ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಕಾಡ ಅಂಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ ವಿಚಾರವಾಗಿ ಗ್ರಾಮದ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಒಂದು ಗುಂಪು ಹಾಲು ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರೆ, ಮತ್ತೊಂದು ಗುಂಪು ಹಾಲು ಚೆಲ್ಲಲು ಕಾರಣರಾದವರ ವಿರುದ್ಧ ಪ್ರತಿಭಟಿಸುತ್ತಿರುವ ಘಟನೆ ಭಾನುವಾರ ಸಂಜೆ ಸಂಭವಿಸಿದೆ.ಗ್ರಾಮದ ಡೇರಿ ನೂತನ ಕಟ್ಟಡವನ್ನು ಯಾವುದೇ ಶಿಷ್ಠಾಚಾರವಿಲ್ಲದೆ ಉದ್ಘಾಟನೆ ಮಾಡಲು ಮುಂದಾದ ಒಂದು ಗುಂಪು ನೂತನ ಕಟ್ಟಡದ ಬೀಗವನ್ನು ತೆರೆದು ಅನಧಿಕೃತವಾಗಿ ಉದ್ಘಾಟನೆ ಮಾಡಲಾಗಿದೆ ಎಂದು ಇದೇ ಗ್ರಾಮದ ಮತ್ತೊಂದು ಗುಂಪು ಆರೋಪ ಮಾಡಿ ಕಟ್ಟಡಕ್ಕೆ ಬೀಗ ಜಡಿದು ಪ್ರತಿಭಟಿಸಿದ್ದಾರೆ.
ಸಂಘದ ಕಟ್ಟಡ ನಿರ್ಮಿಸಲು ಕೆಎಂಎಫ್, ಮುನ್ಮುಲ್ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಅನುದಾನ ಪಡೆದುಕೊಳ್ಳಲಾಗಿದೆ. ಸಹಕಾರ ಸಂಘಗಳ ನಿಯಮಾನುಸಾರ ಉದ್ಘಾಟನೆ ಮಾಡಿಲ್ಲ. ಸಚಿವರು ಮತ್ತು ಮುನ್ಮುಲ್ ಒಕ್ಕೂಟದ ಯಾವುದೇ ಅಧಿಕಾರಿಗಳನ್ನು ಆಹ್ವಾನಿಸದಿರುವುದು ಶಿಷ್ಠಾಚಾರದ ಸ್ಪಷ್ಟ ಉಲ್ಲಂಘನೆಯಾಗಿದೆ.ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹೆಸರು ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರಹೆಗ್ಗಡೆ ಅವರ ಹೆಸರನ್ನಷ್ಟೇ ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸಿ ಕಟ್ಟಡ ಉದ್ಘಾಟನೆಗೆ ಮುಂದಾಗಿರುವುದು ಹಾಲು ಒಕ್ಕೂಟದ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಬೆಂಬಲಿಗರು ಆರೋಪಿಸಿದ್ದಾರೆ.
ಸಂಘವು 2023-24ನೇ ಸಾಲಿನ ವಾರ್ಷಿಕ ಮಹಾ ಸಭೆ ನಡೆಸಲು ವಿಫಲವಾದ ಹಿನ್ನೆಲೆಯಲ್ಲಿ ಸಂಘದ ವತಿಯಿಂದಲೇ ಪಾಂಡವಪುರ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಸದರಿ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಆದೇಶಿಸಿದ್ದಾರೆ.ವಜಾಗೊಂಡ ಆಡಳಿತ ಮಂಡಳಿಯು ಹೈಕೋರ್ಟ್ ಮೊರೆ ಹೋಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಆದೇಶಕ್ಕೆ ತಡೆಯಾಜ್ಞೆ ತಂದಿರುತ್ತಾರೆ. ಈ ತಡೆಯಾಜ್ಞೆಗೆ ಮತ್ತೆ ನ್ಯಾಯಾಲಯವು ಕಳೆದ ಅ.22ರಂದು ಸಂಘದಲ್ಲಿ ಯಾವುದೇ ಪ್ರವೃತ್ತಿ, ಕಾರ್ಯಚಟುವಟಿಕೆಗಳು ನಡೆಯುವಂತಿಲ್ಲ ಎಂದು ಆದೇಶ ನೀಡಿ ಸದರಿ ಕಾಯಿದೆಯನ್ನು ನ.26ಕ್ಕೆ ಮುಂದೂಡಲಾಗಿದ್ದರೂ ಅತಿಕ್ರಮವಾಗಿ ಕಟ್ಟಡ ಉದ್ಘಾಟನೆಗೆ ಮುಂದಾಗಿರುವುದು ನ್ಯಾಯಾಲಯದ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ರೀತಿ ನ್ಯಾಯಾಲಯದ ಆದೇಶವಿದ್ದರೂ ಉದ್ದೇಶ ಪೂರ್ವಕವಾಗಿ ಆಡಳಿತ ಮಂಡಳಿಯವರು ಅನಧಿಕೃತವಾಗಿ ಸಂಘದ ನೂತನ ಕಟ್ಟಡದ ಪ್ರಾರಂಭದ ಕಾರ್ಯಕ್ರಮವನ್ನು ನ.24ರಂದು ಶಿಷ್ಠಾಚಾರ ಪಾಲಿಸದೆ ಮತ್ತು ಜಿಲ್ಲಾ ಹಾಲು ಒಕ್ಕೂಟದ ಗಮನಕ್ಕೆ ತರದೆ ಕಾರ್ಯಕ್ರಮ ಮಾಡಿದ್ದು ಉದ್ದೇಶಪೂರ್ವಕವಾಗಿ ರಾಜಕೀಯ ಬಿಕ್ಕಟ್ಟಿಗೆ ಎಡೆ ಮಾಡಿಕೊಟ್ಟಿದೆ. ಎರಡೂ ಗುಂಪಿನ ನಡುವಿನ ಮಾರಾಮಾರಿಗೆ ಕಾರಣವಾಗಿದೆ. ಇದರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಸಚಿವ ಎನ್.ಚಲುವರಾಯಸ್ವಾಮಿ ಬೆಂಬಲಿಗರು ಒತ್ತಾಯಿಸಿದ್ದಾರೆ.ನೂತನ ಕಟ್ಟಡ ಉದ್ಘಾಟನೆ ಹಿಂದೆ ಯಾವುದೇ ದುರುದ್ದೇಶವಿಲ್ಲ. ಈ ಹಿಂದೆ ಹಾಲು ಅಳೆಸುತ್ತಿದ್ದ ಕಟ್ಟಡ ಮಳೆ ಬಂದಾಗ ಸೋರುತ್ತಿದ್ದು, ನೂತನ ಕಟ್ಟಡದಲ್ಲಿ ಹಾಲು ಅಳೆಸಲು ಮುಂದಾಗಿದ್ದೇವೆ ಎಂದು ಸಂಘದ ಆಡಳಿತ ಮಂಡಳಿಯವರು ಸ್ಪಷ್ಟಪಡಿಸಿದ್ದಾರೆ.
ಯಾವುದೇ ಕರಪತ್ರ ಮುದ್ರಣ ಮಾಡಿಲ್ಲ. ಯಾವುದೇ ಉದ್ಘಾಟನಾ ಫಲಕಗಳನ್ನು ಹಾಕಿಲ್ಲ. ನೂತನ ಕಟ್ಟಡ ಅಧಿಕೃತವಾಗಿ ಉದ್ಘಾಟನೆಯಾಗುವವರೆಗೂ ಹಾಲು ಅಳೆಸುವುದಷ್ಟೇ ನಮ್ಮ ಉದ್ದೇಶವಾಗಿದೆ. ಈ ನಡುವೆ ಸಚಿವರ ಹಿಂಬಾಲಕರು ನೂತನ ಕಟ್ಟಡವನ್ನು ಪ್ರವೇಶ ಮಾಡಲು ಬಿಡುತ್ತಿಲ್ಲ ಎಂದು ಆರೊಪಿಸಿದರು.ನ.24ರಂದು ಇದೇ ವಿಚಾರಕ್ಕೆ ಎರಡೂ ಗುಂಪುಗಳ ನಡುವೆ ಗಲಾಟೆಯಾಗಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಟ್ಟಡ ಉದ್ಘಾಟನೆ ಮಾಡಬಾರದೆಂದು ಯಾವುದೇ ನ್ಯಾಯಾಲಯದ ಅದೇಶವಿಲ್ಲ. ನ್ಯಾಯಾಲಯದಲ್ಲಿರುವುದು ಆಡಳಿತ ಮಂಡಳಿಯ ಅನರ್ಹ ವಿವಾದ ಮಾತ್ರ ಎಂದರು.
ಹಾಲು ಚೆಲ್ಲಿ ರೈತರ ಆಕ್ರೋಶ:ಸೋಮವಾರ ಹಾಲು ಹಾಕಲು ಹಾಲು ತಂದಿದ್ದ ರೈತರು, ಹಾಲು ಖರೀದಿಸದೇ ಇದ್ದರಿಂದ ಹಾಲನ್ನು ಬೀದಿಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಮುನ್ಮುಲ್ ಮಾಜಿ ಸದಸ್ಯ ನೆಲ್ಲಿಗೆರೆ ಬಾಲು ನೇತೃತ್ವದಲ್ಲಿ ಹಾಲು ನೆಲಕ್ಕೆ ಚೆಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಅವರ ವಿರುದ್ಧ ಆಕ್ರೋಶ ಹೊರಹಾಕಿದರು.
ನೆಲ್ಲಿಗೆರೆ ಬಾಲು ಅವರು ಕೆಲ ಹಾಲು ಉತ್ಪಾದಕರ ಜತೆ ಸೇರಿ ಅವರನ್ನು ಪ್ರೇರೇಪಿಸಿ ಹಾಲನ್ನು ಬೀದಿಗೆ ಚೆಲ್ಲುವಂತೆ ಮಾಡಿ ಸಚಿವರಿಗೆ ಕೆಟ್ಟ ಹೆಸರು ತರಲು ಮುಂದಾಗಿದ್ದಾರೆ ಎಂದು ಸಿಆರ್‌ಎಸ್ ಬೆಂಗಲಿಗರು ಆಕ್ರೋಶ ವ್ಯಕ್ತಪಡಿಸಿದರು.ವಿಷಯ ತಿಳಿದು ಗ್ರಾಮಕ್ಕೆ ಆಗಮಿಸಿದ ಮುನ್ಮುಲ್ ಹಾಲಿ ನಿರ್ದೆಶಕ ಲಕ್ಷ್ಮೀನಾರಾಯಣ ಎರಡೂ ಗುಂಪುಗಳನ್ನು ಪ್ರತ್ಯೇಕವಾಗಿ ಮಧ್ಯಾಹ್ನದಿಂದ ಸಂಜೆವರೆಗೂ ಮಾತುಕತೆ ನಡೆಸಿ ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಸಂಧಾನ ವಿಫಲವಾಯಿತು.
ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.ಡೇರಿ ಘಟನೆ ಹಿಂದೆ ಸಚಿವ ಎನ್.ಚಲುವರಾಯಸ್ವಾಮಿ, ಮನ್ಮುಲ್ ಅಧಿಕಾರಿಗಳು ಅಥವಾ ಆಡಳಿತ ಮಂಡಳಿ ಕೈವಾಡವಿಲ್ಲ. ಗ್ರಾಮದ ಎರಡು ರಾಜಕೀಯ ಗುಂಪುಗಳ ನಡುವಿನ ವೈಷಮ್ಯ ಹಾಲು ಉತ್ಪಾದಕರಿಗೆ ಸಂಕಷ್ಟ ತರಬಾರದು. ಡೇರಿ ಹಿತದೃಷ್ಟಿಯಿಂದ ಎರಡೂ ಗುಂಪುಗಳು ಪರಸ್ಪರ ಅನ್ಯೋನ್ಯತೆ ಕಾಪಾಡಿಕೊಳ್ಳಬೇಕು.-ಲಕ್ಷ್ಮೀನಾರಾಯಣಗೌಡ, ಮನ್ಮುಲ್ ನಿರ್ದೇಶಕ
ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ. ಮನ್‌ಮುಲ್ ಹಾಗೂ ಕೆಎಂಎಫ್‌ನಿಂದ ಹಣ ನೀಡಲಾಗಿದೆ. ಕಟ್ಟಡ ಉದ್ಘಾಟನೆಗೆ ಅಧ್ಯಕ್ಷರು, ಎಂಡಿ, ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಶಿಷ್ಟಾಚಾರ ಉಲ್ಲಂಸಿದ್ದಾರೆ. ಅದಕ್ಕೆ ಉದ್ಘಾಟನೆಯನ್ನು ತಡೆಹಿಡಿದಿದ್ದಾರೆ. ಜೊತೆಗೆ ಸಂಘ ಸೂಪರ್ ಸೀಡ್ ಆಗಿದೆ. ಅವರು ಕೋರ್ಟ್‌ಗೆ ಹೋಗಿದ್ದಾರೆ. ನ್ಯಾಯಾಲಯದಲ್ಲಿ ತೀರ್ಮಾನ ಆಗೋವರೆಗೂ ಯಾವುದೇ ಕ್ರಮ ಆಗದಂತೆ ಸಿಇಒಗೆ ಆದೇಶ ಬಂದಿದೆ. ಆದರೂ ಹಾಲು ಅಳೆಸಲು ಹೋಗಿದ್ದಾರೆ. ಆಗ ಅಧಿಕಾರಿಗಳು ಮತ್ತು ಪೊಲೀಸರು ಹೊಸ ಕಟ್ಟಡದಲ್ಲಿ ಬೇಡ. ಹಳೇ ಡೈರಿಗಾದರೂ ಹಾಕಿ, ದೇವಸ್ಥಾನದ ಬಳಿಯಾದರೂ ಹಾಲು ಅಳೆಸಿ ಅಥವಾ ಪಕ್ಕದ ಊರಿನ ಡೇರಿಗಾದರೂ ಹಾಕಿ ಎಂದಿದ್ದಾರೆ. ಹೊಸ ಡೇರಿ ಉದ್ಘಾಟನೆ ಮಾಡುವಾಗ ಶಿಷ್ಟಾಚಾರ ಪಾಲಿಸುವಂತೆ ಹೇಳಿದ್ದಾರೆ. ಅದಕ್ಕೆ ನೆಲ್ಲೀಗೆರೆ ಬಾಲು ಎಂಬಾತ ಸಂಘದ ಕಚೇರಿಯ ಬೀಗ ಒಡೆದು ಹಾಲನ್ನೆಲ್ಲಾ ಚೆಲ್ಲಿದ್ದಾನೆ. ಹಾಲನ್ನು ಹಾಕಿಸಿಕೊಳ್ಳದಂತೆ ನಾನೆಲ್ಲೂ ಹೇಳಿಲ್ಲ. ಹೊಸ ಕಟ್ಟಡ ಬಿಟ್ಟು ಬೇರೆಲ್ಲೇ ಹಾಲು ಹಾಕಿದರೂ ಹಾಕಿಸಿಕೊಳ್ಳುವಂತೆ ಎಂಡಿ ಅವರಿಗೆ ಹೇಳಿದ್ದೇನೆ.
- ಎನ್.ಚಲುವರಾಯಸ್ವಾಮಿ, ಕೃಷಿ, ಜಿಲ್ಲಾ ಉಸ್ತುವಾರಿ ಸಚಿವರು;Resize=(128,128))
;Resize=(128,128))
;Resize=(128,128))
;Resize=(128,128))