. ಕರ್ನಾಟಕ ಪೌರ ನೌಕರರ ಸಂಘದ ವತಿಯಿಂದ ರಾಜ್ಯಾದ್ಯಂತ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಡಿ.5ರಿಂದ ಕರ್ತವ್ಯಕ್ಕೆ ಹಾಜರಾಗದೆ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ರಟ್ಟೀಹಳ್ಳಿ ಪಟ್ಟಣ ಪಂಚಾಯತ್ ನೌಕರ ರಾಜಕುಮಾರ ಹೇಂದ್ರೆ ಹೇಳಿದರು.
ರಟ್ಟೀಹಳ್ಳಿ: ಕರ್ನಾಟಕ ಪೌರ ನೌಕರರ ಸಂಘದ ವತಿಯಿಂದ ರಾಜ್ಯಾದ್ಯಂತ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಡಿ.5ರಿಂದ ಕರ್ತವ್ಯಕ್ಕೆ ಹಾಜರಾಗದೆ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ರಟ್ಟೀಹಳ್ಳಿ ಪಟ್ಟಣ ಪಂಚಾಯತ್ ನೌಕರ ರಾಜಕುಮಾರ ಹೇಂದ್ರೆ ಹೇಳಿದರು.
ಪಟ್ಟಣದ ಪಟ್ಟಣ ಪಂಚಾಯತ್ ಆವರಣದಲ್ಲಿ ಹೋರಾಟದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗೆ ಕೇಂದ್ರ ಕಚೇರಿ ಚಿತ್ರದುರ್ಗದಲ್ಲಿ ನಡೆದ ಸಭೆಯ ತೀರ್ಮಾನದಂತೆ ರಟ್ಟೀಹಳ್ಳಿ ಪಟ್ಟಣ ಪಂಚಾಯತ್ ಸೇರಿದಂತೆ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದು ಪಟ್ಟಣದ ವಿವಿಧ ಸಂಘಟನೆಗಳಿಂದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವುದು ನಮಗೆ ಆನೆ ಬಲ ಬಂದಂತಾಗಿದ್ದು, ಅಂದು ಮುಂಜಾನೆಯಿಂದ ಕರ್ತವ್ಯಕ್ಕೆ ಗೈರಾಗುವ ಮೂಲಕ ಪಟ್ಟಣದ ಮೂಲಭೂತ ಸೌಲಭ್ಯಗಳಾದ ಕಸ ಸಂಗ್ರಹ, ವಿಲೇವಾರಿ, ಸ್ವಚ್ಛತೆ, ನೀರು ಪೂರೈಕೆ, ಒಳ ಚರಂಡಿ ನಿರ್ವಹಣೆ ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆಗಳನ್ನು ಬಂದ್ ಮಾಡುವ ಮೂಲಕ ಮುಷ್ಕರ ಹಮ್ಮಿಕೊಳ್ಳಲಾಗಿದ್ದು, ಪಟ್ಟಣದ ಜನತೆ ನಮ್ಮ ಹೋರಾಟಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು. ಕಳೆದ ಮೇ 2025ರಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ನಿಮ್ಮ ನ್ಯಾಯಯುತ ಬೇಡಿಕೆಗಳನ್ನು ಸಂಬಂಧ ಪಟ್ಟ ಇಲಾಖೆಯ ಗಮನ ಹರಿಸಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು ಕೈಬಿಡಲಾಗಿತ್ತು. ಆದರೆ ಅಲ್ಲಿಂದ ಇಲ್ಲಿವರೆಗೂ ಯಾವುದೇ ಉತ್ತರ ಬರದ ಕಾರಣ ಮತ್ತೆ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗಿದೆ. ಈ ಬಾರಿ ನಮ್ಮ 20 ಬೇಡಿಕೆಗಳು ಈಡೇರುವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಸರಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು. ಇಲ್ಲಿನ ಅನೇಕ ಪೌರ ನೌಕರರು ಗ್ರಾಮ ಪಂಚಾಯತ್‍ನಿಂದ ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿದ ನೌಕರರಿಗೆ ಸರಕಾರಿ ನೌಕರರೆಂದು ಹಾಗೂ ಸರಕಾರದ ಯಾವುದೇ ಸವಲತ್ತು ಪಡೆಯದೇ ಕಡಿಮೆ ಸಂಬಳದಲ್ಲಿ ದುಡಿಯುತ್ತಿದ್ದರೂ ಸರಕಾರಗಳು ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದೇ ಮಲ ತಾಯಿ ದೋರಣೆ ತೋರುತ್ತಿರುವುದರಿಂದ ಜೀವನ ನಡೆಸುವುದೇ ದುಸ್ತರವಾಗಿದೆ. ಅದಾಗಿಯೂ ನಮ್ಮ ಬೇಡಿಕೆಗಳನ್ನು ಕಡೆಗಣಿಸುತ್ತಿರುವ ಪರಿಣಾಮ ಅನಿವಾರ್ಯವಾಗಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದರು.ಬಸವರಾಜ ಚಲವಾದಿ ಮಾತನಾಡಿ, ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಸುಮಾರು 15 ವರ್ಷಗಳಿಂದ ಕಡಿಮೆ ಸಂಬಳದಲ್ಲಿ ದುಡಿಯುತ್ತಿದ್ದು ವಯೋನಿವೃತ್ತಿ ಸಮಯ ಬಂದರೂ ನಮ್ಮ ಬೇಡಿಕೆಗಳನ್ನು ಸರಕಾರ ಪರಿಗಣಿಸದಿರುವುದು ನಮಗೆ ಅನ್ಯಾಯ ಮಾಡುತ್ತಿದೆ. ನಮಗೆ ಕನಿಷ್ಠ ಸೌಲಭ್ಯಗಳನ್ನು ನೀಡದಿದ್ದರು ಇಲ್ಲಿಯವರೆಗೂ ನಮ್ಮ ಕರ್ತವ್ಯವನ್ನು ಪಾಲಿಸಿಕೊಂಡು ಬಂದಿದ್ದರು. ನಮ್ಮ ಮನವಿಗೆ ಸ್ಪಂದಿಸದೇ ಇರುವುದರಿಂದ ಅನಿವಾರ್ಯವಾಗಿ ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ಹಮ್ಮಿಕೊಳ್ಳಬೇಕಾಯಿತು. ಆದ್ದರಿಂದ ಪಟ್ಟಣ ಜನತೆ ನಮ್ಮ ಹೋರಾಟಕ್ಕೆ ಬೆಂಬಲ ನೀಡಿ ಕರ್ತವ್ಯದಲ್ಲಾಗುವ ಲೋಪಗಳನ್ನು ಅರಿತು ನಮಗೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.
ಪೌರ ನೌಕರ ಸಂಘದ ಅಧ್ಯಕ್ಷ ಸುಭಾಷ ಹರಿಜನ, ಪಟ್ಟಣ ಪಂಚಾಯತ್ ಸಿಇಓ ಗದಿಗೇಶ ಶಿರ್ಶಿ, ಮಂಜು ಚಲವಾದಿ ಸಂತೋಷ ಬಿಳಚಿ, ವೀರೇಶ ದ್ಯಾವಕ್ಕಳವರ, ಬಸವರಾಜ ಕವಲೆತ್ತು, ಅನುರಾಧಾ ಸುಣಗಾರ, ನಿಖಿಲ್ ಅರ್ಕಾಚಾರಿ, ಮಂಜು ಬಿಳಚಿ, ಅಶೋಕ ಬೆಳಕೇರಿ, ರವಿ ಹರಿಜನ, ಎಂ.ಎನ್. ಹರಿಜನ, ನಾಗರಾಜ ಹರಿಜನ, ಚಂದ್ರಪ್ಪ ಎಳೆಹೋಳಿ, ಬಸವರಾಜ ಹಿರೇಮಠ, ಚಂದ್ರಪ್ಪ ಹರಿಜನ ಮುಂತಾದವರು ಇದ್ದರು.