ನಗರದಲ್ಲಿ ಗಣೇಶ ಪ್ರತಿಷ್ಠಾಪನೆಗೆ 21 ಸೂಚನೆಗಳು

| Published : Aug 31 2024, 01:31 AM IST

ಸಾರಾಂಶ

ನಗರದಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಸಂಬಂಧ ಬಲವಂತವಾಗಿ ಸಾರ್ವಜನಿಕರಿಂದ ಚಂದಾ ವಸೂಲಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಎಚ್ಚರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಸಂಬಂಧ ಬಲವಂತವಾಗಿ ಸಾರ್ವಜನಿಕರಿಂದ ಚಂದಾ ವಸೂಲಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಎಚ್ಚರಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಸೆ.7ರಂದು ನಗರದಾದ್ಯಂತ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಹಲವು ಸಂಘ-ಸಂಸ್ಥೆಗಳು ಗಣೇಶಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿವಿಧ ದಿನಗಳಲ್ಲಿ ಮೆರವಣಿಗೆ ಮಾಡಿ ವಿಸರ್ಜನೆ ಮಾಡಲಿದ್ದಾರೆ. ಗಣೇಶಮೂರ್ತಿ ಪ್ರತಿಷ್ಠಾಪನೆ ನೆಪದಲ್ಲಿ ಬಲವಂತವಾಗಿ ಚಂದಾ ವಸೂಲಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸ್ವಯಂ ಪ್ರೇರಣೆಯಿಂದ ಚಂದಾ ಕೊಟ್ಟರಷ್ಟೇ ಸ್ವೀಕರಿಸಬೇಕು. ಒಂದು ವೇಳೆ ಬಲವಂತ ಮಾಡಿದರೆ ಸಾರ್ವಜನಿಕರು 112 ಸಹಾಯವಾಣಿ ಅಥವಾ ಸ್ಥಳೀಯ ಪೊಲೀಸ್‌ ಠಾಣೆಗೆ ತಿಳಿಸುವಂತೆ ಹೇಳಿದರು.

ಈಗಾಗಲೇ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ, ನಗರ ಪೊಲೀಸ್‌ ಜಂಟಿಯಾಗಿ ಶಾಂತಿ ಸಭೆ ಮಾಡಿದ್ದೇವೆ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಸಂಬಂಧ ಅನುಮತಿ ಪಡೆಯಲು ಬಿಬಿಎಂಪಿ 63 ಏಕಗವಾಕ್ಷಿ ಕೇಂದ್ರಗಳನ್ನು ತೆರೆದಿದೆ. ಪ್ರತಿ ಕೇಂದ್ರಕ್ಕೂ ಪೊಲೀಸ್‌ ಅಧಿಕಾರಿಯನ್ನು ನೋಡೆಲ್‌ ಅಧಿಕಾರಿಯಾಗಿ ನಿಯೋಜಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡುವ ಸಮಿತಿಗಳು, ಆಯೋಜಕರಿಗೆ 21 ಸೂಚನೆಗಳನ್ನು ನೀಡಲಾಗಿದೆ. ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.

ಪ್ರಮುಖ ಸೂಚನೆಗಳು:ಸಾರ್ವಜನಿಕ ಸ್ಥಳಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ಸಂಬಂಧಿತ ಪೊಲೀಸ್‌ ಠಾಣೆಯಿಂದ ಅನುಮತಿ ಪಡೆಯಬೇಕು. ಸಾರ್ವಜನಿಕರು ಹಾಗೂ ವಾಹನ ಸಂಚಾರ ಒತ್ತಡವಿರುವ ರಸ್ತೆಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿಲ್ಲ

ಚಪ್ಪರ-ಶಾಮಿಯಾನಗಳನ್ನು ಬಂದೋಬಸ್ತ್‌ ಆಗಿ ಹಾಕಬೇಕು. ಇದಕ್ಕೆ ಬಿಬಿಎಂಪಿಯಿಂದ ಪರವಾನಗಿ ಪಡೆಯಬೇಕು.

ವಿವಾದಿತ ಸ್ಥಳಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿಲ್ಲ. ಪ್ರತಿಷ್ಠಾಪನೆ ಮಾಡುವ ಸ್ಥಳದ ಮಾಲೀಕರ ಅನುಮತಿ ಪಡೆದು ಸಂಬಂಧಿತ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು.

ಹೈಕೋರ್ಟ್‌ ನಿರ್ದೇಶದ ಅನ್ವಯ ಫ್ಲೆಕ್ಸ್‌ ಮತ್ತು ಬೋರ್ಡ್‌ಗಳ ಅಳವಡಿಕೆಗೆ ಅವಕಾಶವಿಲ್ಲ. ಈ ಸಂಬಂಧ ಬಿಬಿಎಂಪಿ ಮಾರ್ಗಸೂಚಿ ಪಾಲನೆ ಕಡ್ಡಾಯ

ಗಣೇಶ ವಿಗ್ರಹಗಳ ಸಂಬಂಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿ ಪಾಲನೆ ಕಡ್ಡಾಯ

ಗಣೇಶಮೂರ್ತಿ ಪ್ರತಿಷ್ಠಾಪನಾ ಸ್ಥಳದಲ್ಲಿ ದಿನದ 24 ತಾಸು ಇಬ್ಬರು ಜವಾಬ್ದಾರಿಯುತ ಕಾರ್ಯಕರ್ತರು ಇರಬೇಕು.

ಗಣೇಶಮೂರ್ತಿ ಪ್ರತಿಷ್ಠಾಪನಾ ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ, ಬೆಂಕಿ ನಂದಿಸುವ ಸಾಮಾಗ್ರಿಗಳನ್ನು ಇರಿಸಬೇಕು. ಸ್ಥಳೀಯ ಪೊಲೀಸ್‌ ಠಾಣೆ, ಅಗ್ನಿಶಾಮಕ ದಳದ ದೂರವಾಣಿ ಸಂಖ್ಯೆ ಹಾಗೂ ಪದಾಧಿಕಾರಿಗಳ ಮೊಬೈಲ್‌ ಸಂಖ್ಯೆಗಳನ್ನು ನಮೂದಿಸಿ ಸ್ಥಳದಲ್ಲಿ ಪ್ರದರ್ಶಿಸಬೇಕು.

*ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ ಹಾಗೂ ಸುತ್ತಮುತ್ತ ಯಾವುದೇ ಅಡುಗೆ ಮಾಡುವ ಕಟ್ಟಿಗೆ, ಉರುವಲು. ಸೀಮೆಎಣ್ಣೆ ಸಾಧನಗಳನ್ನು ಇಡಬಾರದು ಹಾಗೂ ಅಡುಗೆ ಮಾಡಬಾರದು.

ವಿದ್ಯುತ್ ಮತ್ತು ದೀಪಾಲಂಕಾರ ಸಂಬಂಧ ಬೆಸ್ಕಾಂ ಅನುಮತಿ, ಅಗ್ನಿಶಾಮಕ ದಳ ಹಾಗೂ ಸಂಚಾರ ಪೊಲೀಸರ ನಿರಪೇಕ್ಷಣಾ ಪತ್ರ (ಎನ್ಒಸಿ.) ಪಡೆಯುವುದು ಕಡ್ಡಾಯ.

ಗಣೇಶ ಮೂರ್ತಿಯ ಪ್ರತಿಷ್ಠಾನಾ ಸ್ಥಳದಲ್ಲಿ ದಿನದ 24 ತಾಸು ಸಮರ್ಪಕ ಬೆಳಕಿನ ವ್ಯವಸ್ಥೆ ಮಾಡಬೇಕು.

ಸಾರ್ವಜನಿಕರ ಆಗಮನ ಮತ್ತು ನಿರ್ಗಮನಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು. ಜನದಟ್ಟಣೆ ನಿಯಂತ್ರಿಸಲು ಸ್ವಯಂ ಸೇವಕರ ನಿಯೋಜಿಸಬೇಕು.

ಗಣೇಶಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನಾ ವೇಳೆ ಯಾವುದೇ ಅಪರಾಧಗಳು ನಡೆದರೆ ಆಯೋಜಕರೆ ಜವಾಬ್ದಾರರು.

ಹಿರಿಯ ನಾಗರಿಕರು, ಶಾಲಾ ಮಕ್ಕಳಿಗೆ ಹಾಗೂ ಇತರರಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನು ಬೆಳಗ್ಗೆ 6ರಿಂದ ರಾತ್ರಿ 10ರ ವರೆಗೆ ಮಾತ್ರ ಬಳಸಬೇಕು. ಈ ಸಂಬಂಧ ಸ್ಥಳೀಯ ಪೊಲೀಸರ ಅನುಮತಿ ಪಡೆದು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಶಬ್ಧದ ಪ್ರಮಾಣ ಕಡಿಮೆ ಇರಬೇಕು, ಡಿ.ಜೆ ಸಿಸ್ಟಂ ಅಳವಡಿಕೆಗೆ ಅವಕಾಶವಿಲ್ಲವಿಸರ್ಜನಾ ಕಾರ್ಯಕ್ರಮಕ್ಕೆ ಸೂಚನೆಗಳು:ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಆಯೋಜಕರು, ಸ್ವಯಂ ಸೇವಕರನ್ನು ಗುರತಿಸಲು ಗುರುತಿನ ಚೀಟಿ, ಬ್ಯಾಡ್ಜ್‌, ಟೀ-ಶರ್ಟ್‌ ಅಥವಾ ಕ್ಯಾಪ್‌ಗಳನ್ನು ನೀಡಬೇಕುಗಣೇಶಮೂರ್ತಿ ಪ್ರತಿಷ್ಠಾಪನಾ ಸ್ಥಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಸಂಬಂಧ ಸೂಕ್ತ ಬಂದೋಬಸ್ತ್‌ ಏರ್ಪಡಿಸಲು ಸ್ಥಳೀಯ ಪೊಲೀಸರೊಂದಿಗೆ ಸಹಕರಿಸಬೇಕು.

ಮೆರವಣಿಗೆಯು ಸೂಕ್ಷ್ಮ ಸ್ಥಳ, ಅತಿಸೂಕ್ಷ್ಮ ಸ್ಥಳ ಹಾಗೂ ಪ್ರಾರ್ಥನಾ ಸ್ಥಳಗಳ ಎದುರು ಸಾಗುವಾಗ ಸಿಡಿಮದ್ದು, ಪಟಾಕಿ ಸಿಡಿಸಬಾರದು, ಕರ್ಪೂರ ಹಚ್ಚಬಾರದು

ಮೆರವಣಿಗೆ ನಿಗದಿತ ಮಾರ್ಗದಲ್ಲೇ ಸಾಗಬೇಕು. ಮಾರ್ಗ ಬದಲಾಯಿಸಿದರೆ ಆಯೋಜಕರನ್ನೇ ನೇರ ಹೊಣೆಗಾರರಾಗಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು

ಮೆರವಣಿಗೆಯು ರಾತ್ರಿ 10 ಗಂಟೆಯೊಳಗೆ ಮುಗಿಯುವಂತೆ ಆಯೋಜಕರು ನೋಡಿಕೊಳ್ಳಬೇಕು. ಮೆರವಣಿಗೆ ವೇಳೆ ವಿದ್ಯುತ್‌ ವೈಯರ್‌ಗಳು, ಮರದ ಕೊಂಬೆಗಳ ಬಗ್ಗೆ ಗಮನಹರಿಸಬೇಕು. ಮೆರವಣಿಗೆ ಸುಸೂತ್ರವಾಗಿ ಸಾಗಲು ಅರಣ್ಯ ಮತ್ತು ಬೆಸ್ಕಾಂ ಇಲಾಖೆಯಿಂದ ಮುಂಜಾಗ್ರತಾ ಕ್ರಮ ಪಡೆದುಕೊಳ್ಳಬೇಕು.