ಕನ್ನಡಪ್ರಭ ವಾರ್ತೆ ಬೆಳಗಾವಿ

ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಮಂಗಳವಾರ ಸಂಜೆ ಗುಡುಗುಸಹಿತ ಭಾರೀ ಮಳೆ ಸುರಿಯಿತು. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಬೆಳಗ್ಗೆಯಿಂದಲೇ ಬಿಸಿಲಿನ ಪ್ರಖರತೆ ತೀವ್ರವಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ, ಸಂಜೆ ಹೊತ್ತಿಗೆ ಸುರಿದ ಮಳೆಯ ಆರ್ಭಟಕ್ಕೆ ಜನಜೀವನ ಸಂಪೂರ್ಣವಾಗಿ ವ್ಯತ್ಯಯಗೊಂಡಿತು. ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ನಗರದ ಚನ್ನಮ್ಮ ವೃತ್ತ, ಕ್ಯಾಂಪ್, ಖಡೇಬಜಾರ್ ಹಾಗೂ ಪೋರ್ಟ್ ರೋಡ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆಗಳು ನದಿಯಂತೆ ಭಾಸವಾಗುತ್ತಿದ್ದವು. ತೆಗ್ಗು ಪ್ರದೇಶಗಳ ಮನೆಗಳಿಗೆ ಮಳೆನೀರು ನುಗ್ಗಿ ಜನರು ಸಂಕಷ್ಟ ಅನುಭವಿಸಬೇಕಾಯಿತು. ದಿನನಿತ್ಯದ ಚಟುವಟಿಕೆಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ರಾತ್ರಿವರೆಗೂ ಜಿಟಿಜಿಟಿ ಮಳೆ ಮುಂದುವರೆದಿತ್ತು.

ಡಿಸಿ ಕಚೇರಿಯಲ್ಲಿ ಅವಾಂತರ:

ಭಾರೀ ಮಳೆಯ ಪರಿಣಾಮ ನವೀಕರಣಗೊಂಡ ಜಿಲ್ಲಾಧಿಕಾರಿ ಕಚೇರಿಯಲ್ಲಿಯೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ಮೊದಲ ಮಹಡಿಗೆ ನೀರು ನುಗ್ಗಿ ಸಿಬ್ಬಂದಿ ಮತ್ತು ಸಾರ್ವಜನಿಕರು ತೊಂದರೆ ಅನಭವಿಸುವಂತಾಯಿತು. ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಇತ್ತೀಚೆಗೆ ನವೀಕರಣಗೊಂಡ ಈ ಕಟ್ಟಡದ ಛಾವಣಿಯಿಂದಲೇ ನೀರು ಸೋರಿಕೆಯಾಗಿದ್ದು, ಲೆಕ್ಕಪತ್ರ ವಿಭಾಗ, ಗಣಕಯಂತ್ರ ವಿಭಾಗ, ಸಾರ್ವಜನಿಕರ ನಿರೀಕ್ಷಣಾ ಕೋಣೆ, ಇಂಟರ್ನೆಟ್ ರೂಮ್ ಸೇರಿದಂತೆ ಹಲವು ಕೊಠಡಿಗಳಲ್ಲಿ ನೀರು ತುಂಬಿಕೊಂಡಿತ್ತು. ಕೆಲವು ಸಿಬ್ಬಂದಿ ಕುರ್ಚಿಗಳನ್ನು ಖಾಲಿ ಮಾಡಿ ಹೊರಬಂದರೆ, ಇನ್ನೂ ಕೆಲವರು ನೀರಿನಲ್ಲೇ ಕುಳಿತು ಕೆಲಸ ನಿರ್ವಹಿಸುತ್ತಿದ್ದದ್ದು ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿತ್ತು.-----------