ಮೀನು ವ್ಯಾಪಾರಿ ಸಿರಾಜ್ ಶಖೀಲ್ ಅಹಮ್ಮದ್ ಶೇಖ್(29) ನೀಡಿದ ದೂರಿನಲ್ಲಿ, ರಶೀದ್ ಮೆಹಬೂಬ್ ಖಾನ್, ಸಂತೋಷ್ ವೆಂಕಟೇಶ್ ವಡ್ಡರ್ ಹಾಗೂ ಸಾಹಿಲ್ ಬ್ಯಾರಿ ಅವರು ಕಾರಿಗೆ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಕಾರವಾರ: ನಗರದ ಮ್ಯಾಕ್ಸ್ ಶಾಪಿಂಗ್ ಮಾಲ್ ಸಮೀಪದ, ಹಳೆಯ ಗೀತಾಂಜಲಿ ಟಾಕೀಸ್ ಬಳಿ ಶನಿವಾರ ರಾತ್ರಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಈ ಸಂಬಂಧ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದೆ.ಮೀನು ವ್ಯಾಪಾರಿ ಸಿರಾಜ್ ಶಖೀಲ್ ಅಹಮ್ಮದ್ ಶೇಖ್(29) ನೀಡಿದ ದೂರಿನಲ್ಲಿ, ರಶೀದ್ ಮೆಹಬೂಬ್ ಖಾನ್, ಸಂತೋಷ್ ವೆಂಕಟೇಶ್ ವಡ್ಡರ್ ಹಾಗೂ ಸಾಹಿಲ್ ಬ್ಯಾರಿ ಅವರು ಕಾರಿಗೆ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸಂತೋಷ್ ಕಲ್ಲಿನಿಂದ ತಮ್ಮ ಸಹೋದರನ ಹಣೆಗೆ ಹೊಡೆದಿದ್ದು, ಸಾಹಿಲ್ ಸ್ಟೀಲ್ ರಾಡ್ ಕಸಿದುಕೊಂಡು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಇದಕ್ಕೆ ಪ್ರತಿಯಾಗಿ ರಶೀದ್ ಮೆಹಬೂಬ್ ಖಾನ್ ನೀಡಿದ ದೂರಿನಲ್ಲಿ, ಸಿರಾಜ್ ಹಾಗೂ ಅವರ ಸಹೋದರ ಕಾರಿಗೆ ಅಡ್ಡಗಟ್ಟಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಸಿರಾಜ್ ಸ್ಟೀಲ್ ರಾಡ್‌ನಿಂದ ತಮ್ಮ ಸಹೋದರನ ಕೈಗೆ ಹಾಗೂ ಸಾಹಿಲ್ ಬ್ಯಾರಿ ಅವರ ಕಾಲಿಗೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸಿರಾಜ್ ಅವರ ಸಹೋದರ ಹೆಲ್ಮೆಟ್‌ನಿಂದ ಸಂತೋಷ್ ವಡ್ಡರ್ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.ಎರಡೂ ಕಡೆಯವರು ಪರಸ್ಪರ ಹಲ್ಲೆ ಹಾಗೂ ಜೀವ ಬೆದರಿಕೆಯ ಆರೋಪಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರು ದೂರು- ಪ್ರತಿದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಗಲಾಟೆಗೆ ನಿಖರ ಕಾರಣವೇನು ಹಾಗೂ ಮೊದಲು ಹಲ್ಲೆ ನಡೆಸಿದವರು ಯಾರು ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಘಟನೆ ನಡೆದ ಸ್ಥಳದ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಸಾಧ್ಯತೆಯಿದ್ದು, ತನಿಖೆಯ ಬಳಿಕ ಘಟನೆಯ ಸಂಪೂರ್ಣ ವಿವರ ಸ್ಪಷ್ಟವಾಗಲಿದೆ. ದೋಣಿ ಮಗುಚಿ ಯುವಕ ಸಾವು
ಭಟ್ಕಳ: ತಾಲೂಕಿನ ಬೈಲೂರಿನಲ್ಲಿ ಭಾನುವಾರ ಮೀನುಗಾರಿಕೆಗೆ ತೆರಳಿದ ಯುವಕನೋರ್ವ ಪಾತಿದೋಣಿ ಮಗುಚಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.ತಾಲೂಕಿನ ಬೈಲೂರು ಹರಿಕಾಂತ್ರ ನಿವಾಸಿ ನವೀನ ಗಣಪತಿ ಹರಿಕಂತ್ರ(18) ಮೃತಪಟ್ಟ ವ್ಯಕ್ತಿ. ವಿದ್ಯಾರ್ಥಿಯಾದ ಇವರು ಭಾನುವಾರ ಸಂಜೆ ಅರಮದೇವಿ ಪಾತಿ ದೋಣಿಯಲ್ಕಿ ತನ್ನ ಸ್ನೇಹಿತರೊಂದಿಗೆ ಮೀನುಗಾರಿಕೆಗೆ ತೆರಳಿದಾಗ ಅಲೆಯ ರಭಸಕ್ಕೆ ದೋಣಿ ಮಗುಚಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.