ಗೊಂದಲದ ಗೂಡಾದ ನಗರ ಸಭೆ ಸಾಮಾನ್ಯ ಸಭೆ

| Published : Jul 23 2025, 01:48 AM IST

ಸಾರಾಂಶ

ನಗರಸಬೆಯಲ್ಲಿ ಸದಸ್ಯರು, ರಸ್ತೆ ಸರಿಯಿಲ್ಲ, ಒಳಚರಂಡಿ ಅವೈಜ್ಞಾನಿಕವಾಗಿದೆ,ಕಾಲುವೆ ಚರಂಡಿ ದುರಸ್ತಿಯಾಗಿಲ್ಲ, ಜಕ್ಕಲಮೊಡಗು ಜಲಾಶಯದ ನೀರು ಮತ್ತು ವಿದ್ಯುತ್ ಅಕ್ರಮ ಬಳಕೆಯಾಗುತ್ತಿದೆ, ಮುದ್ದೇನಹಳ್ಳಿಯ ಸತ್ಯಸಾಯಿ ಆಸ್ಪತ್ರೆಗೆ ನೀರು ಒದಗಿಸಬೇಕು ಹೀಗೆ ಸಾಮಾನ್ಯ ಸಭೆಯ ಚರ್ಚೆಯನ್ನು ವಿಷಯಸೂಚಿಗನುಗುಣವಾಗಿ ನಡೆಸದೆ ಮನಬಂದಂತೆ ಮುಂದುವರೆಸಿದ್ದು ವಿಶೇಷವಾಗಿತ್ತು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಹಾಲಿ ನಗರಸಭೆ ಅಧ್ಯಕ್ಷ ಎ.ಗಜೇಂದ್ರ ಅಧ್ಯಕ್ಷರಾದ ನಂತರ ಮಂಗಳವಾರ ನಡೆದ ನಗರಸಭೆಯ ಪ್ರಥಮ ಸಾಮಾನ್ಯ ಸಭೆಯು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ವಾಕ್‌ಸಮರ ತಾರಕಕ್ಕೇರಿ, ಹೈಡ್ರಾಮಾಗಳ ವೇದಿಕೆಯಾಯಿತು.

11 ಗಂಟೆಗೆ ನಡೆಯಬೇಕಿದ್ದ ಸಭೆ ಅರ್ಧ ಗಂಟೆ ತಡವಾಗಿ ಪ್ರಾರಂಭವಾಯಿತು. ಒಮ್ಮೆ ಕರೆಂಟ್ ಕೈಕೊಟ್ಟರೆ, ಇನ್ನೊಮ್ಮೆ ಧ್ವನಿವರ್ಧಕ ಕೈಕೊಡುತ್ತಾ ಸಭೆಯಲ್ಲಿ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದೇ ತಿಳಿಯದೆ ಗೊಂದಲದ ಗೂಡಾಗಿತ್ತು.

ಈ ನಡುವೆ ಕೆಲ ಸದಸ್ಯರು, ರಸ್ತೆ ಸರಿಯಿಲ್ಲ, ಒಳಚರಂಡಿ ಅವೈಜ್ಞಾನಿಕವಾಗಿದೆ,ಕಾಲುವೆ ಚರಂಡಿ ದುರಸ್ತಿಯಾಗಿಲ್ಲ, ಜಕ್ಕಲಮೊಡಗು ಜಲಾಶಯದ ನೀರು ಮತ್ತು ವಿದ್ಯುತ್ ಅಕ್ರಮ ಬಳಕೆಯಾಗುತ್ತಿದೆ, ಮುದ್ದೇನಹಳ್ಳಿಯ ಸತ್ಯಸಾಯಿ ಆಸ್ಪತ್ರೆಗೆ ನೀರು ಒದಗಿಸಬೇಕು ಹೀಗೆ ಸಾಮಾನ್ಯ ಸಭೆಯ ಚರ್ಚೆಯನ್ನು ವಿಷಯಸೂಚಿಗನುಗುಣವಾಗಿ ನಡೆಸದೆ ಮನಬಂದಂತೆ ಮುಂದುವರೆಸಿದ್ದು ವಿಶೇಷವಾಗಿತ್ತು.

ಕಾಮಗಾರಿಯಲ್ಲಿ ಅಕ್ರಮ ನಡೆದಿಲ್ಲ

ಕೊರೋನಾ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಅಕ್ರಮ ನಡೆಸಿರುವ ಬಗ್ಗೆ ತನಿಖೆಯಾಗಬೇಕು ಎಂದು ವಿರೋಧ ಪಕ್ಷದ ಸದಸ್ಯ ನರಸಿಂಹಮೂರ್ತಿ ಸೇರಿದಂತೆ ಕೆಲ ಸದಸ್ಯರು ಪಟ್ಟು ಹಿಡಿದರು. ಇದಕ್ಕೆ ಉತ್ತರ ನೀಡಿದ ನಗರಸಭೆ ಕಮಿಷನರ್, ಈ ಬಗ್ಗೆ ಪರಿಶೀಲಿಸಿದ್ದು ನಿಯಮ ಮೀರಿ ಏನೂ ಆಗಿಲ್ಲ. ಅಕ್ರಮ ಕಂಡು ಬಂದಿಲ್ಲ.ಯಾವುದೇ ಸದಸ್ಯರಿಗೆ ಈ ಬಗ್ಗೆ ಖಚಿತ ಮಾಹಿತಿ ಇದ್ದಲ್ಲಿ ಅನುಮಾನವಿದ್ದಲ್ಲಿ ಲಿಖಿತವಾಗಿ ದೂರು ನೀಡಿದಲ್ಲಿ ತನಿಖೆಗೆ ಒಳಪಡಿಸಲಾಗುವುದು ಎಂದರು.

ನಗರಸಭೆ ಆಡಳಿತ ಹೊಸಬಡಾವಣೆಗಳಿಗೆ ನಿರಪೇಕ್ಷಣಾಪತ್ರ ನೀಡುವಾಗ ಸಾಮಾನ್ಯ ಸಭೆಯಲ್ಲಿ ಆ ವಿಚಾರವನ್ನು ಸದಸ್ಯರ ಗಮನಕ್ಕೆ ತಂದು ಚರ್ಚೆ ಆದ ಬಳಿಕವಷ್ಟೇ ಎನ್‌ಒಸಿ ನೀಡಬೇಕು. ಆದರೆ ಒಂಬತ್ತು ತಿಂಗಳಲ್ಲಿ ಹೀಗಾಗಿಲ್ಲ. ಪ್ಯಾಕೇಜ್ ರೂಪದಲ್ಲಿ ನಡೆದುಹೋಗಿದ್ದು ಅಧ್ಯಕ್ಷರು, ಕಮಿಷನರ್ ಏಕಪಕ್ಷೀಯವಾಗಿ ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಆಡಳಿತ ಪಕ್ಷದ ಸದಸ್ಯ ಮಂಜುನಾಥಾಚಾರಿ ಆರೋಪಿಸಿದರು.

ಎನ್‌ಒಸಿಗೆ ಪ್ಯಾಕೇಜ್:

ಈ ವೇಳೆ ಎದ್ದುನಿಂತ ವಿರೋಧ ಪಕ್ಷದ ಸದಸ್ಯ ಅಂಬರೀಶ್, ಎನ್‌ಒಸಿಗೆ ಪ್ಯಾಕೇಜ್ ಪಡೆಯುತ್ತಾರೆ ಎಂಬುದನ್ನು ಆಡಳಿತ ಪಕ್ಷದ ಸದಸ್ಯರೇ ಹೇಳುತ್ತಿದ್ದಾರೆ. ಅಧ್ಯಕ್ಷರು ಇದಕ್ಕೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಹೆಚ್ಚು ಸದಸ್ಯರು ಬೆಂಬಲ ಸೂಚಿಸಿದರು.

ಈ ವೇಳೆ ಮಾತನಾಡಿದ ಅಧ್ಯಕ್ಷ ಗಜೇಂದ್ರ ಹೊಸ ಬಡಾವಣೆಗಳಿಗೆ ನಗರಸಭೆ ಒಂದು ನಿರಪೇಕ್ಷಣಾ ಪತ್ರ ನೀಡಿದರೆ ಲೇಔಟ್ ಅಪ್ರೋವಲ್ ಆಗುವುದಿಲ್ಲ. ನಾನಾ ಇಲಾಖೆಗಳಿಂದ ಪ್ರತ್ಯೇಕವಾಗಿ ಪಡೆಯಬೇಕು. ಅಷ್ಟಕ್ಕೂ ನನ್ನ ಅವಧಿಯಲ್ಲಿ ಹೊಸ ಬಡಾವಣೆಗಳಿಗೆ ಯಾವುದಕ್ಕೂ ಎನ್‌ಒಸಿ ನೀಡಿಲ್ಲ, ಅಂತಹ ಪ್ರಸ್ತಾವನೆ ನನ್ನ ಮುಂದೆ ಬಂದಿಲ್ಲ. ನಿಮ್ಮ ಬಳಿ ದಾಖಲೆಗಳಿದ್ದರೆ ನೀಡಿ ಎನ್ನುವ ಮೂಲಕ ಚರ್ಚೆಗೆ ಪೂರ್ಣವಿರಾಮ ನೀಡಿದರು.

ಸತ್ಯಸಾಯಿ ಆಸ್ಪತ್ರೆಗೆ ನೀರು

ಅಧ್ಯಕ್ಷ ಗಜೇಂದ್ರ ಮಾತನಾಡಿ, ಜಕ್ಕಲಮೊಡಗು ಜಲಾಶಯದ ನೀರನ್ನು ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಆಸ್ಪತ್ರೆಗೆ ಬರುವ ಜನತೆಗೆ ಕುಡಿಯುವ ಉದ್ದೇಶಕ್ಕೆ ನೀಡಿ ಸಹಕರಿಸಿ ಎಂದು ಆಡಳಿತ ಮಂಡಳಿ ಮನವಿ ಮಾಡಿದೆ. ನಗರಸಭಾ ಸದಸ್ಯರು ಇದಕ್ಕೆ ಒಪ್ಪಿಗೆ ನೀಡಿದಲ್ಲಿ ನೀರನ್ನು ಒದಗಿಸಲು ಕ್ರಮವಹಿಸಲಾಗುವುದು ಎಂದರು.

ನೀರು ಕೊಡಲು ಆಕ್ಷೇಪ

ಈ ವೇಳೆ ಹಿರಿಯ ಸದಸ್ಯ ರಫೀಕ್, ಅಂಬರೀಶ್, ನರಸಿಂಹಮೂರ್ತಿ,ಮಟಮಪ್ಪ ಸೇರಿದಂತೆ ಬಹುತೇಕ ಸದಸ್ಯರು ಜಕ್ಕಲಮೊಡಗು ಚಿಕ್ಕಬಳ್ಳಾಪುರ ನಗರವಾಸಿಗಳಿಗೆ ಶುದ್ದನೀರು ಕೊಡುವ ಉದ್ದೇಶಕ್ಕೆ ಮೀಸಲಾದ ಯೋಜನೆ ಎಂದು ಆಸ್ಪತ್ರೆಗೆ ನೀರು ನೀಡುವ ವಿಷಯಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.