ನಗರದ ಮೊದಲ ಕ್ಯಾಶ್‌ಲೆಸ್‌ ಪಾರ್ಕಿಂಗ್‌!

| Published : Jun 18 2024, 12:54 AM IST

ಸಾರಾಂಶ

ಗಾಂಧಿನಗರದ ಬಹುಮಹಡಿ ವಾಹನ ನಿಲುಗಡೆ ಕಟ್ಟಡ ಇದೀಗ ದೇಶದಲ್ಲೇ ಮೊದಲ ಬಾರಿಗೆ ಸರ್ಕಾರಿ ವಾಹನ ನಿಲುಗಡೆ ಕಟ್ಟಡದಲ್ಲಿ ಅಡ್ವಾನ್ಸ್‌ ಪಾರ್ಕಿಂಗ್‌ ತಂತ್ರಜ್ಞಾನ (ಎಪಿಟಿ) ಹೊಂದಿದ ಹೆಗ್ಗಳಿಕೆಯೊಂದಿಗೆ ಜೂನ್‌ 20ರಂದು ಉದ್ಘಾಟನೆಗೊಳ್ಳುತ್ತಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಲವು ವರ್ಷಗಳಿಂದ ಖಾಲಿ ಇದ್ದಂತಹ ಗಾಂಧಿನಗರದ ಬಹುಮಹಡಿ ವಾಹನ ನಿಲುಗಡೆ ಕಟ್ಟಡ ಇದೀಗ ದೇಶದಲ್ಲೇ ಮೊದಲ ಬಾರಿಗೆ ಸರ್ಕಾರಿ ವಾಹನ ನಿಲುಗಡೆ ಕಟ್ಟಡದಲ್ಲಿ ಅಡ್ವಾನ್ಸ್‌ ಪಾರ್ಕಿಂಗ್‌ ತಂತ್ರಜ್ಞಾನ (ಎಪಿಟಿ) ಹೊಂದಿದ ಹೆಗ್ಗಳಿಕೆಯೊಂದಿಗೆ ಜೂನ್‌ 20ರಂದು ಉದ್ಘಾಟನೆಗೊಳ್ಳುತ್ತಿದೆ.

ಕಾಮಗಾರಿ ಪೂರ್ಣಗೊಂಡರೂ ಗುತ್ತಿಗೆದಾರರು ಸಿಗದೆ ಪಾಳುಬಿದ್ದ ಕಟ್ಟಡದಂತಾಗಿದ್ದ ಗಾಂಧಿನಗರ ವಾಹನ ನಿಲುಗಡೆ ಕಟ್ಟಡ ಕೊನೆಗೂ ಬಳಕೆಗೆ ಸಿದ್ಧವಾಗಿದೆ. ಪ್ರಿನ್ಸ್‌ ರಾಯಲ್‌ ಪಾರ್ಕಿಂಗ್‌ ಸಂಸ್ಥೆ ಕಟ್ಟಡದ ನಿರ್ವಹಣೆ ಮತ್ತು ವಾಹನ ನಿಲುಗಡೆ ಶುಲ್ಕ ವಸೂಲಿಯ ಗುತ್ತಿಗೆ ಪಡೆದಿದೆ.

ನೂತನ ವಾಹನ ನಿಲುಗಡೆ ಸೌಲಭ್ಯದಿಂದ ಗಾಂಧಿನಗರ, ಮೆಜೆಸ್ಟಿಕ್‌ ಸುತ್ತಲಿನ ಪ್ರದೇಶಗಳಲ್ಲಿನ ವಾಹನ ನಿಲುಗಡೆಗೆ ಸಮಸ್ಯೆಗೆ ಪರಿಹಾರ ದೊರಕಲಿದೆ. ಒಮ್ಮೆಲೇ 600 ಕಾರು ಹಾಗೂ 750 ಬೈಕ್‌ಗಳು ನಿಲುಗಡೆ ಸ್ಥಳಾವಕಾಶವಿದೆ. ಜತೆಗೆ ವಾಹನ ನಿಲುಗಡೆ ಕಟ್ಟಡದಲ್ಲಿ ಮಹಿಳೆಯರು ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಸ್ಥಳಾವಕಾಶ ನಿಗದಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಕ್ಯಾಶ್‌ಲೆಸ್‌ ವ್ಯವಸ್ಥೆ:

ವಾಹನ ನಿಲುಗಡೆ ಕಟ್ಟಡ ನಗದು ರಹಿತ ಹಾಗೂ ಮಾನವ ರಹಿತ ಅಡ್ವಾನ್ಸ್‌ ಪಾರ್ಕಿಂಗ್‌ ತಂತ್ರಜ್ಞಾನ ಹೊಂದಿದೆ. ವಾಹನ ನಿಲುಗಡೆ ಶುಲ್ಕವನ್ನು ಫಾಸ್ಟ್ಯಾಗ್‌, ಯುಪಿಐ ಪೇಮೆಂಟ್‌ ಆ್ಯಪ್‌ಗಳ ಮೂಲಕ ಪಾವತಿಸಬಹುದಾಗಿದೆ. ಫಾಸ್ಟ್ಯಾಗ್‌, ಯುಪಿಐ ಆ್ಯಪ್‌ ಇಲ್ಲದಿದ್ದರೆ ನಗದು ಮೂಲಕ ಶುಲ್ಕ ತೆಗೆದುಕೊಳ್ಳಲಾಗುತ್ತದೆ. ವಾಹನ ನಿಲುಗಡೆಗೆ ಕಟ್ಟಡ ಪ್ರವೇಶಿಸುವಾಗಲೇ ಚಾಲಕ ಹಾಗೂ ವಾಹನದ ಛಾಯಾಚಿತ್ರ ತೆಗೆಯಲಾಗುತ್ತದೆ. ಕಟ್ಟಡದ ಅಲ್ಲಲ್ಲಿ ಎಲ್‌ಇಡಿಗಳನ್ನು ಅಳವಡಿಸಿ ಯಾವ ಸ್ಥಳದಲ್ಲಿ ಪಾರ್ಕಿಂಗ್‌ ಇದೆ ಎಂಬುದನ್ನು ಪ್ರದರ್ಶಿಸಲಾಗುತ್ತದೆ. ಅದರಿಂದ ವಾಹನ ಚಾಲಕರು ಸ್ಥಳಾವಕಾಶಕ್ಕಾಗಿ ಪರದಾಡುವುದು ತಪ್ಪಲಿದೆ. ಅಡ್ವಾನ್ಸ್‌ ಪಾರ್ಕಿಂಗ್‌ ತಂತ್ರಜ್ಞಾನ ಅಳವಡಿಕೆಗೆ ಗುತ್ತಿಗೆ ಸಂಸ್ಥೆ ₹7 ಕೋಟಿಗೂ ಹೆಚ್ಚು ವೆಚ್ಚ ಮಾಡಿದೆ.ಉಚಿತ ವೈಫೈ, ಇವಿ ಚಾರ್ಚಿಂಗ್‌ ಕೇಂದ್ರ:

ಕಟ್ಟಡದ ಎಲ್ಲ ಮೂರು ಮಹಡಿಯಲ್ಲೂ ವೈಫೈ ವ್ಯವಸ್ಥೆ, ಪ್ರತಿ ಮಹಡಿಯಲ್ಲೂ ಎಲೆಕ್ಟ್ರಿಕ್‌ ವಾಹನಗಳಿಗಾಗಿ ಪ್ರತ್ಯೇಕ ಚಾರ್ಜಿಂಗ್‌ ಕೇಂದ್ರ ಸ್ಥಾಪಿಸಲಾಗಿದೆ. ಜತೆಗೆ ಪ್ರತಿ ಮಹಡಿಯಲ್ಲಿ ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ತುರ್ತು ಸಂದರ್ಭಕ್ಕಾಗಿ ಆ್ಯಂಬುಲೆನ್ಸ್‌ ನಿಯೋಜಿಸಲಾಗುತ್ತಿದೆ. ಮಹಿಳೆಯರ ಸುರಕ್ಷತೆ ಹಾಗೂ ತುರ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯಕ್ಕಾಗಿ ಪ್ರತಿ ಮಹಡಿಯಲ್ಲೂ ಎಸ್‌ಒಎಸ್‌ ಬಟನ್‌ ಇರಲಿದ್ದು, ಅದನ್ನು ಒತ್ತಿದರೆ ಅಲ್ಲಿನ ಸಿಬ್ಬಂದಿ ತಕ್ಷಣಕ್ಕೆ ನೆರವಿಗೆ ಬರುತ್ತಾರೆ.ವಾಹನ ನಿಲ್ಲಿಸುವವರಿಗೆ ಪಿಕಪ್‌-ಡ್ರಾಪ್‌

ವಾಹನ ನಿಲುಗಡೆ ಮಾಡಿ ತಮ್ಮ ಕೆಲಸಕ್ಕೆ ತೆರಳುವವರಿಗೆ ಪಿಕಪ್‌ ಮತ್ತು ಡ್ರಾಪ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಒಟ್ಟು ಮೂರು ವಾಹನಗಳನ್ನು ಅದಕ್ಕಾಗಿ ಮೀಸಲಿಡಲಾಗುತ್ತಿದ್ದು, ಒಂದು ವಾಹನ ವಿಧಾನಸೌಧ, ಮತ್ತೊಂದು ವಾಹನ ಚಿಕ್ಕಪೇಟೆ, ಬಿವಿಕೆ ಐಯ್ಯಂಗಾರ್‌ ರಸ್ತೆ ಹಾಗೂ ಮೂರನೇ ವಾಹನ ಮೆಜೆಸ್ಟಿಕ್‌ನ ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ ಕಡೆಗೆ ತೆರಳುವಂತೆ ಮಾಡಲಾಗುತ್ತಿದೆ. ಪ್ರತಿ 15 ನಿಮಿಷಕ್ಕೊಂದು ವಾಹನ ಪಿಕಪ್‌-ಡ್ರಾಪ್‌ ವ್ಯವಸ್ಥೆ ಮಾಡಲಿದೆ.

ಬಿಬಿಎಂಪಿಗೆ ವಾರ್ಷಿಕ ₹1.50 ಕೋಟಿ ಆದಾಯ

ಗುತ್ತಿಗೆದಾರರಿಂದ ಬಿಬಿಎಂಪಿಗೆ ವಾರ್ಷಿಕ ₹1.50 ಕೋಟಿ ಆದಾಯ ಬರಲಿದೆ. ಪ್ರತಿವರ್ಷ ಆ ಮೊತ್ತ ಶೇ.10ರಷ್ಟು ಹೆಚ್ಚಳವಾಗಲಿದೆ. ಸದ್ಯ ಗುತ್ತಿಗೆ ಪಡೆದಿರುವ ಪ್ರಿನ್ಸ್‌ ರಾಯಲ್‌ ಪಾರ್ಕಿಂಗ್‌ ಸಂಸ್ಥೆ 15 ವರ್ಷ ನಿರ್ವಹಣೆ ಮಾಡಲಿದೆ. ಅಲ್ಲದೆ, ಪಾರ್ಕಿಂಗ್‌ ಶುಲ್ಕವನ್ನು ಆ ಸಂಸ್ಥೆಯೇ ವಸೂಲಿ ಮಾಡಲಿದ್ದು, ಬಿಬಿಎಂಪಿಗೆ ಗುತ್ತಿಗೆ ವೇಳೆ ನಿಗದಿ ಮಾಡಿರುವಂತೆ ಹಣವನ್ನು ನೀಡಲಿದೆ.

ವಾಹನ ನಿಲುಗಡೆ ಶುಲ್ಕ (₹)ಗಂಟೆದ್ವಿಚಕ್ರಕಾರು0-115251-225402-440654-655906-8701158-108514010-12100165ಇದೇ ಮೊದಲ ಬಾರಿಗೆ ಸರ್ಕಾರಿ ವಾಹನ ನಿಲುಗಡೆ ಕಟ್ಟಡದಲ್ಲಿ ಅಡ್ವಾನ್ಸ್‌ ಪಾರ್ಕಿಂಗ್‌ ತಂತ್ರಜ್ಞಾನ ಅಳವಡಿಸಲಾಗಿದೆ. ವಾಹನ ನಿಲುಗಡೆ ಮಾಡುವವರಿಗೆ ಪಿಕಪ್‌-ಡ್ರಾಪ್‌ ವ್ಯವಸ್ಥೆಯನ್ನೂ ನೀಡಲಾಗುತ್ತದೆ. ಗಾಂಧಿನಗರ, ಮೆಜೆಸ್ಟಿಕ್‌ ಸೇರಿದಂತೆ ಸುತ್ತಲಿನ ಪ್ರದೇಶಗಳ ವಾಹನ ನಿಲುಗಡೆ ಸಮಸ್ಯೆ ಪರಿಹಾರವಾಗಲಿದೆ.

ಕುಮಾರ್‌, ಪ್ರಿನ್ಸ್‌ ರಾಯಲ್‌ ಪಾರ್ಕಿಂಗ್‌ನ ವ್ಯವಸ್ಥಾಪಕ ನಿರ್ದೇಶಕ.