ತುಂಗಭದ್ರಾ ಎಡದಂಡೆ ಅವ್ಯವಹಾರ 18 ನಿವೃತ್ತ ಅಧಿಕಾರಿಗಳ ವಿರುದ್ಧ ಸಿವಿಲ್‌ ಕೇಸ್‌

| Published : Jan 29 2024, 01:38 AM IST

ತುಂಗಭದ್ರಾ ಎಡದಂಡೆ ಅವ್ಯವಹಾರ 18 ನಿವೃತ್ತ ಅಧಿಕಾರಿಗಳ ವಿರುದ್ಧ ಸಿವಿಲ್‌ ಕೇಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ವಾರವಷ್ಟೇ ಕಾಮಗಾರಿಗಳಲ್ಲಿನ ಅವ್ಯವಹಾರದಲ್ಲಿ ಭಾಗಿಯಾಗಿರುವ ಸೇವೆಯಲ್ಲಿರುವ ನೌಕರನ್ನು ಅಮಾನತ್ತುಗೊಳಿಸಲು ಆದೇಶಿಸಿದ್ದ ಸರ್ಕಾರ ಈಗ ನಿವೃತ್ತಿ ಹೊಂದಿರುವ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಸೂಚಿಸಿದೆ.

ಬೆಂಗಳೂರು: ತುಂಗಭದ್ರಾ ಎಡದಂಡೆ ಕಾಲುವೆಯ 2009-10 ಮತ್ತು 2010-11ನೇ ಸಾಲಿನ ಆಧುನಿಕರಣ ಕಾಮಗಾರಿಗಳ ಅವ್ಯವಹಾರದಲ್ಲಿ ಭಾಗಿಯಾಗಿರುವ ನೀರಾವರಿ ಇಲಾಖೆ 18 ಮಂದಿ ನಿವೃತ್ತ ಅಧಿಕಾರಿಗಳ ವಿರುದ್ಧ ಸಿವಿಲ್ ಮೊಕದ್ದಮೆ ದಾಖಲಿಸಲು ಸರ್ಕಾರ ಸೂಚಿಸಿದೆ.

ಈ ಎರಡು ವರ್ಷದ ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮ ಸಂಬಂಧ ವಿಚಕ್ಷಣಾ ದಳ ಮತ್ತು ಕ್ಯಾಪ್ಟರ್‌ ರಾವ್‌ ಹಾಗೂ ಎನ್‌.ವೆಂಕಟೇಶಯ್ಯಅವರು ನೀಡಿರುವ ವರದಿ ಸಲ್ಲಿಸಿದ್ದರು. ಇದನ್ನು ಆಧರಿಸಿ ಕಾಮಗಾರಿಗಳಿಗೆ ಕೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಅವ್ಯವಹಾರದಲ್ಲಿ ಭಾಗಿಯಾಗಿರುವ 46 ಅಧಿಕಾರಿ/ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕರಡು ದೋಷರೋಪಣ ಪಟ್ಟಿಯೊಂದಿಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ನೀರಾವರಿ ಇಲಾಖೆಯು ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ನಿವೃತ್ತಿ ಹೊಂದಿರುವ ಹಾಗೂ ನಿಧನ ಹೊಂದಿರುವ ಅಧಿಕಾರಿಗಳ ವಿರುದ್ಧ ಸಿವಿಲ್ ಮೊಕದ್ದಮೆ ಹೂಡಲು ಸೂಚಿಸಿದೆ.

ಕಳೆದ ವಾರವಷ್ಟೇ ಕಾಮಗಾರಿಗಳಲ್ಲಿನ ಅವ್ಯವಹಾರದಲ್ಲಿ ಭಾಗಿಯಾಗಿರುವ ಸೇವೆಯಲ್ಲಿರುವ ನೌಕರನ್ನು ಅಮಾನತ್ತುಗೊಳಿಸಲು ಆದೇಶಿಸಿದ್ದ ಸರ್ಕಾರ ಈಗ ನಿವೃತ್ತಿ ಹೊಂದಿರುವ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಸೂಚಿಸಿದೆ. ಎರಡು ತಿಂಗಳ ಹಿಂದೆಯಷ್ಟೇ ಇದೇ ಪ್ರಕರಣದಲ್ಲಿ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರು ಶಿವಕುಮಾರ್ ಅವರನ್ನು ಅಮಾನತ್ತು ಮಾಡಲಾಗಿತ್ತು.

13 ಪ್ರಕರಣಗಳಲ್ಲಿ 2009-10ನೇ ಸಾಲಿನಲ್ಲಿ ಘೋಷಿಸಿರುವ ಅವಾರ್ಡ್‌ಗಳು ಕೊಟ್ಟಿ ದಾಖಲೆಗಳಿಂದ ಕೂಡಿರುವುದಾಗಿ ಹಾಗೂ ಇದರಿಂದ ಸರ್ಕಾರ ಹಾಗೂ ಕೃಷ್ಣ ಜಲಭಾಗ್ಯ ನಿಗಮಕ್ಕೆ ಸುಮಾರು 650 ಕೋಟಿ ರು. ನಷ್ಟ ಉಂಟಾಗಬಹುದಾಗಿ ಈಗಾಗಲೇ ವಿಚಕ್ಷಣಾ ದಳವು ತನಿಖೆ ನಡೆಸಿ ವರದಿ ನೀಡಿತ್ತು. ಅಲ್ಲದೆ, 2010-11ನೇ ಸಾಲಿನ 4 ಪ್ರಕರಣಗಳಲ್ಲಿ ಕೂಡ ಮುಖ್ಯ ಇಂಜಿನಿಯರ್‌ರವರ ಪರಿಶೀಲನಾ ವರದಿ ಮತ್ತು ಗುತ್ತಿಗೆ ಕರಾರಿನಡಿ ಹಾಗೂ ನೋಡಲ್ ಪ್ರಾವಿಜನ್ಸ್‌ ಅನ್ವಯ ನಿರ್ವಹಿಸಬೇಕಾದ ಯಾವುದೇ ದಾಖಲೆಗಳು ಇಲ್ಲದೆ ಮಣ್ಣಿನ ಕೆಲಸವನ್ನು ದೊಡ್ಡ ಮೊತ್ತಕ್ಕೆ ಗುತ್ತಿಗೆದಾರರು ಕ್ಷೇಮ್ ಮಾಡಿರುವುದಾಗಿ ಹಾಗೂ ಈ ಪ್ರಮಾಣದ ಮಣ್ಣಿನ ಕೆಲಸವನ್ನು ಗುತ್ತಿಗೆದಾರರು ಕಾಮಗಾರಿ ನಡೆಸಿರುವ ದಿನಗಳಲ್ಲಿ ನಿರ್ವಹಿಸುವುದು ಅಸಾಧ್ಯವೆಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಕ್ಯಾಪ್ಟನ್ ರಾಜಾ ರಾವ್ ಹಾಗೂ ಎನ್. ವೆಂಕಟೇಶಯ್ಯರವರ ವರದಿಗಳಿಂದ ವ್ಯಕ್ತವಾಗಿತ್ತು.

ತುಂಗಭದ್ರಾ ಎಡದಂಡೆ ಕಾಲುವೆ ಅವ್ಯವಹಾರ ಒಂದು ಉದಾಹರಣೆಯಷ್ಟೆ. ಇಂತಹ ನೂರಾರು ವ್ಯವಹಾರಗಳು ನೀರಾವರಿ ಇಲಾಖೆಯ ವಿವಿಧ ಯೋಜನೆಗಳಲ್ಲಿ ನಡೆದಿವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕೊಡಲೇ ಕೃಷ್ಣಾ ಭಾಗ್ಯ ಜಲ ನಿಗಮದ ಎಲ್ಲ ಅವ್ಯವಹಾರಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಈ ಸಂಬಂಧ ಹೈಕೋರ್ಟ್‌ಗೂ ಅರ್ಜಿ ಸಲ್ಲಿಸುತ್ತೇವೆ ಎಂದು ಉತ್ತರ ಕರ್ನಾಟಕ ರೈತ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಯಾಸಿನ್ ಜವಳಿ ತಿಳಿಸಿದ್ದಾರೆ.