ಪುತ್ತೂರು: ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಸಮರ್ಪಕವಾಗಿ ಎದುರಿಸಲು ಸಾಕಷ್ಟು ಪೂರ್ವ ಸಿದ್ದತೆ ಹಾಗೂ ಕಠಿಣ ಪರಿಶ್ರಮದ ಅಗತ್ಯವಿದೆ. ನಾನೇಕೆ ಈ ಕ್ಷೇತ್ರ ಆರಿಸಿಕೊಂಡಿದ್ದೇನೆ ಎಂಬ ಬಗ್ಗೆ ಸ್ಪಷ್ಟತೆ ಇರಬೇಕು. ಹಾಗಿದ್ದಲ್ಲಿ ಮಾತ್ರ ಈ ಕಠಿಣ ಸವಾಲನ್ನು ಎದುರಿಸಿ ಗೆಲ್ಲಲು ಸಾಧ್ಯ ಎಂದು ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಹೇಳಿದರು.ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಅಕ್ಷಯ ಕಾಲೇಜು ಆಶ್ರಯದಲ್ಲಿ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ರೋಟರಿ ಕ್ಲಬ್ ಪುತ್ತೂರು ಪೂರ್ವ, ರೋರ‍್ಯಾಕ್ಟ್ ಕ್ಲಬ್ ಅಕ್ಷಯ ಕಾಲೇಜು ಮತ್ತು ಕಾಲೇಜಿನ ಐಕ್ಯುಎಸಿ ಸಹಯೋಗದಲ್ಲಿ ಬುಧವಾರ ಕಾಲೇಜ್‌ನ ಸಭಾಂಗಣದಲ್ಲಿ ನಡೆದ ಐಎಎಸ್- ಐಪಿಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾಗರಿಕ ಸೇವೆಯಲ್ಲಿ ೨೦ಕ್ಕೂ ಹೆಚ್ಚು ವಿಭಾಗಗಳಲ್ಲಿ ಅವಕಾಶಗಳಿವೆ. ಯುಪಿಎಸ್ ಪರೀಕ್ಷೆಗೆ ಪ್ರತೀ ವರ್ಷ ಸುಮಾರು ೧೦ ಲಕ್ಷ ಮಂದಿ ನೋಂದಣಿ ಮಾಡುತ್ತಾರೆ. ಇವರಲ್ಲಿ ೧೫ ಸಾವಿರ ಮಂದಿ ಪ್ರಾಥಮಿಕ ಹಂತದ ಪರೀಕ್ಷೆ ಉತ್ತೀರ್ಣರಾಗಿ ಮೈನ್ಸ್ಗೆ ಆಯ್ಕೆಯಾಗುತ್ತಾರೆ. ಅದರಲ್ಲೂ ಉತ್ತೀಣರಾದವರು ನಂತರ ಸಂದರ್ಶನದಲ್ಲಿ ಗೆಲ್ಲಬೇಕಾಗುತ್ತದೆ. ಮೈನ್ಸ್ನಲ್ಲಿ ಅನುತ್ತೀರ್ಣಗೊಂಡರೆ ಮುಂದಿನ ವರ್ಷ ಮತ್ತೆ ಪ್ರಿಲಿಮಿನರಿ ಪರೀಕ್ಷೆಯಿಂದಲೇ ಸಾಗಬೇಕಾಗುತ್ತದೆ. ಸಮಾಜದ ಸೇವೆ ಮಾಡಲು, ಉತ್ತಮ ವೃತ್ತಿ ಹೊಂದಲು, ಹೆಸರು, ಕೀರ್ತಿ ಸಂಪಾದಿಸಲು ನಾಗರಿಕ ಸೇವೆ ಒಳ್ಳೆಯ ವೇದಿಕೆಯಾಗಿದೆ. ಅಕ್ಷಯ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಜಯಂತ ನಡುಬೈಲ್ ಮಾತನಾಡಿ ಮುಂದಿನ ದಿನಗಳಲ್ಲಿ ಅಕ್ಷಯ ಕಾಲೇಜಿನಲ್ಲಿ ಐಎಎಸ್- ಐಪಿಎಸ್ ಕೋಚಿಂಗ್ ಆರಂಭಿಸಲಾಗುವುದು. ಇದಕ್ಕಾಗಿ ಸಂಬಂಧಪಟ್ಟ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ. ಪುತ್ತೂರು ಸುತ್ತಮುತ್ತಲಿನ ವಿದ್ಯಾರ್ಥಿಗಳು ಕೂಡ ಮುಂದಿನ ದಿನಗಳಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳಾಗಿ ಮೂಡಿ ಬರಬೇಕು ಎಂದರು.ಐ.ಎ.ಎಸ್. ದರ್ಶನ ಸಂಸ್ಥೆಯ ಮುಖ್ಯಸ್ಥ ದರ್ಶನ್ ಗರ್ತಿಕೆರೆ ಮಾತನಾಡಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಶಿಕ್ಷಣ, ಉದ್ಯಮದಲ್ಲಿ ಸಾಕಷ್ಟು ಮುಂದುವರಿದಿದ್ದರೂ ಇಲ್ಲಿ ನಾಗರಿಕ ಸೇವಾ ಕ್ಷೇತ್ರಕ್ಕೆ ಹೋಗುವವರ ಸಂಖ್ಯೆ ಬಹಳ ವಿರಳವಾಗಿದೆ. ಇದಕ್ಕೆ ಇಲ್ಲಿರುವ ಮಾಹಿತಿ ಕೊರತೆಯೇ ಕಾರಣ. ಇದನ್ನು ನೀಗಿಸಲು ಇಂಥ ಕಾರ್ಯಾಗಾರಗಳು ಉಪಯುಕ್ತವಾಗಲಿದೆ ಎಂದರು.

ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಧಾಕರ ಸುವರ್ಣ ತಿಂಗಳಾಡಿ, ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಕುಸುಮರಾಜ್ ಶುಭ ಹಾರೈಸಿದರು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ದರ್ಶನ್ ಗರ್ತಿಕರೆ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಹಿರಿಯ ಸಾಹಿತಿ ಡಾ.ಎಚ್.ಜಿ. ಶ್ರೀಧರ್ ಸನ್ಮಾನಿತರ ಬಗ್ಗೆ ಮಾತನಾಡಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಕ್ಷಯ ಕಾಲೇಜಿನ ಪ್ರಾಂಶುಪಾಲ ಸಂಪತ್ ಪಕ್ಕಳ ಸ್ವಾಗತಿಸಿದರು. ಕಾಲೇಜಿನ ಆಡಳಿತಾಧಿಕಾರಿ ಅರ್ಪಿತ್ ಉಪಸ್ಥಿತರಿದ್ದರು. ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಶೇ. ಕಜೆಮಾರ್ ವಂದಿಸಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ದರ್ಶನ್ ಗರ್ತಿಕೆರೆ ಅವರು ಐಎಎಸ್- ಐಪಿಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಕಾರ್ಯಾಗಾರ ನಡೆಸಿಕೊಟ್ಟರು.