ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ನೀರು ಬಳಸುವ ಕ್ಷುಲ್ಲಕ ವಿಷಯವಾಗಿ ದಲಿತ ಸಮುದಾಯದ ಎರಡು ಗುಂಪು (ಎಸ್ಸಿ-ಎಸ್ಟಿ) ನಡುವೆ ನಡೆದ ಘರ್ಷಣೆಯಲ್ಲಿ 32 ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ಸಂಜೆ ಜರುಗಿದೆ.

ಗಾಯಾಳುಗಳನ್ನು ಮುಂಡರಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ತೀವ್ರವಾಗಿ ಗಾಯಗೊಂಡಿರುವ ಹಲವರನ್ನು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

​​ಎಸ್‌ಟಿ ಸಮುದಾಯದ 69 ಮತ್ತು ​ಎಸ್ಸಿ ಸಮುದಾಯದ 122 ಜನರ ವಿರುದ್ಧ ಸೇರಿದಂತೆ ಒಟ್ಟು 191 ಜನರ ಮೇಲೆ ದೂರು ಮತ್ತು ಪ್ರತಿ ದೂರಿನ ಎಫ್‌ಐಆರ್ ದಾಖಲಿಸಿರುವ ಮುಂಡರಗಿ ಪೊಲೀಸರು ಈಗಾಗಲೇ 21 ಜನರನ್ನು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ. ಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಘರ್ಷಣೆಗೆ ಕಾರಣ?: ​ಸೋಮವಾರ ಗ್ರಾಮದ ಎಸ್ಟಿ ಸಮುದಾಯಕ್ಕೆ ಸೇರಿದ ಮಾರುತಿ ತಳವಾರ ಎಂಬವರ ಹೊಲದಲ್ಲಿನ ಬಾನಿ (ನೀರಿನ ತೊಟ್ಟಿ)ಯಲ್ಲಿದ್ದ ನೀರನ್ನು ಅದೇ ಗ್ರಾಮದ ಎಸ್ಸಿ ಸಮುದಾಯಕ್ಕೆ ಸೇರಿದ ಸ್ವಾರೆಪ್ಪ ದುಂಡಪ್ಪನವರ ಕುಡಿದಿದ್ದಾರೆ ಎನ್ನಲಾಗಿದ್ದು, ಈ ವಿಷಯಕ್ಕೆ ಮಾರುತಿ ಮತ್ತು ಸ್ವಾರೆಪ್ಪ ಅವರ ನಡುವೆ ವಾಗ್ವಾದ ನಡೆದಿದೆ. ಬಾನಿ ಮುಟ್ಟಿ ನೀರು ಏಕೆ ಕುಡಿದೆ? ಎಂದು ಮಾರುತಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.​ಜಮೀನಿನಲ್ಲಿ ನಡೆದ ಹಲ್ಲೆಯ ವಿಷಯವನ್ನು ಸ್ವಾರೆಪ್ಪ ತನ್ನ ಸಮುದಾಯದ ಹಿರಿಯರಿಗೆ ತಿಳಿಸಿದ್ದಾರೆ. ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಜಮೀನಿನ ಬಳಿ ಜನರು ಜಮಾಯಿಸಿದ್ದು, ಮಾತಿಗೆ ಮಾತು ಬೆಳೆದು ಕಲ್ಲು ತೂರಾಟಕ್ಕೆ ನಡೆದಿದೆ. ​ಜಮೀನಿನ ಬಳಿ ಆರಂಭವಾದ ಗಲಾಟೆ ಗ್ರಾಮದ ಎಸ್‌ಸಿ ಕಾಲನಿಯವರೆಗೂ ಮುಂದುವರೆದಿದೆ. ಎಸ್ಟಿ ಸಮುದಾಯದ ಗುಂಪು ಕಾಲನಿಯ ಜನರ ಮೇಲೆ ಏಕಾಏಕಿ ಕಲ್ಲು ಮತ್ತು ದೊಣ್ಣೆಗಳಿಂದ ಭೀಕರ ಹಲ್ಲೆ ನಡೆಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.​ಪರಿಸ್ಥಿತಿ ನಿಯಂತ್ರಣದಲ್ಲಿ: ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ನಡೆದ ಎರಡು ಗುಂಪುಗಳ ನಡುವಿನ ಘರ್ಷಣೆಯ ನಂತರ ದೂರು ಪ್ರತಿ ದೂರು ದಾಖಲಾಗಿದ್ದು, ಇದುವರೆಗೂ 21 ಜನರನ್ನು ಬಂಧಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಎಸ್ಪಿ ರೋಹನ್ ಜಗದೀಶ್ ತಿಳಿಸಿದ್ದಾರೆ.ಕಳೆದ ತಿಂಗಳು ಶಿವರಾತ್ರಿ ಹಬ್ಬದ ಸಂದರ್ಭದಲ್ಲೂ ಈ ಎರಡು ಗುಂಪುಗಳ ನಡುವೆ ಸಣ್ಣ ಮಟ್ಟದ ಘರ್ಷಣೆ ನಡೆದಿತ್ತು. ಆ ಹಳೆಯ ವೈಷಮ್ಯವೂ ಈ ಘಟನೆಗೆ ಒಂದು ಪ್ರಮುಖ ಕಾರಣವಾಗಿರುವುದು ಕಂಡುಬಂದಿದೆ. ಈ ವೈಷಮ್ಯವು ಸೋಮವಾರದ ಘಟನೆಯಲ್ಲಿ ಮತ್ತಷ್ಟು ಉಲ್ಬಣಗೊಂಡು ಎರಡು ಗುಂಪುಗಳ ನಡುವೆ ಮಾರಾಮಾರಿಗೆ ದಾರಿಯಾಗಿದೆ ಎಂದರು.

ಗ್ರಾಮದಲ್ಲಿ ಪ್ರಸ್ತುತ ಉದ್ವಿಗ್ನ ಪರಿಸ್ಥಿತಿ ಇರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದರು.