ಸಾರಾಂಶ
ಕನ್ನಡ ಕಲಿಯುವುದಿಲ್ಲ ಎನ್ನುವ ಉತ್ತರ ಭಾರತೀಯರು ಮತ್ತು ನೆರೆ ರಾಜ್ಯದವರಿಗೆ ಬೆಂಗಳೂರು ಬಾಗಿಲು ಬಂದ್ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಡಿರುವ ಪೋಸ್ಟ್‌ವೊಂದು ವೈರಲ್ ಆಗಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕನ್ನಡ ಕಲಿಯುವುದಿಲ್ಲ ಎನ್ನುವ ಉತ್ತರ ಭಾರತೀಯರು ಮತ್ತು ನೆರೆ ರಾಜ್ಯದವರಿಗೆ ಬೆಂಗಳೂರು ಬಾಗಿಲು ಬಂದ್ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಡಿರುವ ಪೋಸ್ಟ್‌ವೊಂದು ವೈರಲ್ ಆಗಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.ಬಬ್ರುವಾಹನ ಹೆಸರಿನ ಅಕೌಂಟ್‌ನಲ್ಲಿ ಮಾಡಿರುವ ಪೋಸ್ಟ್ 1.22 ಲಕ್ಷ ಜನರಿಂದ ವೀಕ್ಷಣೆಯಾಗಿದ್ದು, ‘ಇಲ್ಲಿನ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸದವರಿಗೆ ಬೆಂಗಳೂರು ಬೇಡ’ ಎಂದು ಬರೆಯಲಾಗಿದ್ದು, ನೂರಾರು ಜನ ಪ್ರತಿಕ್ರಿಯಿಸಿದ್ದಾರೆ. ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಕೆಲವರು, ಕೆಲವು ದಿನಗಳಲ್ಲಿ ನಾವು ಬೆಂಗಳೂರಿಗೆ ಬರುತ್ತಿರುವುದರಿಂದ ಕನ್ನಡ ಕಲಿಯಲು ಯಾವುದಾದರೂ ಮೊಬೈಲ್ ಆ್ಯಪ್‌ಗಳನ್ನು ತಿಳಿಸಿ ಎಂದು ಕೇಳಿದ್ದಾರೆ.
ರಂಗರಾಜನ್ ಎಂಬುವರು ಪ್ರತಿಕ್ರಿಯಿಸಿ, ಈ ಪೋಸ್ಟ್ ತುಂಬಾ ಒರಟು ಎನಿಸುತ್ತದೆ. ಆದರೆ, ಬೆಂಗಳೂರಿನಲ್ಲೇ ಕನ್ನಡ ಭಾಷೆಯನ್ನು ಯಾವುದೋ ಬುಡಕಟ್ಟು ಭಾಷೆ ಎನ್ನುವಂತೆ ಕಾಣುತ್ತಾರೆ. ಕನ್ನಡ ಮಾತನಾಡುವವರನ್ನು ಅನಕ್ಷರಸ್ಥರಂತೆ ಕಾಣುವುದನ್ನು ನೋಡಿ ಬೇಸರವಾಗುತ್ತದೆ. ಕನ್ನಡವು ಅತ್ಯಂತ ಶ್ರೀಮಂತ ಭಾಷೆಯಾಗಿದೆ. ಅತಿಹೆಚ್ಚು ಜ್ಞಾನಪೀಠ, ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದಿದೆ. ಕನ್ನಡ ನಾಟಕಗಳು ಮರಾಠಿ ಮತ್ತು ಬಂಗಾಳ ಭಾಷೆಯ ನಾಟಕಕ್ಕೆ ಸರಿಸಮಾನವಾಗಿವೆ. ಶತಮಾನಗಳ ಹಿಂದೆ ಬಸವಣ್ಣನವರಂತಹ ಮಹಾನ್ ಚಿಂತಕರನ್ನು ಕರ್ನಾಟಕ ನೀಡಿದೆ. ಆದರೆ, ಬೆಂಗಳೂರಿನಲ್ಲಿ ಅವರ ಬಗ್ಗೆ ಕೇಳಿದರೆ 10 ಜನರಲ್ಲಿ 9 ಜನರಿಗೆ ಗೊತ್ತಿರುವುದಿಲ್ಲ. ಕನ್ನಡಿಗರು ಕನ್ನಡದ ಹೆಮ್ಮೆಯ ಬಗ್ಗೆ ಧನಾತ್ಮಕ ಆಂದೋಲನ ಮಾಡಬೇಕು. ತಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆಯಿಂದಿರುವುದು ಅಂಧಾಭಿಮಾನ ಎನಿಸುವುದಿಲ್ಲ ಎಂದಿದ್ದಾರೆ.ಮತ್ತೊಬ್ಬರು ಪ್ರತಿಕ್ರಿಯಿಸಿ, ನೆರೆ ರಾಜ್ಯಗಳ ಜನರಿಂದ ಬೆಂಗಳೂರು ಈ ಮಟ್ಟಕ್ಕೆ ಬೆಳೆದಿದ್ದು, ಇಲ್ಲಿನ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಈಗ ಎಲ್ಲರೂ ಬಿಟ್ಟು ಹೋಗಬೇಕಾ ಎಂದು ಪ್ರಶ್ನಿಸಿದ್ದಾರೆ.
ಎಲ್ಲ ಕಚೇರಿಗಳಲ್ಲಿ ಕನ್ನಡವನ್ನು ಕಲಿಸುವ ಉತ್ತಮ ಶಿಕ್ಷಕರನ್ನು ನೇಮಿಸಿ ಎಂದು ಮತ್ತೊಬ್ಬ ಎಕ್ಸ್ ಬಳಕೆದಾರ ಪೋಸ್ಟ್ ಮಾಡಿದ್ದಾರೆ.