ಸಾರಾಂಶ
ನಿವೃತ್ತರಾಗುವ ಬಿಬಿಎಂಪಿ ಕಾಯಂ ಹಾಗೂ ನೇರ ವೇತನ ಪಡೆಯುತ್ತಿರುವ ಪೌರ ಕಾರ್ಮಿಕರಿಗೆ ಪಿಂಚಣಿ ನೀಡುವ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಬಿಬಿಎಂಪಿ ಕೇಂದ್ರ ಕಚೇರಿ ಎದುರು ಪೌರಕಾರ್ಮಿಕರು ಸೋಮವಾರ ಪ್ರತಿಭಟಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಿವೃತ್ತರಾಗುವ ಬಿಬಿಎಂಪಿ ಕಾಯಂ ಹಾಗೂ ನೇರ ವೇತನ ಪಡೆಯುತ್ತಿರುವ ಪೌರ ಕಾರ್ಮಿಕರಿಗೆ ಪಿಂಚಣಿ ನೀಡುವ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಬಿಬಿಎಂಪಿ ಕೇಂದ್ರ ಕಚೇರಿ ಎದುರು ಪೌರಕಾರ್ಮಿಕರು ಸೋಮವಾರ ಪ್ರತಿಭಟಿಸಿದರು.ಬಿಬಿಎಂಪಿ ಕಾಯಂ ಮತ್ತು ನೇರವೇತನ ಪೌರಕಾರ್ಮಿಕರು ಹಾಗೂ ಸಫಾಯಿ ಕರ್ಮಚಾರಿಗಳ ನೌಕರರ ಫೆಡರೇಷನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಬಿಬಿಎಂಪಿಯಲ್ಲಿ ಕಾಯಂ ಮತ್ತು ನೇರವೇತನ ಪಡೆಯುತ್ತಿರುವ ಪೌರಕಾರ್ಮಿಕರ ಪೈಕಿ ಕಳೆದ ಕೆಲವು ವರ್ಷಗಳಿಂದ 1 ಸಾವಿರಕ್ಕೂ ಹೆಚ್ಚಿನ ಪೌರಕಾರ್ಮಿಕರು ನಿವೃತ್ತರಾಗಿದ್ದು, 500ಕ್ಕೂ ಹೆಚ್ಚಿನವರು ಮರಣ ಹೊಂದಿದ್ದಾರೆ. ಆದರೆ, ಅವರಿಗೆ ಪಿಂಚಣಿ ಸೇರಿ ಇನ್ನಿತರ ಯಾವುದೇ ಸೌಲಭ್ಯ ನೀಡಿಲ್ಲ. ಹೀಗಾಗಿ ನಿವೃತ್ತಿಯ ನಂತರ ಅವರು ಹಾಗೂ ಕುಟುಂಬದವರ ಜೀವನ ನಿರ್ವಹಣೆ ಸಾಕಷ್ಟು ಕಷ್ಟವಾಗುತ್ತಿದೆ. ಹೀಗಾಗಿ ಪಿಂಚಣಿ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನಾ ಸ್ಥಳಕ್ಕೆ ಆಮಿಸಿದ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತೆ ಪ್ರತಿಭಾ, ಪೌರಕಾರ್ಮಿಕರಿಗೆ ನಿವೃತ್ತ ವೇತನ ನೀಡುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂದಿನ ತಿಂಗಳಿನಿಂದ ಪಿಂಚಣಿ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಆದರೆ ಈ ಭರವಸೆಗೆ ಒಪ್ಪದ ಪೌರಕಾರ್ಮಿಕರು ಪ್ರತಿಭಟನೆ ಮುಂದುವರಿಸಿದರು. ಪೌರಕಾರ್ಮಿಕರು ಬಿಬಿಎಂಪಿ ಕಚೇರಿ ಪ್ರವೇಶ ದ್ವಾರದ ಮುಂದೆ ಪ್ರತಿಭಟನೆ ಮಾಡುತ್ತಿದ್ದರಿಂದ ಕೇಂದ್ರ ಕಚೇರಿಗೆ ಹೋಗಿ ಬರಲು ಸಮಸ್ಯೆ ಆಯಿತು. ಹಲಸೂರು ಗೇಟ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾನಿರತ ಪೌರಕಾರ್ಮಿಕರನ್ನು ವಶಕ್ಕೆ ಪಡೆದು ಅಲ್ಲಿಂದ ಕರೆದೊಯ್ದರು.