ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ನಗರದ ಕ್ಯಾತ್ಸಂದ್ರದಲ್ಲಿ ಭಾನುವಾರ ನಾಗರಿಕ ಸಮಿತಿಯವರು ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಿದರು. ಚಂದ್ರಮೌಳೇಶ್ವಸ್ವಾಮಿ ವೃತ್ತದಲ್ಲಿ ನಡೆದ ಸಮಾರಂಭದಲ್ಲಿ ಸರ್ವಜನಾಂಗದ ಮುಖಂಡರು ಮಹರ್ಷಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.ನಾಗರಿಕ ಸಮಿತಿಯ ಮುಖಂಡ ಜಿ.ಆರ್.ರವಿ ಮಾತನಾಡಿ, ವಾಲ್ಮೀಕಿಯವರು ಬೇಡರ ಪೂರ್ವಜರಾದರೂ ಅವರು ಸರ್ವಜನರೂ ಗೌರವಿಸುವ ಮಹನೀಯರು. ಆವರು ರಚಿಸಿದ ರಾಮಾಯಣ ಸರ್ವಶ್ರೇಷ್ಠ ಮಹಾನ್ ಗ್ರಂಥವಾಗಿ ಸಾರ್ವಕಾಲಿಕ ಮನ್ನಣೆ ಪಡೆದಿದೆ. ಆದರ್ಶ ಬದುಕಿಗೆ ರಾಮಾಯಣ ಕೃತಿ ಮಾರ್ಗದರ್ಶಿಯಾಗಿ ಎಲ್ಲರಿಗೂ ಮಾದರಿಯಾಗಿದೆ. ಇಂತಹ ವಾಲ್ಮೀಕಿಯ ಜಯಂತಿ ಒಂದು ಸಮಾಜಕ್ಕೆ ಸೀಮಿತವಾಗದೆ ಎಲ್ಲಾ ಸಮಾಜದವರೂ ಆಚರಿಸಿ ಗೌರವಿಸುತ್ತಾರೆ ಎಂದು ಹೇಳಿದರು.
ಇಂದು ಎಲ್ಲಾ ಸಮಾಜದವರೂ ಒಳಗೊಂಡು ಮಹರ್ಷಿಯ ಜಯಂತಿ ಆಚರಣೆ ಮಾಡಲಾಗುತ್ತದೆ. ಎಲ್ಲರೂ ಒಂದಾಗಿ ಭಾವೈಕ್ಯತೆಯಿಂದ ಬಾಳಬೇಕೆಂಬ ವಾಲ್ಮೀಕಿಯವರ ಆಶಯ, ಆದರ್ಶಗಳನ್ನು ಅನುಸರಿಸಿ ಬಾಳಬೇಕು. ಸರ್ವಸಮಾನ ಸಮಾಜ ನಿರ್ಮಾಣವಾಗಬೇಕು ಎಂದು ಜಿ.ಆರ್.ರವಿ ಹೇಳಿದರು.ಬಿಜೆಪಿ ಮುಖಂಡ ಪ್ರೇಮ್‌ಕುಮಾರ್ ಮಾತನಾಡಿ, ವಾಲ್ಮೀಕಿಯಂತಹ ಅನೇಕ ಮಹಾನ್ ಪುರುಷರು ಮಾನವಕುಲಕ್ಕೆ ದಾರಿದೀಪವಾಗಿದ್ದಾರೆ, ಆವರು ಹಾಕಿಕೊಟ್ಟ ದಾರಿಯಲ್ಲಿ ಸಾಗಿದರೆ ಮಾನವತೆಯ ಸಮಾಜ ಸಾಧ್ಯವಾಗುತ್ತದೆ. ತಪ್ಪುಗಳನ್ನು ಅರಿತು, ಬದಲಾದರೆ ಮನುಷ್ಯ ಮಹಾನ್ ವ್ಯಕ್ತಿಯಾಗಬಹುದು ಎಂಬುದಕ್ಕೆ ವಾಲ್ಮೀಕಿಯವರೇ ಸಾಕ್ಷಿಯಾಗಿದ್ದಾರೆ. ಅವರು ರಚಿಸಿದ ರಾಮಾಯಣದ ತತ್ವ, ಸಾರಾಂಶಗಳು ಮನುಷ್ಯನ ಬದುಕನ್ನು ಪರಿವರ್ತನೆ ಮಾಡುತ್ತವೆ ಎಂದು ಹೇಳಿದರು.
ಈ ವೇಳೆ ಸಮಾಜದ ಹಿರಿಯ ನಾಗರೀಕರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಚಂದ್ರಮೌಳೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರು, ನಗರಪಾಲಿಕೆ ಮಾಜಿ ಉಪಮೇಯರ್ ಧನಲಕ್ಷಿö್ಮ ರವಿ, ಮುಖಂಡರಾದ ಅರುಣ್ ಪಟೇಲ್, ಯಜಮಾನ್ ರವೀಶ್, ಪ್ರತಾಪ್ ಮದಕರಿ, ಉಮೇಶ್, ಕಾಂತಣ್ಣ, ಬೊಮ್ಮನಹಳ್ಳಿ ವೆಂಕಟೇಶ್, ನಾಗಣ್ಣ, ಗೋಪಾಲ್, ಭೀಮಣ್ಣ, ನಿವೃತ್ತ ಪ್ರಾಚಾರ್ಯ ಮರಿಬಸಪ್ಪ, ಬಸವರಾಜು, ರೇಣುಕಮ್ಮ, ಇನಾಯತ್, ಕೃಷ್ಣಮೂರ್ತಿ ಸೇರಿದಂತೆ ಕ್ಯಾತ್ಸಂದ್ರದ ಹಲವು ಪ್ರಮುಖರು ಸಮಾರಂಭದಲ್ಲಿ ಭಾಗವಹಿಸಿದ್ದರು.