ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ತಾಪುರ
ವಿಧಾನ ಪರಿಷತ್ ಸದಸ್ಯರಾಗಿರುವ ತಿಪ್ಪಣಪ್ಪ ಕಮಕನೂರ ಅವರು ಸರ್ಕಾರದ ಅಂಗವಾಗಿದ್ದು ಕೋಲಿ ಸಮಾಜದ ಸಮಾವೇಶದಲ್ಲಿ ಸರ್ಕಾರಕ್ಕೆ ಹಕ್ಕೋತ್ತಾಯ ಮಾಡುವುದು ಹಾಸ್ಯಾಸ್ಪದವಾಗಿದೆ ಎಂದು ಪುರಸಭೆ ಮಾಜಿ ಸದಸ್ಯ, ಬಿಜೆಪಿ ಮುಖಂಡ ಸುರೇಶ ಬೆನಕನಳ್ಳಿ, ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ಮಲ್ಲಿಕರ‍್ಜುನ ಎಮ್ಮೆನೋರ್ ಅವರು ಟೀಕಿಸಿದ್ದಾರೆ.ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೋಲಿ ಸಮಾಜವನ್ನು ಎಸ್.ಟಿ. ಪಟ್ಟಿಗೆ ಸೇರಿಸಲು ಕಾಂಗ್ರೆಸ್ ಸರ್ಕಾರವೇ ತಪ್ಪಾಗಿ ಕಡತ ಕೇಂದ್ರಕ್ಕೆ ಕಳುಹಿಸಿದೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದಿಂದ ಸ್ಪಷ್ಟೀಕರಣ ಕೇಳಿದೆ. ಮುಖ್ಯಮಂತ್ರಿ ಬಳಿಗೆ ನಿಯೋಗ ತೆಗೆದುಕೊಂಡು ಹೋಗಿ ಕೇಂದ್ರ ಸರ್ಕಾರ ಕೇಳಿರುವ ಸ್ಪಷ್ಟೀಕರಣ ನೀಡಿ ಬೇಗ ಕಡತ ಕೇಂದ್ರಕ್ಕೆ ಕಳುಹಿಸುವಂತೆ ಒತ್ತಡ ಹೇರುವುದು ಬಿಟ್ಟು ಮೋದಿ ವಿರುದ್ಧ ಮಾತನಾಡಲು ಅವರಿಗೆ ನೈತಿಕತೆಯಿಲ್ಲ ಎಂದು ಕಮಕನೂರ ಅವರ ಹೇಳಿಕೆಯನ್ನು ಅವರು ಖಂಡಿಸಿದ್ದಾರೆ.
ಕರ್ನಾಟಕ ರಾಜ್ಯ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಲು ಮುಖ್ಯಮಂತ್ರಿಗೆ ಪತ್ರ ಬರೆಯಬೇಕಾದ ಕಮಕನೂರ ಅವರು ಸಮಾವೇಶದ ಮೂಲಕ ಬೇಡಿಕೆ ಮಂಡಿಸಲು ಮುಂದಾಗಿರುವುದು ಗಮನಿಸಿದರೆ ಅವರು ವಿರೋಧ ಪಕ್ಷದವರು ಮಾಡುವ ಕೆಲಸ ಮಾಡುವಂತಿದೆ. ಸರ್ಕಾರದಲ್ಲಿ ಹೇಗೆ ಕೆಲಸ ಮಾಡಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ಯಾರಾದರೂ ಹಿರಿಯರ ಮಾರ್ಗದರ್ಶನ ಪಡೆಯಲಿ ಎಂದು ಅವರು ಒತ್ತಾಯಿಸಿದ್ದಾರೆ.ಸರ್ಕಾರ ಮಟ್ಟದಲ್ಲಿ ಸಮಾಜದ ಪರವಾಗಿ ಪತ್ರ ಬರೆಯದೆ, ಸರ್ಕಾರದ ಹಂತದಲ್ಲಿ ಕೆಲಸ ಮಾಡದೆ ಕೇವಲ ಸಮಾಜದ ಜನರ ಮುಂದೆ ಸರ್ಕಾರಕ್ಕೆ ಬೇಡಿಕೆ ಮುಂದಿಡುವುದು ಸರ್ಕಾರದಲ್ಲಿ ಇರುವ ಜನಪ್ರತಿನಿಧಿ ಮಾಡುವ ಕೆಲಸವಲ್ಲ. ಅದು ವಿರೋಧ ಪಕ್ಷದವರು ಮಾಡಬೇಕಾದ ಕೆಲಸ. ಸರ್ಕಾರಕ್ಕೆ ಒಂದೂ ಪತ್ರ ಬರೆಯದೆ ಯಾನಾಗುಂದಿ ದೇವಸ್ಥಾನಕ್ಕೆ ಅನುದಾನ ಕೇಳುವುದು, ಬೆಂಗಳೂರಿನ ವಿಧಾನ ಸೌಧದ ಮುಂದೆ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಸ್ಥಾಪನೆ ಮಾಡುವುದು, ವರಲಿಂಗೇಶ್ವರ ಸ್ವಾಮಿಜಿ ಹೆಸರಿನಲ್ಲಿ ಜಮೀನು ಮತ್ತು ಅನುದಾನ ಕೇಳುವುದು ಎಷ್ಟು ಸರಿ? ಬೇಡಿಕೆ, ಹಕ್ಕೊತ್ತಾಯವು ಕೇವಲ ತೋರಿಕೆಗಾಗಿದ್ದು, ಸಮಾಜವನ್ನು ತಪ್ಪು ದಾರಿಗೆ ಎಳೆಯುವ ಕೆಲಸವಾಗಿದೆ ಎಂದು ಅವರು ಖಂಡಿಸಿದ್ದಾರೆ.
ಕಲಬುರಗಿ ನಗರದಲ್ಲಿ ಮಾಡುತ್ತಿರುವ ಕೋಲಿ ಸಮಾಜದ ಸಮಾವೇಶವು ಪಕ್ಷಪಾತದಿಂದ ಕೂಡಿದೆ. ಸಮಾಜ ಎಂದರೆ ನಿಷ್ಪಕ್ಷಪಾತವಾಗಿರಬೇಕು. ಸಮಾವೇಶದ ಅತಿಥಿಗಳ ಪಟ್ಟಿ ಗಮನಿಸಿದರೆ ಅದು ಕೋಲಿ ಸಮಾಜದ ಸಮಾವೇಶವಲ್ಲ ಕಾಂಗ್ರೆಸ್ ಸಮಾವೇಶವಾಗಿದೆ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದು ಅವರು ದೂರಿದ್ದಾರೆ.ಫೆ.೨೫ರಂದು ಹಮ್ಮಿಕೊಂಡಿರುವ ಕೋಲಿ ಸಮಾವೇಶವು ಕಮಕನೂರ ಅವರ ಏಕಪಕ್ಷೀಯ ನಿರ್ಧಾರವೇ ಆಗಿದೆ. ಸಮಾಜದ ಮುಖಂಡರ ಸಭೆ ಕರೆಯದೆ ಸಮಾವೇಶದ ದಿನಾಂಕ ಮತ್ತು ಅತಿಥಿಗಳ ಹೆಸರು ಘೋಷಣೆ ಮಾಡಿದ್ದೆ. ಜಿಲ್ಲೆಯ ಕೋಲಿ ಸಮಾಜದ ಹಿರಿಯ ಮುಖಂಡರನ್ನು ಕಡೆಗಣಿಸಿ, ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ತರಾತುರಿಯಲ್ಲಿ ಘೋಷಣೆ ಮಾಡಿದ್ದು ಅವರ ಸ್ವಯಂ ರಾಜಕೀಯ ಹಿತರಕ್ಷಣೆಯಿಂದ ಕೂಡಿದೆ ಎಂದು ಕೋಲಿ ಸಮಾಜದ ಮುಖಂಡರಾದ ಸುರೇಶ ಬೆನಕನಳ್ಳಿ, ಚಂದ್ರು ಕಾಳಗಿ, ತಮ್ಮಣ್ಣ ಡಿಗ್ಗಿ, ದಶರಥ ದೊಡ್ಡಮನಿ ಅವರು ಟೀಕಿಸಿದ್ದಾರೆ.