ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ರಾಜ್ಯದಲ್ಲಿ ಭಾರೀ ಸಂಚಲನವನ್ನುಂಟು ಮಾಡಿರುವ ಹಾಸನದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಖಾಸಗಿ ಹೋಟೆಲ್‌ನ ಆವರಣದಲ್ಲಿ ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿಯೇ ನಡೆಯಿತು. ಪರಸ್ಪರ ಚಪ್ಪಲಿ ತೋರಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾನಿರತರು ಕೈ ಕೈ ಮಿಲಾಯಿಸಿದರು.ಆಗಿದ್ದೇನು?:
ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಜೆಡಿಎಸ್ ಕೋರ್ ಕಮಿಟಿ ಸಭೆ ಹಾಗೂ ಜೆಡಿಎಸ್ ಸಮಾವೇಶ ಏರ್ಪಡಿಸಲಾಗಿತ್ತು. ಕೋರ್ ಕಮಿಟಿ ಸಭೆ ಮುಗಿಸಿ ಮಾಜಿ ಸಿಎಂ ಕುಮಾರಸ್ವಾಮಿ ಹೊರಬರುತ್ತಿದ್ದರು. ಈ ವೇಳೆ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ನೇತೃತ್ವದಲ್ಲಿ ಐದಾರು ಜನ ಕಾರ್ಯಕರ್ತರ ತಂಡ ಜೆಡಿಎಸ್‌ಗೆ ಧಿಕ್ಕಾರ ಕೂಗಲು ಶುರು ಮಾಡಿತು.ಈ ಧಿಕ್ಕಾರ ಕೇಳಿ ಅವರತ್ತ ಕುಮಾರಸ್ವಾಮಿ ತೆರಳಿದರು. ಆದರೆ ಈ ವೇಳೆ ಧಿಕ್ಕಾರ, ಕೂಗಾಟ ಜೋರಾಯಿತು. ಆಗ ಕುಮಾರಸ್ವಾಮಿ ಅಲ್ಲಿಂದ ಸಮಾವೇಶವಿದ್ದ ಸ್ಥಳಕ್ಕೆ ತೆರಳಿದರು. ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಪ್ರತಿಭಟನೆಗೆ ಪ್ರತಿಯಾಗಿ ಪ್ರತಿಭಟನೆ ಶುರು ಮಾಡಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಆಗ ಪರಸ್ಪರ ತಳ್ಳಾಟ, ನೂಕಾಟ ನಡೆಯಿತು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಸಂಖ್ಯೆ ಬೆರಳಿಣಿಕೆಯಷ್ಟು ಮಾತ್ರ ಇತ್ತು. ಜೆಡಿಎಸ್ ಕಾರ್ಯಕರ್ತರ ಸಂಖ್ಯೆ ಜಾಸ್ತಿಯಿದ್ದರಿಂದ ಮೇಲುಗೈ ಸಾಧಿಸಿದಂತಾಯಿತು.
ಹೋಯ್ ಕೈ:ಅಷ್ಟರೊಳಗೆ ಮತ್ತಷ್ಟು ಕಾಂಗ್ರೆಸ್ ಕಾರ್ಯಕರ್ತರು ಗೇಟ್‌ನಿಂದ ಓಡುತ್ತಾ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಆಗ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮಂಡ್ಯ, ಹಾಸನ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಹೊರಬಂದು ಪ್ರತಿಭಟನೆ ಜೋರು ಮಾಡಿದರು. ಈ ವೇಳೆ ಪರಸ್ಪರ ಚಪ್ಪಲಿ ಪ್ರದರ್ಶಿಸಿದರು. ಇನ್ನೇನು ಚಪ್ಪಲಿ ಬೀಸಬೇಕೆನ್ನುವಷ್ಟರಲ್ಲೇ ಪೊಲೀಸರು ತಡೆದರು.
ಈ ವೇಳೆ ಭಾರಿ ನೂಕಾಟ ತಳ್ಳಾಟ ಜೋರಾಯಿತು. ಜೆಡಿಎಸ್‌ನವರ ಸಂಖ್ಯೆ ಜಾಸ್ತಿಯಿದ್ದರಿಂದ ಅವರನ್ನೆಲ್ಲ ತಳ್ಳಿಕೊಂಡು ಹೋಟೆಲ್‌ನಿಂದ ಹೊರಸಾಗಿಸಲು ಯತ್ನಿಸಿದರು. ಪರಸ್ಪರ ಕೈ ಕೈ ಮಿಲಾಯಿಸಿದರು. ಆಗ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲನಿಗೆ ಜೆಡಿಎಸ್‌ನ ಒಂದಿಬ್ಬರು ಗೂಸಾ ಕೊಟ್ಟರೆ, ಇನ್ನೊಬ್ಬ ಕಾರ್ಯಕರ್ತ ಪ್ರೇಮನಾಥ ಚಿಕ್ಕತುಂಬಳನ ಶರ್ಟ್ ಕೂಡ ಹರಿಯಿತು. ಆಗ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿ ಕೂಡ ನಡೆಯಿತು.ಕೈ ಕಾರ್ಯಕರ್ತರ ಬಂಧನ:
ಉಭಯ ಪಕ್ಷದವರನ್ನು ಸಮಾಧಾನಪಡಿಸಲು ಪೊಲೀಸರು ಹರಸಾಹಸ ಪಟ್ಟರು. ಬಳಿಕ ಪೊಲೀಸ್ ವ್ಯಾನ್ ತರಿಸಿ 20ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿ ಕರೆದುಕೊಂಡು ಹೋದರು. ಆಗಷ್ಟೇ ಪರಿಸ್ಥಿತಿ ಶಾಂತವಾಯಿತು. ಇಬ್ಬರ ನಡುವೆ ಪ್ರತಿಭಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.ಬಳಿಕ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ, ಡಿಸಿಪಿಗಳಾದ ರವೀಶ, ರಾಜೇಶ ಸೇರಿದಂತೆ ಹಿರಿಯ ಅಧಿಕಾರಿಗಳು ಆಗಮಿಸಿ ಶಾಂತಗೊಳಿಸಿದರು. ಬಳಿಕ ಜೆಡಿಎಸ್ ಸಮಾವೇಶ ಮುಗಿಯುವರೆಗೂ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಈ ನಡುವೆ ಕಾಂಗ್ರೆಸ್ ಕಾರ್ಯಕರ್ತರು, ಸಾವಿರಾರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಪ್ರಜ್ವಲ್ ರೇವಣ್ಣ, ರೇವಣ್ಣ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.