ಸಾರಾಂಶ
ಶಾಸಕ ಎಚ್.ಡಿ. ತಮ್ಮಯ್ಯ, ಎಂಎಲ್‌ಸಿ ಸಿ.ಟಿ. ರವಿ ವಿರುದ್ಧ ಘೋಷಣೆ । ನಗರೋತ್ಥಾನ ಕಾಮಗಾರಿ ವಿಳಂಬ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಅಧ್ಯಕ್ಷರ ವಿರುದ್ಧ ಘೋಷಣೆ, ಏರು ಧ್ವನಿಯಲ್ಲಿ ಗದ್ದಲ, ಸಭೆ ಮುಂದುವರಿಸಲು ಅಡ್ಡಿ, ಅಧ್ಯಕ್ಷರ ವಿರುದ್ಧ ಪಕ್ಷಪಾತದ ಆರೋಪ.
- ಇದೆಲ್ಲಾ ನಡೆದಿದ್ದು ಚಿಕ್ಕಮಗಳೂರು ನಗರಸಭೆಯ ಸಾಮಾನ್ಯಸಭೆಯಲ್ಲಿನಗರಸಭೆಯಲ್ಲಿ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪ್ರಥಮ ಸಾಮಾನ್ಯಸಭೆ ಆರಂಭದಲ್ಲಿ ಕಾಂಗ್ರೆಸ್‌ನ ನಗರಸಭೆ ಸದಸ್ಯರು ನಗರೋತ್ಥಾನ - 3 ಮತ್ತು 4 ಕಾಮಗಾರಿಗಳು ಆರಂಭವಾಗಿಲ್ಲ. ಇದಕ್ಕೆ ಕಾರಣ ಏನು ಎಂಬ ಪ್ರಶ್ನೆ ಅಧ್ಯಕ್ಷರಿಗೆ ಕೇಳಿದರು.
ಆಗ ಅಧ್ಯಕ್ಷರು ಅಜೆಂಡಾದ ಪ್ರಕಾರ ಸಭೆ ಮುಂದುವರಿಯಲಿ, ಆ ವಿಷಯ ಬಂದಾಗ ಚರ್ಚೆ ಮಾಡೋಣ ಎನ್ನುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಸದಸ್ಯ ಮುನಿರ್ ನಗರೋತ್ಥಾನ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ವಾರ್ಡ್‌ಗಳಲ್ಲಿ ಜನರಿಗೆ ಉತ್ತರ ಕೊಡಲು ಆಗುತ್ತಿಲ್ಲ. ಮೊದಲು ಇದಕ್ಕೆ ಉತ್ತರ ನೀಡಿ ಎಂದು ಹೇಳಿದರು.ಆಗ, ಇದಕ್ಕೆ ಅವಕಾಶ ಇಲ್ಲ ಎಂದು ಅಧ್ಯಕ್ಷರು ಪುನರುಚ್ಚರಿಸುತ್ತಿದ್ದಂತೆ ಕಾಂಗ್ರೆಸ್‌ನ ಎಲ್ಲಾ ಸದಸ್ಯರು ಎದ್ದು ನಿಂತು ಏರು ಧ್ವನಿಯಲ್ಲಿ ಉತ್ತರ ಕೊಡಲೇ ಬೇಕೆಂದು ಆಗ್ರಹಿಸಿದರು. ಟೆಂಡರ್ ಆಗಿದೆ ಕೆಲಸ ಏಕೆ ಆರಂಭಿಸಿಲ್ಲ ಎಂದು ಲಕ್ಷ್ಮಣ್ ಕೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಆದರೂ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ ಎಂದು ಬಿಜೆಪಿಯ ಟಿ. ರಾಜಶೇಖರ್ ಗಂಭೀರ ಟೀಕೆ ಮಾಡಿದಾಗ, ಬಿಜೆಪಿ ಕಾಲದಲ್ಲಿ ಮಾಡಿರುವ ಯುಜಿಡಿ ಏನಾಯ್ತು, ಅಮೃತ್ ಯೋಜನೆ ಏನಾಯ್ತು ಎಂದು ಮುನಿರ್ ಪ್ರಶ್ನೆ ಮಾಡುತ್ತಿದ್ದಂತೆ ಕೇವಲ ದಾದಾಗಿರಿ, ರೌಡಿಸಂ ಮಾಡುವುದಲ್ಲ ಎಂದು ಹೇಳಿದ ರಾಜಶೇಖರ್ ಶಾಸಕ ಎಚ್.ಡಿ. ತಮ್ಮಯ್ಯ ಅವರಿಗೆ ಧಿಕ್ಕಾರ ಎನ್ನುತ್ತಿದ್ದಂತೆ ಕಾಂಗ್ರೆಸ್‌ನ ಸದಸ್ಯರು ಎದ್ದು ನಿಂತು ಸಿ.ಟಿ. ರವಿ ಹಾಗೂ ನಗರಸಭೆ ಅಧ್ಯಕ್ಷರಿಗೆ ಧಿಕ್ಕಾರದ ಘೋಷಣೆ ಹಾಕಿದರು.ಸಭೆಯಲ್ಲಿ ಆಸೀನರಾಗಿದ್ದ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ನಗರಸಭೆ ಅನುದಾನದಲ್ಲಿ ನಗರದ ಗುಂಡಿ ಮುಚ್ಚಲು ಆಗೋದಿಲ್ಲ, ಹಾಗಾಗಿ ತಾವು ಶಾಸಕರಾಗಿದ್ದಾಗ 40 ಕೋಟಿ ರು. ವಿಶೇಷ ಅನುದಾನ ತಂದಿರುವುದಾಗಿ ಹೇಳಿದರು. ಯಾರೇ ಇರಲೀ ಗೌರವ ದಿಂದ ಮಾತನಾಡಬೇಕು ಎಂದು ಕಾಂಗ್ರೆಸ್ ಸದಸ್ಯರಿಗೆ ತಿರುಗೇಟು ನೀಡಿದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ಟೆಂಡರ್ ಆಗಿದೆ, ಮಳೆ ಇದ್ದರಿಂದ ಕಾಮಗಾರಿ ಕೈಗೆತ್ತಿಕೊಳ್ಳಲು ಆಗಿರಲಿಲ್ಲ, ಮಳೆ ಮುಗಿಯುತ್ತಿದ್ದಂತೆ ಕಾಮಗಾರಿ ಪ್ರಾರಂಭ ಮಾಡುವುದಾಗಿ ಗುತ್ತಿಗೆದಾರರು ಹೇಳಿದ್ದಾರೆ ಎಂದರು.ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಯಾವ ಜನಪ್ರತಿನಿಧಿ ಅಧಿಕಾರಿಗಳನ್ನು ಓಲೈಸುತ್ತಾನೋ ಆತ ಆ ಕ್ಷೇತ್ರ ದಲ್ಲಿ ಮುಂದುವರೆಯಲು ವಿಫಲನಾಗುತ್ತಾನೆ. ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ನಗರಸಭೆಯ ಆಡಳಿತ ಅಧಿಕಾರಿ ಆಗಿದ್ದ ಸಂದರ್ಭದಲ್ಲಿ ಒಂದೇ ವಾರದೊಳಗೆ ಜನಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಎರಡು ಸಭೆಗಳನ್ನು ನಡೆಸಿ ತೀರ್ಮಾನ ತೆಗೆದುಕೊಂಡಿದ್ದಾರೆ. ಆ ಮೂಲಕ ಜನ ಪ್ರತಿನಿಧಿಗಳಿಗೆ ಅಗೌರವ ತೋರಿದ್ದಾರೆ. ಇದನ್ನು ಸಭೆಯಲ್ಲಿ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಖಂಡಿಸಬೇಕು ಎಂದು ಹೇಳಿದರು.
ಮೆಡಿಕಲ್ ಕಾಲೇಜು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೀರಿನ ಕೊರತೆ ಇದೆ. ಅಲ್ಲಿಗೆ ದಿನಕ್ಕೆ ಒಂದು ಎಂಎಲ್‌ಡಿ ನೀರು ಬೇಕೆಂಬ ವಿಷಯ ಚರ್ಚೆಗೆ ಬಂದಾಗ ನೀರು ಕೊಡಲು ನಮ್ಮ ಆಕ್ಷೇಪ ಇಲ್ಲ, ಚಿಕ್ಕಮಗಳೂರು ನಗರದ ಜನತೆಗೆ ಯಾವುದೇ ರೀತಿಯಲ್ಲೂ ತೊಂದರೆ ಆಗಬಾರದು ಎಂದು ವಿಧಾನಪರಿಷತ್ ಸದಸ್ಯರಾದ ಸಿ.ಟಿ. ರವಿ ಹಾಗೂ ಎಸ್.ಎಲ್. ಭೋಜೇಗೌಡ ಹೇಳಿದರು.ಆರಂಭದಲ್ಲಿ ಸಭೆಯಲ್ಲಿ ಗದ್ದಲ, ಕೋಲಾಹಲ, ನಂತರದಲ್ಲಿ ಎಲ್ಲವೂ ಸಮಾಧಾನವಾಗಿ ನಡೆಯಿತು. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಅನು ಮಧುಕರ್, ಪೌರಾಯುಕ್ತ ಬಿ.ಸಿ. ಬಸವರಾಜ್ ಉಪಸ್ಥಿತರಿದ್ದರು. 19 ಕೆಸಿಕೆಎಂ 3ಚಿಕ್ಕಮಗಳೂರು ನಗರಸಭೆಯಲ್ಲಿ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಸಾಮಾನ್ಯಸಭೆ ನಡೆಯಿತು. ಉಪಾಧ್ಯಕ್ಷೆ ಅನು ಮಧುಕರ್, ಪೌರಾಯುಕ್ತ ಬಿ.ಸಿ. ಬಸವರಾಜ್ ಇದ್ದರು.ಪೋಟೋ ಫೈಲ್ ನೇಮ್ 19 ಕೆಸಿಕೆಎಂ 4ಚಿಕ್ಕಮಗಳೂರು ನಗರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಎದ್ದು ನಿಂತು ನಗರೋತ್ಥಾನ ಕಾಮಗಾರಿ ಬಗ್ಗೆ ಚರ್ಚೆಗೆ ಆಗ್ರಹಿಸಿದರು.