ಸಾರಾಂಶ
ನಗರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಜತೆಗೆ ನಗರದ ಜನತೆಯ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ನಗರಸಭೆ ಅಧ್ಯಕ್ಷ ಎಂ ಸಮಿವುಲ್ಲಾ ಹೇಳಿದರು. ಮುಂಜಾನೆ 5 ಗಂಟೆಗೆ ನಗರಸಭೆಗೆ ಆಗಮಿಸಿದ ಅಧ್ಯಕ್ಷ ಸಮಿವುಲ್ಲಾ ಹಾಗೂ ಉಪಾಧ್ಯಕ್ಷ ಮನೋಹರ ಮೇಸ್ತ್ರಿ ನಗರಸಭೆಯ ಪೌರಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಿದರಲ್ಲದೆ ಅವರ ಕುಂದುಕೊರತೆಯನ್ನು ಸಹ ಆಲಿಸಿದರು. ನಗರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಸೇವಾ ಕಾರ್ಯದಲ್ಲಿ ತೊಡಗಿರುವ ನೀವು ಸಹ ತಮ್ಮ ಆರೋಗ್ಯದ ಬಗ್ಗೆ ಕೂಡ ಕಾಳಜಿ ವಹಿಸಬೇಕು ಹಾಗೂ ನಗರಸಭೆ ವತಿಯಿಂದ ನೀಡುವ ಊಟ ಮತ್ತು ಉಪಹಾರವನ್ನು ಸಹ ಸಕಾಲದಲ್ಲಿ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಿ ಎಂದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಜತೆಗೆ ನಗರದ ಜನತೆಯ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ನಗರಸಭೆ ಅಧ್ಯಕ್ಷ ಎಂ ಸಮಿವುಲ್ಲಾ ಹೇಳಿದರು.ಮುಂಜಾನೆ 5 ಗಂಟೆಗೆ ನಗರಸಭೆಗೆ ಆಗಮಿಸಿದ ಅಧ್ಯಕ್ಷ ಸಮಿವುಲ್ಲಾ ಹಾಗೂ ಉಪಾಧ್ಯಕ್ಷ ಮನೋಹರ ಮೇಸ್ತ್ರಿ ನಗರಸಭೆಯ ಪೌರಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಿದರಲ್ಲದೆ ಅವರ ಕುಂದುಕೊರತೆಯನ್ನು ಸಹ ಆಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿವುಲ್ಲಾ, ನಗರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಸೇವಾ ಕಾರ್ಯದಲ್ಲಿ ತೊಡಗಿರುವ ನೀವು ಸಹ ತಮ್ಮ ಆರೋಗ್ಯದ ಬಗ್ಗೆ ಕೂಡ ಕಾಳಜಿ ವಹಿಸಬೇಕು ಹಾಗೂ ನಗರಸಭೆ ವತಿಯಿಂದ ನೀಡುವ ಊಟ ಮತ್ತು ಉಪಹಾರವನ್ನು ಸಹ ಸಕಾಲದಲ್ಲಿ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಿ. ಇದನ್ನು ಹೊರತುಪಡಿಸಿ ನಗರದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ನಿಮಗೆ ಬೇಕಾಗಿರುವ ಎಲ್ಲಾ ಸಲಕರಣೆ ಮತ್ತು ಸೌಲಭ್ಯಗಳನ್ನು ಕಲ್ಪಿಸಿಕೊಡಲು ನಗರಸಭೆ ಬದ್ಧವಾಗಿದೆ ಎಂದರು.ಮುಂದಿನ ದಿನಗಳಲ್ಲಿ ಸ್ಥಳೀಯ ವಾರ್ಡ್‌ನ ಸದಸ್ಯರೊಂದಿಗೆ ವಾರ್ಡ್‌ವಾರು ಪರ್ಯಾಟನೆ ನಡೆಸಿ ನಗರದ ಅಭಿವೃದ್ಧಿ ದೃಷ್ಟಿಯಿಂದ ಕೈಗೊಳ್ಳಬೇಕಾದ ಕೆಲಸ ಕಾರ್ಯಗಳ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಪೌರಕಾರ್ಮಿಕರ ಸಹಕಾರ ಕೂಡ ಅಗತ್ಯವಾಗಿದೆ. ವಾರ್ಡ್‌ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಂದ ದೂರು ಬಂದರೆ ಅದರ ಜವಾಬ್ದಾರಿಯನ್ನ ನಗರಸಭೆ ಆರೋಗ್ಯ ನಿರೀಕ್ಷಕರೇ ಹೊರಬೇಕಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ಸಹ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕರಾದ ರೇವಣ್ಣ, ಲಿಂಗರಾಜು, ಗೌಸ್ ಇತರರು ಉಪಸ್ಥಿತರಿದ್ದರು.