ ರಾಜ್ಯ ಕಾರ್ಯದರ್ಶಿ ಕೆ.ಎಚ್. ಆನಂದರಾಜು ಮಾತನಾಡಿ, ಕಾರ್ಮಿಕ ಸಂಹಿತೆಗಳ ಜಾರಿಯಿಂದ ಕಟ್ಟಡ ನಿರ್ಮಾಣ ಕಾರ್ಮಿಕರು ಹಾಲಿ ಇರುವ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ. ಕಾರ್ಮಿಕರ ಕಲ್ಯಾಣ ಮಂಡಳಿಗಳು ಮುಚ್ಚುವ ಅಪಾಯಗಳಿವೆ. ಗುತ್ತಿಗೆ ಕಾರ್ಮಿಕರು ಮತ್ತಷ್ಟು ಶೋಷಣೆಗೆ ಒಳಗಾಗಲಿದ್ದಾರೆ ಎಂದು ಎಚ್ಚರಿಸಿದರು.ಕಟ್ಟಡ ಕಾರ್ಮಿಕ ಸಂಘಟನೆ ಜಿಲ್ಲಾಧ್ಯಕ್ಷ ಜಿ.ಡಿ.ಮಂಜುನಾಥ, ಖಜಾಂಚಿಗಳಾದ ನೇತ್ರಾವತಿ, ಗಜೇಂದ್ರ, ಹನುಮಂತಪ್ಪ, ಮಂಜುನಾಥ, ಮುರುಳಿ, ಶಿವಪ್ಪ, ಹಾಸ್ಟೆಲ್ ಹೊರ ಗುತ್ತಿಗೆ ನೌಕರರ ಸಂಘದ ಹಾಲೇಶ ನಾಯಕ, ಸದಾಶಿವ ನಾಯಕ, ಎಲ್.ಐ.ಸಿ. ಏಜೆಂಟ್ಸ್ ಯೂನಿಯನ್‌ನ ಜಿ.ಜಿ.ಸವಿತಾ, ಆಟೋ ಚಾಲಕರ ಸಂಘದ ಶ್ರೀನಿವಾಸಮೂರ್ತಿ, ಬೀದಿ ಬದಿ ಮಾರಾಟಗಾರರ ಸಂಘದ ನಾಗರಾಜ, ಗ್ರಾಸಿಂ ನೌಕರರ ಸಂಘದ ಮಂಜುನಾಥ, ಎಚ್‌ಪಿಎಫ್ ನೌಕರರ ಸಂಘದ ವಿನಯಕುಮಾರ ಇತರರು ಇದ್ದರು.
- - --23ಕೆಡಿವಿಜಿ3, 4.ಜೆಪಿಜಿ:
ದಾವಣಗೆರೆಯಲ್ಲಿ ಭಾನುವಾರ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಕೈಬಿಡಲು ಒತ್ತಾಯಿಸಿ ಸಿಐಟಿಯು ಜಿಲ್ಲಾ ಘಟಕದಿಂದ ಪ್ರತಿಭಟಿಸಲಾಯಿತು.;Resize=(128,128))
;Resize=(128,128))
;Resize=(128,128))