ಹಸಿ ತ್ಯಾಜ್ಯವನ್ನು ವ್ಯವಸ್ಥಿತವಾಗಿ ತಿಪ್ಪೆ ಮಾಡಿ ಅವಶ್ಯಕತೆಗೆ ಅನುಗುಣವಾಗಿ ನೀರು ಸಿಂಪಡಿಸಿ ಕಾಲಕಾಲಕ್ಕೆ ತಿಪ್ಪೆ ತಿರುಗಿಸುವ ಮೂಲಕ ತ್ಯಾಜ್ಯವನ್ನು ಜೈವಿಕವಾಗಿ ಸಂಸ್ಕರಣೆ ಮಾಡಿ ಗೊಬ್ಬರ ಮಾಡಲಾಗುತ್ತದೆ.

ಬಿ. ರಾಮಪ್ರಸಾದ್‌ ಗಾಂಧಿ ಹರಪನಹಳ್ಳಿ

ನಗರದಲ್ಲಿ ಪ್ರತಿ ದಿನ ಸಂಗ್ರಹಿಸುವ ಘನತ್ಯಾಜ್ಯದಲ್ಲಿ ಹಸಿ ಕಸವನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸಿ ರೈತರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಿ ಬಂದಂತಹ ಹಣವನ್ನು ನಗರದ ಅಭಿವೃದ್ಧಿಗೆ ಬಳಸುವ ಮೂಲಕ ನಗರಸಭೆ ಮಾದರಿಯಾಗಿದೆ.

ಇಲ್ಲಿಯ ಹೊಂಬಳಗಟ್ಟಿ ರಸ್ತೆಯಲ್ಲಿ 6.50 ಎಕರೆ ಪ್ರದೇಶದಲ್ಲಿ ನಗರಸ ಭೆವತಿಯಿಂದ ಸಾವಯವ ಗೊಬ್ಬರ ತಯಾರಿಕಾ ಘಟಕವನ್ನು ಸ್ಥಾಪಿಸಲಾಗಿದೆ, ಪ್ರತಿ ದಿನ ಬೆಳಗ್ಗೆ ಮನೆ-ಮನೆಗೆ ಕಳಿಸುವ ನಗರಸಭೆ ವಾಹನದಲ್ಲಿ ಘನತ್ಯಾಜ್ಯ ಸಂಗ್ರಹಿಸಿ ಅದರಲ್ಲಿನ ಹಸಿ ಕಸದಿಂದ ಸಾವಯವ ಗೊಬ್ಬರ ತಯಾರಿಸಲಾಗುತ್ತಿದೆ. ಈ ಗೊಬ್ಬರ ಮಾರುಕಟ್ಟೆಯಲ್ಲಿ ಒಂದು ಟನ್‌ಗೆ ₹ 9 ಸಾವಿರ ಇದ್ದರೆ ನಗರಸಭೆಯಿಂದ ರೈತರಿಗೆ ₹ 5 ಸಾವಿರಕ್ಕೆ ಮಾರಾಟ ಮಾಡಲಾಗುತ್ತದೆ. ಗೊಬ್ಬರ ಮಾರಾಟದಿಂದಲೇ ಈ ತಿಂಗಳು ನಗರಸಭೆ ₹ 85ರಿಂದ 90 ಸಾವಿರ ಆದಾಯ ಗಳಿಸಿದೆ.

ಹಸಿಕಸ ನಿರ್ವಹಣೆ: ಹಸಿ ತ್ಯಾಜ್ಯವನ್ನು ವ್ಯವಸ್ಥಿತವಾಗಿ ತಿಪ್ಪೆ ಮಾಡಿ ಅವಶ್ಯಕತೆಗೆ ಅನುಗುಣವಾಗಿ ನೀರು ಸಿಂಪಡಿಸಿ ಕಾಲಕಾಲಕ್ಕೆ ತಿಪ್ಪೆ ತಿರುಗಿಸುವ ಮೂಲಕ ತ್ಯಾಜ್ಯವನ್ನು ಜೈವಿಕವಾಗಿ ಸಂಸ್ಕರಣೆ ಮಾಡಿ ಗೊಬ್ಬರ ಮಾಡಲಾಗುತ್ತದೆ. ಘನತ್ಯಾಜ್ಯ ವಸ್ತು ನಿರ್ವಹಣೆ ಘಟಕದಲ್ಲಿ ವಿವಿಧ ಜಾತಿಯ ಸಸ್ಯಗಳನ್ನು ನೆಟ್ಟು ಪೋಷಿಸಿ ಪರಿಸರ ಮಾಲಿನ್ಯ ತಡೆಗಟ್ಟುವ ಪ್ರಯತ್ನವನ್ನು ಸಹ ಪೌರಾಯುಕ್ತೆ ರೇಣುಕಾ ಎಸ್. ದೇಸಾಯಿ ಹಾಗೂ ಪರಿಸರ ಅಭಿಯಂತರ ಅಮರೇಶ ನೇತೃತ್ವದಲ್ಲಿ ನಡೆದಿದೆ. ಸ್ವ -ಸಹಾಯ ಸಂಘಗಳಿಗೆ ಸಾರ್ವಜನಿಕರಿಗೆ, ಪೌರ ಕಾರ್ಮಿಕರಿಗೆ ಇತರ ನೌಕರರಿಗೆ ಸ್ವಚ್ಛ ಕಲಿಕಾ ನಿರ್ವಹಣೆ ಕುರಿತು ತರಬೇತಿ ನೀಡುವ ಕಾರ್ಯ ಸಹ ನಡೆದಿದೆ.

ಒಟ್ಟಿನಲ್ಲಿ ನಗಸಭೆ ಹಸಿ ಕಸದಿಂದ ಸಾವಯವ ಗೊಬ್ಬರ ತಯಾರಿಸಿ ರೈತರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುವ ಮೂಲಕ ನೆರವಾಗುವ ಜತೆಗೆ ನಗರದ ಅಭಿವೃದ್ಧಿಗೆ ಮುಂದಾಗಿರುವುದು ಶ್ಲಾಘನೀಯ.

ಹಸಿ ಕಸದಿಂದ ಸಾವಯವ ಗೊಬ್ಬರ ತಯಾರಿಕೆಯಿಂದ ರೈತರಿಗೂ-ನಗರಸಭೆಗೂ ಅನುಕೂಲವಾಗಿದೆ. ಪ್ರತಿ ವಾರ್ಡ್‌ಗೂ ವಾಹನ ಕಳಿಸಿದರೂ ಕೆಲವೊಂದು ಸಾರ್ವಜನಿಕರು ಕಸವನ್ನು ಗಾಡಿ ಬಿಟ್ಟು ಎಲ್ಲೆಂದರಲ್ಲಿ ಹಾಕುತ್ತಾರೆ, ಇದೀಗ ಸ್ವಲ್ಪ ಮಟ್ಟಿಗೆ ತಿಪ್ಪೆಗಳು ಕಡಿಮೆಯಾಗಿವೆ. ಜನರು ಇನ್ನಾದರೂ ಎಚ್ಚೆತ್ತುಕೊಂಡು ನಾವು ಕಳಿಸಿದ ವಾಹನಗಳಲ್ಲಿಯೇ ತ್ಯಾಜ್ಯ ಹಾಕಬೇಕು ಎಂದು ಹರಪನಹಳ್ಳಿ ಪೌರಾಯುಕ್ತ ರೇಣುಕಾ ಎಸ್. ದೇಸಾಯಿ ತಿಳಿಸಿದ್ದಾರೆ.