ನಗರದ ವಿವಿಧ ಠಾಣೆಗಳ ಪೊಲೀಸರು ಗುರುವಾರ ಮಾದಕ ಜಾಲದ ವಿರುದ್ಧ ಸಮರ ಸಾರಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ದಾಳಿ ನಡೆಸಿ ಒಟ್ಟು ₹19 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡು ಇಬ್ಬರು ವಿದೇಶಿಗರು ಸೇರಿದಂತೆ 10 ಆರೋಪಿಗಳನ್ನು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ವಿವಿಧ ಠಾಣೆಗಳ ಪೊಲೀಸರು ಗುರುವಾರ ಮಾದಕ ಜಾಲದ ವಿರುದ್ಧ ಸಮರ ಸಾರಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ದಾಳಿ ನಡೆಸಿ ಒಟ್ಟು ₹19 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡು ಇಬ್ಬರು ವಿದೇಶಿಗರು ಸೇರಿದಂತೆ 10 ಆರೋಪಿಗಳನ್ನು ಬಂಧಿಸಿದ್ದಾರೆ.ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿ ದಂಪತಿಯನ್ನು ಸೆರೆ ಹಿಡಿದು ₹18.60 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಸಾರಾ ಸಿಮ್ರಾನ್ ಹಾಗೂ ಸೈಫುದ್ದೀನ್ ಬಂಧಿತ ದಂಪತಿ. ಈ ದಂಪತಿಯಿಂದ ₹18.60 ಕೋಟಿ ಮೌಲ್ಯದ 18.5 ಕೆ.ಜಿ. ಹೈಡ್ರೋ ಗಾಂಜಾ, ಕಾರು ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಕೆಲ ದಿನಗಳ ಹಿಂದೆ ರಾಣಿ ಅಬ್ಬಕ್ಕ ಆಟದ ಮೈದಾನದ ಬಳಿ ದಂಪತಿ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿರುವ ಬಗ್ಗೆ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ.ಅಕ್ರಮವಾಗಿ ಬ್ಯಾಂಕಾಕ್‌ನಿಂದ ಹೈಡ್ರೋ ಗಾಂಜಾ ತಂದು ನಗರದಲ್ಲಿ ದಂಪತಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಆದರೆ, ಈ ಆರೋಪಿಗಳಿಗೆ ಡ್ರಗ್ಸ್ ಪೂರೈಸಿದವರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಆರ್‌ಎಂಸಿ ಯಾರ್ಡ್ ಬಳಿ 8 ಕೆ.ಜಿ. ಡ್ರಗ್ಸ್:ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರ ಕಾರ್ಯಾಚರಣೆಯಲ್ಲಿ ಮತ್ತೊಬ್ಬ ಪೆಡ್ಲರ್ ಬಲೆಗೆ ಬಿದ್ದಿದ್ದಾನೆ. ಡಿ.ಜೆ.ಹಳ್ಳಿ ಅಪ್ಸರ್ ಪಾಷ ಬಂಧಿತನಾಗಿದ್ದು, ಆರೋಪಿಯಿಂದ ₹8.35 ಲಕ್ಷ ಮೌಲ್ಯದ 8 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ. ಮಹಾರಾಷ್ಟ್ರ ರಾಜ್ಯದಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ನಂತರ ನಗರದಲ್ಲಿ ಆತ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ. ಕೆಲ ದಿನಗಳ ಹಿಂದೆ ಆರ್‌ಎಂಸಿ ಯಾರ್ಡ್‌ನ ಲಾರಿ ನಿಲ್ದಾಣದ ಬಳಿ ಅಪ್ಸರ್ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದಾಗ ಖಾಕಿ ಗಾಳಕ್ಕೆ ಬಿದ್ದಿದ್ದಾನೆ. ಕ್ಯಾಟರಿಂಗ್ ಕೆಲಸ ಮಾಡಿಕೊಂಡಿದ್ದ ಅಪ್ಸರ್, ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ದಂಧೆಗಿಳಿದು ಈಗ ಜೈಲು ಸೇರಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರ್.ಟಿ.ನಗರದಲ್ಲಿ ಐವರು ಪೆಡ್ಲರ್‌ಗಳ ಸೆರೆ:ಸುಲ್ತಾನ್‌ಪಾಳ್ಯದ ಪಾನಿಪುರಿ ಮೈದಾನದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದಾಗ ಐವರು ಆರ್.ಟಿ.ನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ತ್ರಿಪುರಾ ಮೂಲದ ಮಂಜಿರೈ ದೇಬ್ರಾಮ, ಭಾಸ್ಕರ್ ಪೆಗು, ಕೃಷ್ಣ ದೇಬ್ರಾಮ, ಸತೀಶ್ ಮೆಡೋಕ್, ಬಿಸ್ವಾಜೀತ್ ಪಟೀರ್ ಬಂಧಿತರಾಗಿದ್ದು, ಆರೋಪಿಗಳಿಂದ ₹5.43 ಲಕ್ಷ ಮೌಲ್ಯದ 5.437 ಕೆ.ಜಿ. ಗಾಂಜಾವನ್ನು ಜಪ್ತಿ ಮಾಡಲಾಗಿದೆ. ತ್ರಿಪುರಾ ರಾಜ್ಯದಿಂದ ಅಕ್ರಮವಾಗಿ ಗಾಂಜಾ ತಂದು ನಗರದಲ್ಲಿ ಆರೋಪಿಗಳು ಮಾರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನೈಜೀರಿಯಾ ಪೆಡ್ಲರ್ ಸೆರೆ:ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ನೈಜೀರಿಯಾ ಮೂಲದ ಪ್ರಜೆಯೊಬ್ಬನನ್ನು ಜೆ.ಸಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಂತೋನಿ ಬಂಧಿತನಾಗಿದ್ದು, ಈತನಿಂದ ₹1.35 ಲಕ್ಷ ಮೌಲ್ಯದ 21 ಗ್ರಾಂ ಎಡಿಎಂಎ ಜಪ್ತಿಯಾಗಿದೆ. ಅದೇ ರೀತಿ ಮಲ್ಲೇಶ್ವರ ಠಾಣೆ ಪೊಲೀಸರಿಗೆ ನದೀಮ್ ಪಾಷ ಎಂಬಾತ ಸಿಕ್ಕಿಬಿದ್ದಿದ್ದಾನೆ. ಆತನ ಬಳಿ ₹76 ಸಾವಿರ ಮೌಲ್ಯದ 772 ಗ್ರಾಂ ಗಾಂಜಾ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಏರ್‌ಪೋರ್ಟಲ್ಲಿ ₹30 ಲಕ್ಷದಹೈಡ್ರೋ ಗಾಂಜಾ ವಶಕ್ಕೆ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ₹30.80 ಲಕ್ಷ ಮೌಲ್ಯದ 880 ಗ್ರಾಂ ಹೈಡ್ರೋ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಥೈಲ್ಯಾಂಡ್ ದೇಶದ ಪುಕೆಟ್ ನಗರದಿಂದ ಗುರುವಾರ ಬಂದಿಳಿದ ಓರ್ವ ವ್ಯಕ್ತಿಯನ್ನು ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು, ಆತನ ಬಳಿ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.