ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ಮುಂದಿನ ಒಂದು ವರ್ಷದಲ್ಲಿ ತಾಲೂಕಿನ ಎಲ್ಲಾ ಹಳ್ಳಿಗಳಿಗೂ ವಿವಿಸಾಗರದಿಂದ ಕುಡಿಯುವ ನೀರು ಕೊಡುತ್ತೇನೆ. ಅಲ್ಲದೇ ಜಿಲ್ಲೆಯ ನೀರಾವರಿ ಯೋಜನೆಯಾದ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸಲು ನಾನು ಮತ್ತು ನಮ್ಮ ಸರ್ಕಾರ ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.ತಾಲೂಕಿನ ಕೂನಿಕೆರೆ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಾನುವಾರ ವಿವಿ ಸಾಗರದಿಂದ ಶುದ್ಧೀಕರಿಸಿದ ಶುದ್ಧ ಕುಡಿವ ನೀರನ್ನು ವಿವಿಪುರ ಮತ್ತು ಇತರೆ 11 ಹಳ್ಳಿಗಳೂ, ಗುಡಿಹಳ್ಳಿ ಮತ್ತು ಇತರೆ 15 ಹಳ್ಳಿಗಳು ಹಾಗೂ ಈ ಮಾರ್ಗವಾಗಿ ಬರುವ 17 ಹಳ್ಳಿಗಳಿಗೆ ಬಹುಗ್ರಾಮ ಕುಡಿವ ನೀರು ಸರಬರಾಜು ಯೋಜನೆ 2ನೇ ಹಂತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಿಸಲು ಮಾರ್ಚ್ 3ರಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸಲಿದ್ದು, ಕಾಮಗಾರಿ ಎಲ್ಲಾ ಹಂತ ವೀಕ್ಷಿಸಿ ಪರಿಶೀಲಿಸಿ, ಕಾಮಗಾರಿಗೆ ಚುರುಕು ಮುಟ್ಟಿಸಿ ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸಲು ಕ್ರಮ ಕೈಗೊಳ್ಳಳಿದ್ದಾರೆ. ಜನತೆ ಆಶೀರ್ವಾದದಿಂದ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಕ್ಷೇತ್ರದಲ್ಲಿ ನಾನು ಅಧಿಕಾರಕ್ಕೆ ಬರಲು ಸಾಧ್ಯವಾಗಿದ್ದು ಅವರ ಋಣ ತೀರಿಸುವ ಕೆಲಸ ಮಾಡುತ್ತೇವೆ.ದೇಶದ ಇತಿಹಾಸದ ಪುಟ ತೆರೆದು ನೋಡಿದರೆ ಅಭಿವೃದ್ಧಿ ಪರ ಕೆಲಸ ಮಾಡುವುದರಲ್ಲಿ ಕಾಂಗ್ರೆಸ್ ಪಕ್ಷವೇ ಪ್ರಧಾನವಾಗಿದೆ. ಕಾಂಗ್ರೆಸ್ ಪಕ್ಷದ ಸರ್ಕಾರದ್ದು ಪ್ರಚಾರ ಕಡಿಮೆ ಕೆಲಸ ಜಾಸ್ತಿ. ಅಭಿವೃದ್ಧಿಯೇ ನಮ್ಮ ಆಡಳಿತದ ಮೂಲಮಂತ್ರ. ಆದರೆ ಬಿಜೆಪಿವರು ಬರೀ ಸುಳ್ಳು ಹೇಳುತ್ತಾ ಪ್ರಚಾರ ಪಡೆಯುತ್ತಾರೆ. ಮಹಿಳೆಯರು ಸದೃಢರಾದರೆ ಮಾತ್ರ ಈ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ನಮ್ಮ ಸರ್ಕಾರ ಮನಗಂಡು ಮಹಿಳೆಯರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳು ನೀಡಿದ್ದೇವೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಶೇ.74ರಷ್ಟು ಜನತೆ ಒಪ್ಪಿಕೊಂಡಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ಮಾತನಾಡಿ, ಹಿರಿಯೂರು ಚರಿತ್ರೆಯಲ್ಲಿ ಅತ್ಯಂತ ಹೆಚ್ಚು ಮತಗಳಿಂದ ಸುಧಾಕರ್ ರವರು ಗೆಲುವು ಸಾಧಿಸಲು ಈ ಕ್ಷೇತ್ರದ ಜನತೆ ಕಾರಣಿಭೂತರಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಜನತೆಗೆ ಕೊಟ್ಟಂತಹ ಎಲ್ಲಾ ಗ್ಯಾರಂಟಿ ಈಡೇರಿಸುವ ಮೂಲಕ ಕೊಟ್ಟ ಮಾತಿನಂತೆ ನಡೆದು ಕೊಂಡಿದೆ. ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಶಾಸಕರು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ ಎಂದರು.ಜಿಪಂ ಮಾಜಿ ಸದಸ್ಯ ಆರ್.ನಾಗೇಂದ್ರನಾಯ್ಕ ಮಾತನಾಡಿ, ತಾಲೂಕಿನಲ್ಲಿ ಶುದ್ಧ ಕುಡಿವ ನೀರಿನ ಸಮಸ್ಯೆಯಿದ್ದು ಅತಿ ಹೆಚ್ಚು ಪ್ಲೋರೈಡ್ ಯುಕ್ತ ನೀರು ಇರುವುದನ್ನು ಮನಗಂಡು 2008ರಲ್ಲಿಯೇ ಇಡೀ ತಾಲೂಕಿಗೆ ಕುಡಿವ ನೀರು ಪೂರೈಸಬೇಕೆಂಬ ಕನಸನ್ನು ನಮ್ಮ ಸಚಿವರು ಕಂಡಿದ್ದರು. ಇಂದು ಅವರ ಪರಿಶ್ರಮದಿಂದ ಆ ಕನಸು ನನಸಾಗುವ ಹಂತಕ್ಕೆ ಬಂದಿದೆ. ಈ ಯೋಜನೆಯಡಿ ₹36 ಕೋಟಿ ವೆಚ್ಚದಲ್ಲಿ ವಿವಿಪುರ ಸೇರಿ 45 ಹಳ್ಳಿಗಳು ಹಾಗೂ ₹26.37 ಕೋಟಿ ವೆಚ್ಚದಲ್ಲಿ ಐಮಂಗಲ ಮತ್ತು ಇತರೆ 30 ಹಳ್ಳಿಗಳಿಗೆ ನೀರು ಹರಿಸಲು ವಿವಿಸಾಗರ ಸಮೀಪದಲ್ಲಿ ಸುಮಾರು 16 ಲಕ್ಷ ಲೀಟರ್ ಸಾಮರ್ಥ್ಯದ ಎಂಬಿಟಿ ಟ್ಯಾಂಕ್ ನಿರ್ಮಿಸಿ ಅಲ್ಲಿಂದ ನೀರು ಪೂರೈಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಈ ವೇಳೆ ಗ್ರಾಪಂ ಅಧ್ಯಕ್ಷ ಈರಣ್ಣ, ಅತಾವುಲ್ಲಾ, ನೀರಾವರಿ ಸಲಹಾ ಸಮಿತಿ ಸದಸ್ಯ ಸುಂದರಣ್ಣ, ಮುಖಂಡರಾದ ತಿಮ್ಮರಾಯಪ್ಪ, ಮುತ್ತು, ಪಕೃದ್ದೀನ್, ಸದಸ್ಯರಾದ ರಘುನಾಥ್, ಕರಿಯಪ್ಪ, ಶಬಾನಾ, ಜುಲೇಖಾಬಿ, ಶಿವಮೂರ್ತಿ ಮಂಜುಳಾ, ಜಗನ್ನಾಥ್, ರಾಜಣ್ಣ, ಜಯಮ್ಮ, ಕರಿಯಣ್ಣ, ವಕೀಲ ಶಿವಕುಮಾರ್ ಮುಂತಾದವರಿದ್ದರು.