ಮೇ 13 ರಂದು ವರುಣ ಕ್ಷೇತ್ರದಲ್ಲೂ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಲಿನ ನಮ್ಮ ಅಭ್ಯರ್ಥಿ ಅಭಿಷೇಕ್ ನೇತೃತ್ವದಲ್ಲೇ ಸಮಾವೇಶ ಆಯೋಜಿಸಲಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಜೆಡಿಎಸ್ ಪಕ್ಷ ಸಂಘಟನೆಗಾಗಿ ಆರಂಭವಾದ ಜನರೊಂದಿಗೆ ಜನತಾದಳ ಕಾರ್ಯಕ್ರಮವು ಏ.18ರ ಸಂಜೆ 4ಕ್ಕೆ

ನಗರದ ನಂಜರಾಜ ಬಹುದ್ದೂರ್ ಛತ್ರದ ಆವರಣದಲ್ಲಿ ನಡೆಯಲಿದ್ದು, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಭಾಗವಹಿಸುವರು ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ತಿಳಿಸಿದರು.

ಇದೇ ವೇಳೆ ಜೆಡಿಎಸ್ ನಗರಾಧ್ಯಕ್ಷರಾಗಿ ಎಸ್.ಬಿ.ಎಂ. ಮಂಜು ಹಾಗೂ ಜಿಲ್ಲಾಧ್ಯಕ್ಷರಾಗಿ ಎಂ. ಅಶ್ವಿನ್ ಕುಮಾರ್ ಪದಗ್ರಹಣ ಸಹ ನಡೆಯಲಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೆ.ಆರ್. ನಗರ, ಪಿರಿಯಾಪಟ್ಟಣ, ಹುಣಸೂರು ಸೇರಿದಂತೆ ಗ್ರಾಮೀಣ ಭಾಗದಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮ ಯಶಸ್ವಿಯಾಗಿದೆ. ಜೆಡಿಎಸ್ ಕೇವಲ ಗ್ರಾಮೀಣ ಭಾಗಕ್ಕೆ ಸೀಮಿತ, ನಗರ ಪ್ರದೇಶದಲ್ಲಿ ಅದಕ್ಕೆ ಶಕ್ತಿ ಇಲ್ಲ ಎನ್ನುತ್ತಾರೆ. ಆದರೆ, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು. ಅದರಂತೆ ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಚಾಮುಂಡೇಶ್ವರಿಯಲ್ಲಿ ಸಮಾರೋಪ

ಮೇ 13 ರಂದು ವರುಣ ಕ್ಷೇತ್ರದಲ್ಲೂ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಲಿನ ನಮ್ಮ ಅಭ್ಯರ್ಥಿ ಅಭಿಷೇಕ್ ನೇತೃತ್ವದಲ್ಲೇ ಸಮಾವೇಶ ಆಯೋಜಿಸಲಾಗಿದೆ. ನಂಜನಗೂಡಿನಲ್ಲೂ ಸಭೆ ಇರಲಿದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಎಚ್.ಡಿ. ಕುಮಾರಸ್ವಾಮಿ ಭಾಗವಹಿಸಲಿದ್ದು, ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಮುಖಂಡರ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ ಎಂದರು.

ಹಾಗೆಯೇ, ಪಕ್ಷದಲ್ಲಿ ಇರುವವರು ಕಾರ್ಯಕ್ರಮಕ್ಕೆ ಬರುತ್ತಾರೆ. ಪಕ್ಷದಲ್ಲಿ ಇಲ್ಲದವರು ಬರುವುದಿಲ್ಲ. ಹೀಗಾಗಲೇ ವರಿಷ್ಠರು ಇದನ್ನು ಸ್ಪಷ್ಟಪಡಿಸಿದ್ದಾರೆ. ಅದನ್ನು ಮತ್ತೊಮ್ಮೆ ಹೇಳುವ ಅಗತ್ಯ ಇಲ್ಲ ಎಂದು ಶಾಸಕ ಜಿ.ಟಿ. ದೇವೇಗೌಡರು ಪಕ್ಷದಲ್ಲಿ ಇಲ್ಲ ಎಂದು ಅವರು ಪರೋಕ್ಷವಾಗಿ ಹೇಳಿದರು.

ವಿಧಾನಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ಕೆ. ವಿವೇಕಾನಂದ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಅಶ್ವಿನ್‌ ಕುಮಾರ್, ನಗರಾಧ್ಯಕ್ಷ ಎಸ್‌.ಬಿ.ಎಂ. ಮಂಜು, ಮಾಜಿ ಮೇಯರ್ ಆರ್. ಲಿಂಗಪ್ಪ, ಮುಖಂಡರಾದ ಚೆಲುವೇಗೌಡ, ಎಚ್.ಕೆ. ರಾಮು, ಪ್ರೇಮಾ ಶಂಕರೇಗೌಡ ಮೊದಲಾದವರು ಇದ್ದರು.