ಭದ್ರಾ ಮೇಲ್ದಂಡೆ ಹಣ ಬಿಡುಗಡೆಗೆ ಹಕ್ಕೊತ್ತಾಯ

| Published : Feb 23 2024, 01:48 AM IST

ಸಾರಾಂಶ

ಭದ್ರಾಮೇಲ್ದಂಡೆ ಯೋಜನೆಗೆ 5300 ಕೋಟಿ ರು. ಬಿಡಗಡೆ ಮಾಡದ ಕೇಂದ್ರ ಸರ್ಕಾರದ ನಡೆ ವಿರೋಧಿಸಿ ಸಂಸದರ ಕಚೇರಿ ಎದುರು ಕಳೆದ 18 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಅಖಂಡ ಕರ್ನಾಟಕ ರೈತ ಸಂಘ ವಿವಿಧ ಜನಪರ, ಪ್ರಗತಿಪರ, ದಲಿತ ಸಂಘಟನೆಗಳಿಂದ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಲಾಯಿತು.

ಚಿತ್ರದುರ್ಗ: ಭದ್ರಾಮೇಲ್ದಂಡೆ ಯೋಜನೆಗೆ 5300 ಕೋಟಿ ರು. ಬಿಡಗಡೆ ಮಾಡದ ಕೇಂದ್ರ ಸರ್ಕಾರದ ನಡೆ ವಿರೋಧಿಸಿ ಸಂಸದರ ಕಚೇರಿ ಎದುರು ಕಳೆದ 18 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಅಖಂಡ ಕರ್ನಾಟಕ ರೈತ ಸಂಘ ವಿವಿಧ ಜನಪರ, ಪ್ರಗತಿಪರ, ದಲಿತ ಸಂಘಟನೆಗಳಿಂದ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಲಾಯಿತು.

ಗಾಂಧಿ ವೃತ್ತದಿಂದ ಹೊರಟ ಪಂಜಿನ ಮೆರವಣಿಗೆ ಆನೆಬಾಗಿಲು, ದೊಡ್ಡಪೇಟೆ, ಉಚ್ಚಂಗಿ ಯಲ್ಲಮ್ಮ ದೇವಸ್ಥಾನದ ಮುಂಭಾಗದಿಂದ ರಂಗಯ್ಯನಬಾಗಿಲು, ಜೋಗಿಮಟ್ಟಿ ವೃತ್ತದ ಮೂಲಕ ಜಿಲ್ಲಾ ಪಂಚಾಯಿತಿ ತಲುಪಿತು.

ಪಂಜಿನ ಮೆರವಣಿಗೆ ನೇತೃತ್ವವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ, ಬರಪೀಡಿತ ಪ್ರದೇಶ ಚಿತ್ರದುರ್ಗ ಜಿಲ್ಲೆಗೆ ಭದ್ರಾಮೇಲ್ದಂಡೆ ಯೋಜನೆ ಜಾರಿಗೆ ತಂದು ನೀರು ಹರಿಸುವಂತೆ ಅನೇಕ ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಕೇಂದ್ರದ ಮೇಲೆ ರಾಜ್ಯ ಸರ್ಕಾರ, ರಾಜ್ಯದ ಮೇಲೆ ಕೇಂದ್ರ ಸರ್ಕಾರ ಆಪಾದನೆ ಮಾಡುವುದರಲ್ಲಿ ಕಾಳ ಕಳೆಯುತ್ತಿದೆಯೇ ವಿನಃ ಯೋಜನೆ ಪೂರ್ಣಗೊಂಡಿಲ್ಲವೆಂದು ದೂರಿದರು.

ದೇಶಕ್ಕೆ ಅನ್ನ ನೀಡುವ ರೈತರನ್ನು ಎಲ್ಲಾ ಪಕ್ಷಗಳು ಯಾಮಾರಿಸುತ್ತಲೆ ಬರುತ್ತಿವೆ. ಕೂಡಲೆ 5300 ಕೋಟಿ ರು.ಗಳನ್ನು ಬಿಡುಗಡೆಗೊಳಿಸಿ ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ನೆರವಾಗಬೇಕೆಂದು ಒತ್ತಾಯಿಸಿದರು. ಹೊಳಲ್ಕೆರೆ ತಾಲೂಕು ರೈತ ಸಂಘದ ಅಧ್ಯಕ್ಷ ಸತೀಶ್, ಕಾರ್ಯದರ್ಶಿ ಜಯಣ್ಣ, ಮಹದೇವಪ್ಪ, ಹೊಳಲ್ಕೆರೆ ನಗರಾಧ್ಯಕ್ಷ ರಂಗಸ್ವಾಮಿ, ಮಲ್ಲಿಕಾರ್ಜುನ್, ರಂಗಸ್ವಾಮಿ, ಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ಬಸವರಾಜಪ್ಪ, ಪ್ರಸನ್ನಕುಮಾರ್ ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.