ಸಾರಾಂಶ
ಯಲ್ಲಾಪುರ: ಗಂಭೀರವಾಗಿ ನಮ್ಮನ್ನು ಆಕ್ರಮಿಸುವ ಅನೇಕ ಕಾಯಿಲೆಗಳು ಹೇಗೆ ಬರುತ್ತವೆ ಎಂಬುದು ಎಷ್ಟೇ ಸಂಶೋಧನೆಗಳ ನಂತರವೂ ಈವರೆಗೂ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಆದರೆ ತಂಬಾಕಿನಲ್ಲಿ ಕ್ಯಾನ್ಸರಕಾರಕ ಗುಣಗಳಿವೆ ಎಂಬುದು ದೃಢಪಟ್ಟಿದೆ. ಹಂತಾನುಹಂತವಾಗಿ ವ್ಯಸನಗಳನ್ನು ತೊರೆಯುತ್ತೇನೆ ಎಂಬ ಮಾತು ಸತ್ಯವಲ್ಲ. ಗಟ್ಟಿಯಾದ ಮಾನಸಿಕತೆಯಿಂದ ಒಂದೇ ಬಾರಿಗೆ ವ್ಯಸನಗಳನ್ನು ತೊರೆಯುವ ನಿರ್ಧಾರದಿಂದ ಮಾತ್ರ ವ್ಯಸನಮುಕ್ತರಾಗಲು ಸಾಧ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.ತಾಲೂಕಾಡಳಿತ, ತಾಲೂಕು ಪಂಚಾಯಿತಿ, ಆರೋಗ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿಗಳ ಆಶ್ರಯದಲ್ಲಿ ಪಪಂ ಕಾರ್ಯಾಲಯದಲ್ಲಿ ಆ. ೨೮ರಂದು ಹಮ್ಮಿಕೊಂಡಿದ್ದ ಪಪಂ ಕಾರ್ಯಾಲಯದ ಸ್ವಚ್ಛತಾ ಕಾರ್ಮಿಕರಿಗೆ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ, ಓರಲ್ ಹೆಲ್ತ್ ಸ್ಕ್ರೀನಿಂಗ್ ಕೈಗೊಳ್ಳುವುದು ಮತ್ತು ಎನ್‌ಸಿಡಿ ತಪಾಸಣಾ ಶಿಬಿರದ ಉದ್ಘಾಟನೆ ನೆರವೇರಿಸಿ, ಮಾತನಾಡಿದರು.ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಆರೋಗ್ಯವಂತರಾಗಿರುವುದು ಅತಿಮುಖ್ಯ. ನಗರಸಭೆಯೊಳಗೆ ಉಳಿಯುವುದರಿಂದ ನಗರ ಸ್ವಚ್ಛವಾಗದು. ಹೊರಗೆ ಕೆಲಸ ಮಾಡುವ ಪೌರಕಾರ್ಮಿಕರಿಂದ ನಗರ ಸ್ವಚ್ಛವಾಗಿರುತ್ತದೆ. ಆದ್ದರಿಂದ ಅಂತಹ ಕಾರ್ಮಿಕರು ಕೆಲಸ ನಿಲ್ಲಿಸಿದರೆ ನಗರದ ಜನ ಅನಾರೋಗ್ಯಕ್ಕೊಳಗಾಗುತ್ತಾರೆ. ಹೀಗಾಗಿ ಕಾರ್ಮಿಕರ ದೈಹಿಕ, ಮಾನಸಿಕ ಆರೋಗ್ಯ ಸರಿಯಾಗಿರುವುದು ಮುಖ್ಯ ಎಂದರು.ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ಪ್ರಾಸ್ತಾವಿಕವಾಗಿ ಮಾತನಾಡಿ, ಅಸಾಂಕ್ರಾಮಿಕ ಕಾಯಿಲೆಗಳ ಮೂಲಕ ಸಾವು ಸಂಭವಿಸದಂತೆ ಮುಂಜಾಗೃತೆ ವಹಿಸಬೇಕಾಗಿದೆ. ಇದಕ್ಕೆ ತಂಬಾಕು ಸೇವನೆ ಮತ್ತು ಜೀವನ ಶೈಲಿಯ ಬದಲಾವಣೆ ಅತ್ಯಗತ್ಯ ಎಂದರು.ಪಪಂ ಸದಸ್ಯರಾದ ರವಿ ಪಾಟಣಕರ್, ಮೊಹಮ್ಮದ ಅಲಿ, ಸತೀಶ ನಾಯ್ಕ, ರಾಜು ನಾಯ್ಕ, ತಹಸೀಲ್ದಾರ್ ಅಶೋಕ ಭಟ್ಟ, ಸಾಮಾಜಿಕ ಕಾರ್ಯಕರ್ತ ವಿಜಯ ಮಿರಾಶಿ, ಪಪಂ ಉಪಾಧ್ಯಕ್ಷ ಅಮಿತ ಅಂಗಡಿ ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಕೇಂದ್ರದ ಪ್ರೇಮ ಕುಮಾರ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು. ಪಪಂ ಅಧಿಕಾರಿ ಹೇಮಾವತಿ ಭಟ್ಟ ನಿರ್ವಹಿಸಿದರು.