ಕನ್ನಡಪ್ರಭ ವಾರ್ತೆ, ಚಾಮರಾಜನಗರ

6 ತಿಂಗಳಾದರೂ ಕೂಡ ಯುಜಿಡಿ ರಿಪೇರಿ ಕಾರ್ಯವನ್ನು ಪೂರ್ಣಗೊಳಿಸದೇ ಅರ್ಧಕ್ಕೆ ನಿಲ್ಲಿಸಿದ್ದ ನಗರಸಭೆ ವಿರುದ್ದ ನಿವಾಸಿಗಳು ಆಕ್ರೋಶಗೊಂಡು ಕಚಡಾ ನಗರಸಭೆ ಎಂಬ ಬ್ಯಾನರ್‌ ಹಾಕಿ ನಗರಸಭೆ ಮಾನ ಕಳೆದಿದ್ದಾರೆ.

ಚಾಮರಾಜನಗರದ ನಗರಸಭೆ ವ್ಯಾಪ್ತಿಯಲ್ಲಿರುವ 29, 30, 31ನೇ ವಾರ್ಡಿನ ವ್ಯಾಪ್ತಿಯ ರಸ್ತೆಗಳಲ್ಲಿ 2021-22ನೇ ಸಾಲಿನ ನಗರೋತ್ಥಾನದ ಅನುದಾನದಲ್ಲಿ 2 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ಹಾಗೂ ಯುಜಿಡಿ ಕಾಮಗಾರಿ ಪ್ರಾರಂಭವಾಗಿ 6 ತಿಂಗಳಾಗಿದ್ದರೂ ಪೂರ್ಣಗೊಳಿಸದ ಹಿನ್ನಲೆ ಯುಜಿಡಿಯ ನೀರು ರಸ್ತೆ ಮೇಲೆ ಹರಿದು ದುರ್ನಾಥ ಬಿರುತ್ತಿದ್ದು, ಆಕ್ರೋಶಗೊಂಡ ನಿವಾಸಿಗಳು ನಗರಸಭೆ ವಿರುದ್ದ ಕಚಡಾ ನಗರಸಭೆ ಎಂಬ ಬ್ಯಾನರ್‌ ಹಾಕಿ ಅವಮಾನಿಸುವ ಕೆಲಸ ಮಾಡಿದ್ದಾರೆ.

ಯುಜಿಡಿ ರಿಪೇರಿ ಮಾಡದ ಹಿನ್ನಲೆ ಯುಜಿಡಿಯಿಂದ ಹೊರ ಬರುತ್ತಿರುವ ಮಲಮಿಶ್ರಿತ ನೀರಿನಿಂದ ನಿವಾಸಿಗಳು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ. ಅಲ್ಲದೇ ಸೊಳ್ಳೇ ಕೀಟಗಳು ಹೆಚ್ಚಾಗಿ ರೋಗ ರುಜಿನಗಳಿಗೆ ನಿವಾಸಿಗಳು ತುತ್ತಾಗುವಂತಾಗಿದೆ.

ನಗರ ಆರೋಗ್ಯ ಕೇಂದ್ರ ಇದೇ ರಸ್ತೆಯಲ್ಲಿದ್ದು, ಯುಜಿಡಿ ಅವಾಂತರದಿಂದ ಉಂಟಾಗಿರುವ ದುರ್ನಾಥಕ್ಕೆ ಹೆದರಿ ಆರೋಗ್ಯ ಕೇಂದ್ರಕ್ಕೆ ಹೋಗಲಾಗದಂತಾಗಿದೆ.


ಅಂಗನವಾಡಿ ಕೇಂದ್ರಗಳಿಗೆ ಇದೇ ರಸ್ತೆ ಸಂಪರ್ಕ ಕಲ್ಪಿಸಲಿದ್ದು ಅಂಗನಾಡಿ ಕೇಂದ್ರಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಪೋಷಕರು ನಗರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಧಾರ್ಮಿಕ ಕ್ಷೇತ್ರವಾದ ಹರಳುಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗುವ ಭಕ್ತದಿಗಳು ಈ ರಸ್ತೆಯಲ್ಲಿ ದುರ್ನಾಥವನ್ನು ಸಹಿಸಿಕೊಂಡೇ ವಾಹನಗಳನ್ನು ಓಡಾಡುವಂತಾಗಿದೆ.

ಈ ರಸ್ತೆಯಲ್ಲಿ ದಿನನಿತ್ಯ ಸಾರ್ವಜನಿಕರ ಸಂಚಾರ ಹೆಚ್ಚಾಗಿದ್ದರೂ ಕೂಡ ಯುಜಿಡಿ ಕಾಮಗಾರಿ ಹಾಗೂ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸದೇ ವಿಳಂಬ ಮಾಡಿರುವ ಗುತ್ತಿಗೆದಾರ ಹಾಗೂ ಅವ್ಯವಸ್ಥೆಯ ಬಗ್ಗೆ ದೂರು ನೀಡಿದ್ದರೂ ನಗರಸಭೆ ಪೌರಯುಕ್ತರು ನಿರ್ಲಕ್ಷ್ಯ ವಹಿಸಿದ್ದಾರೆ.

ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಿ ನಿವಾಸಿಗಳಿಗೆ ಉಂಟಾಗಿರುವ ತೊಂದರೆಯನ್ನು ನಿವಾರಿಸಲು ಸಂಬಂಧಪಟ್ಟವರು ಕ್ರಮಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ನಿವಾಸಿ ಪ್ರಸನ್ನ ಎಚ್ಚರಿಕೆ ನೀಡಿದ್ದಾರೆ.