ರೈತರು ಬೆಳೆ ವಿಮೆ ಮಾಡಿಸಿಕೊಳ್ಳಬೇಕು. ಹನೂರಲ್ಲಿ 50 ಹಾಸಿಗೆಯುಳ್ಳ ಆಸ್ಪತ್ರೆ ಕಾಮಗಾರಿ ನಡೆಯುತ್ತಿದೆ. 100 ಹಾಸಿಗೆಯುಳ್ಳ ಆಸ್ಪತ್ರೆ ಆಗಲೇಬೇಕು, ಇದಕ್ಕೆ ಹೋರಾಟ ಮಾಡುತ್ತಿದ್ದೇನೆ. ದೊಡ್ಡಕೆರೆ ಒತ್ತುವರಿ ತೆರವು ಮಾಡಿಸಬೇಕು. ಬಸ್ ಡಿಪೋ ಆಗಲಿದ್ದು, ಸಾರಿಗೆ ವ್ಯವಸ್ಥೆ ಸರಿಯಾಗಲಿದೆ ಎಂದರಲ್ಲದೆ, ಪಾಳ್ಯ, ಪಿಜಿ ಪಾಳ್ಯ, ಒಡೆಯರ್ ಪಾಳ್ಯ ಭಾಗಕ್ಕೆ ಅಗತ್ಯ ಸಮಯಕ್ಕೆ ಸಾರಿಗೆ ವ್ಯವಸ್ಥೆ ಮಾಡಲು ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಹನೂರು

ಜನರು ಸಣ್ಣ ಪುಟ್ಟ ಕೆಲಸಗಳಿಗೆ, ವಿವಿಧ ದಾಖಲೆಗಾಗಿ ಕೂಲಿ ಇತರೆ ಕೆಲಸ ಬಿಟ್ಟು ಸರ್ಕಾರಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಆಡಳಿತವೇ ಜನರ ಬಳಿಗೆ ಹೋಗಲು ಪ್ರಜಾಸೇವೆ ಆಂದೋಲನ ಉಪಯುಕ್ತವಾಗಲಿದೆ. ಇದನ್ನು ಜನರು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು.

ತಾಲೂಕಿನ ಲೊಕ್ಕನಹಳ್ಳಿ ಗ್ರಾಮದ ಪಬ್ಲಿಕ್ ಶಾಲೆಯಲ್ಲಿ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯಿಂದ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಎಂಬ ಘೋಷವಾಕ್ಯದಡಿ ಆಯೋಜಿಸಲಾಗಿದ್ದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಂದಾಯ, ಪಿಂಚಣಿ, ಪಡಿತರ ಚೀಟಿ, ರಸ್ತೆ, ಚರಂಡಿ, ಕುಡಿಯುವ ನೀರು ಸೇರಿ ಇನ್ನಿತರೆ ಸಮಸ್ಯೆಗಳಿಗೆ ಒಂದೇ ಸೂರಿನಡಿ ಪರಿಹಾರ ಒದಗಿಸಲು ಹಾಗೂ ಈಗಾಗಲೇ ಬಂದಿರುವ ಅರ್ಜಿಗಳನ್ನು ವಿಲೇವಾರಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.

ಜೆಜೆಎಂ ಯೋಜನೆಯಡಿ ಕುಡಿಯುವ ನೀರು ಒದಗಿಸಲು ಪೈಪ್ ಲೈನ್ ಕಾಮಗಾರಿಗೆ ಅರಣ್ಯ ಇಲಾಖೆಯಿಂದ ಅನುಮತಿ ಕ್ಲಿಯರೆನ್ಸ್ ಆಗಿರಲಿಲ್ಲ. ಇದೀಗ ಫಾರೆಸ್ಟ್ ವೈಲ್ಡ್ ಲೈಫ್ ಕ್ಲಿಯರ್ ಆಗಿದೆ. ರಿಸರ್ವ್ ಫಾರೆಸ್ಟ್ ನಿಂದ ಅನುಮತಿ ಆಗಿಲ್ಲ. ಕೇಂದ್ರಕ್ಕೆ ಮಾಹಿತಿ ಕಳುಹಿಸಲಾಗಿದೆ. ಮದ್ಯದಂಗಡಿ ಮಾಲೀಕರ ಕರೆದು ಅಬಕಾರಿ ಮತ್ತು ಪೊಲೀಸ್ ಇಲಾಖೆ ಜಂಟಿ ಸಭೆ ನಡೆಸಬೇಕು. ಕಿರಾಣಿ ಅಂಗಡಿಯಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಇಲ್ಲವಾದರೂ ತಾಲೂಕಲ್ಲಿ ಇನ್ನೂ ಮಾರಾಟವಿದೆ. ಇದಕ್ಕೆ ಕಡಿವಾಣ ಯಾಕಿಲ್ಲ ಎಂದು ಪ್ರಶ್ನಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ರೈತರು ಬೆಳೆ ವಿಮೆ ಮಾಡಿಸಿಕೊಳ್ಳಬೇಕು. ಹನೂರಲ್ಲಿ 50 ಹಾಸಿಗೆಯುಳ್ಳ ಆಸ್ಪತ್ರೆ ಕಾಮಗಾರಿ ನಡೆಯುತ್ತಿದೆ. 100 ಹಾಸಿಗೆಯುಳ್ಳ ಆಸ್ಪತ್ರೆ ಆಗಲೇಬೇಕು, ಇದಕ್ಕೆ ಹೋರಾಟ ಮಾಡುತ್ತಿದ್ದೇನೆ. ದೊಡ್ಡಕೆರೆ ಒತ್ತುವರಿ ತೆರವು ಮಾಡಿಸಬೇಕು. ಬಸ್ ಡಿಪೋ ಆಗಲಿದ್ದು, ಸಾರಿಗೆ ವ್ಯವಸ್ಥೆ ಸರಿಯಾಗಲಿದೆ ಎಂದರಲ್ಲದೆ, ಪಾಳ್ಯ, ಪಿಜಿ ಪಾಳ್ಯ, ಒಡೆಯರ್ ಪಾಳ್ಯ ಭಾಗಕ್ಕೆ ಅಗತ್ಯ ಸಮಯಕ್ಕೆ ಸಾರಿಗೆ ವ್ಯವಸ್ಥೆ ಮಾಡಲು ಸೂಚನೆ ನೀಡಿದರು.

152 ಅರ್ಜಿಗಳ ಸಲ್ಲಿಕೆ: ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಒಟ್ಟು 152ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ ಆದವು. ತ್ಯಾಜ್ಯ ರಾಶಿಯಿದ್ದು ವಿಲೇವಾರಿ ಇಲ್ಲ. ಜಡೆಸ್ವಾಮಿ ದೊಡ್ಡಿ ಅಡ್ಡ ರಸ್ತೆಯಾಗಿಲ್ಲ. ಕೆಲವು ಅಕ್ರಮಗಳ ತನಿಖೆ ಆಗಬೇಕು. ಇ- ಸ್ವತ್ತು ವ್ಯತ್ಯಾಸ ಆಗುತ್ತಿದೆ. ಆರೋಗ್ಯ ಸೇವೆ, ಆ್ಯಂಬುಲೆನ್ಸ್ ಒದಗಿಸಬೇಕು. ಮದ್ಯ ಅಕ್ರಮ ಮಾರಾಟ ಸ್ಥಳಕ್ಕೆ ಬನ್ನಿ ಖುದ್ದು ನೋಡಿ. ಸಾರ್ವಜನಿಕರಿಗೆ ಓಡಾಡಲು ಜಾಗ. ಕಾಮಗಾರಿಗಳ ಹಣ ತಲುಪಿಲ್ಲ. ಮಳೆನೀರು ಮನೆಗೆ ಬರುತ್ತೆ. ಕಾಡುಪ್ರಾಣಿ ದಾಳಿ, ಹಂದಿಗಳ ಹಾವಳಿ ತಪ್ಪಿಸಿ, ಬಿ.ಆರ್. ಟಿ ಕಡೆ ರೈಲ್ವೆ ಬ್ಯಾರಿಕೆಡ್, ಸಾರಿಗೆ, ವಿದ್ಯುತ್ ವ್ಯವಸ್ಥೆ ಆಗಬೇಕು. ಪೆನ್ಷನ್ ಹಣ ಬಂದಿಲ್ಲ, ಪಡಿತರ ಚೀಟಿ ಬಂದಿಲ್ಲ. ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಬದಲು ಭರವಸೆ ನೀಡುತ್ತಾರೆ, ಕಾರ್ಯಗತಕ್ಕೆ ಬರುತ್ತಿಲ್ಲ. ಮದ್ಯವರ್ತಿಗಳಿಂದ ಕೆಲಸವಾಗಲಿದೆ. ಸರ್ಕಾರಿ ಜಾಗಕ್ಕೆ ಇ- ಸ್ವತ್ತು ಮಾಡುತ್ತಾರೆ, ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ ಎಂದು ರವಿ, ವಿಜಯ್ ಕಾಂತ್, ಮಹೇಶ್, ಮಹಾದೇವಮ್ಮ, ಸಿದ್ದರಾಜು ಸೇರಿ ಇನ್ನಿತರರು ತಮ್ಮ ತಮ್ಮ ಸಮಸ್ಯೆ ಹೇಳಿಕೊಂಡರು.

ಹನೂರು ತಾಲೂಕು ತಹಸೀಲ್ದಾರ್ ಚೈತ್ರ, ಬಿಇಒ ಪ್ರತಿಭಾ, ಇಒ ಉಮೇಶ್, ಇನ್ಸ್ಪೆಕ್ಟರ್ ಆನಂದ್ ಮೂರ್ತಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು, ರೈತ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.