ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ರೈತರು ಬೆಳೆಗಳನ್ನು ಬೆಳೆಯುವುದು ಮಾತ್ರವಲ್ಲದೆ, ಅವುಗಳಿಂದ ಉಪ ಉತ್ಪನ್ನಗಳನ್ನು ತಯಾರಿಸಿ ಹೇಗೆ ಲಾಭ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದು ಆಧುನಿಕ ಪದ್ಧತಿಯಲ್ಲಿ ಕೃಷಿ ಮಾಡಿದ್ರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ರಾಜಶೇಖರ ಬೆಳೆಗಾರರಿಗೆ ಕಿವಿಮಾತು ಹೇಳಿದರು.ನಗರದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಮಹಾವಿದ್ಯಾಲಯ ಸಹಯೋಗದಲ್ಲಿ ನಡೆದ ದ್ರಾಕ್ಷಿ ರಫ್ತು ವ್ಯವಹಾರ ಅಭಿವೃದ್ಧಿ ಕಾರ್ಯಾಗಾರದಲ್ಲಿ ಮಾತನಾಡಿದರು. ಅಧಿಕ ಇಳುವರಿ ಹಾಗೂ ಅಧಿಕ ಲಾಭದ ಸೂತ್ರದಲ್ಲಿ ನೆಲೆ ಕಳೆದುಕೊಂಡ ನಮಗೆ ಗುಣಮಟ್ಟದಿಂದ ವಿಶ್ವಮಾನ್ಯ ದ್ರಾಕ್ಷಿ ಪಟ್ಟ ಕೈ ತಪ್ಪಿದೆ ಎಂದು ಕಳವಳ ವ್ಯಕ್ತಪಡಿಸಿದರು.
ದ್ರಾಕ್ಷಿ ಬೆಳೆಗಾರ ಕೆ.ಎಚ್.ಮುಂಬಾರೆಡ್ಡಿ ಮಾತನಾಡಿ, ವಿಜಯಪುರ ದ್ರಾಕ್ಷಿ ಬೆಳೆಗೆ ವಿಶ್ವ ಮಾನ್ಯತೆ ತಂದು ಕೊಡಬೇಕು. ದ್ರಾಕ್ಷಿ ಬೇಸಾಯಗಾರನಿಗೆ ಸುಸ್ಥಿರತೆ ಕಲ್ಪಿಸಬೇಕೆಂಬ ಬೇಡಿಕೆ ಇತ್ತೀಚಿಗೆ ಮುನ್ನೆಲೆಗೆ ಬಂದಿದೆ. ಸರ್ಕಾರ ಇದನ್ನು ಗಂಭೀರವಾದ ತೆಗೆದುಕೊಂಡು ನೆಲ ಕಚ್ಚುತ್ತಿರುವ ದ್ರಾಕ್ಷಿ ಬೆಳೆಗಾರನ ರಕ್ಷಣೆಗೆ ಧಾವಿಸಬೇಕು ಎಂದು ಮನವಿ ಮಾಡಿದರು.ಕೃಷಿ ಮಾಹಾವಿದ್ಯಾಲಯದ ಅಧಿಕಾರಿ ಡಾ.ಭೀಮಪ್ಪ ಮಾತನಾಡಿ, ಏರುತ್ತಿರುವ ದ್ರಾಕ್ಷಿ ಉತ್ಪಾದನಾ ಪ್ರಮಾಣಕ್ಕೆ ತಕ್ಕ ಆಂತರಿಕ ಮತ್ತು ಬಾಹ್ಯ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಳ್ಳಬೇಕು. ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ದ್ರಾಕ್ಷಿ ಬೆಳೆಗಾರರು ವಿಶ್ವಕ್ಕೆ ತೆರೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ರಫ್ತು ಯೋಗ್ಯ ದ್ರಾಕ್ಷಿ ಉತ್ಪಾದನೆಯನ್ನು ಗುರಿಯಾಗಿಸಿಕೊಂಡು ಅಗತ್ಯವಿರುವ ತಾಂತ್ರಿಕ ಮಾಹಿತಿ, ತರಬೇತಿ ಪಡೆದುಕೊಂಡು ದ್ರಾಕ್ಷಿ ಬೆಳೆಬೇಕು ಎಂದು ಹೇಳಿದರು.
ಕರಬಂಟನಾಳದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಅಧಿಕ ಉತ್ಪಾದನಾ ವೆಚ್ಚ ಮತ್ತು ಸ್ಫರ್ಧಾತ್ಮಕ ಬೆಲೆ ಅಲಭ್ಯತೆಯಿಂದ ಬಸವಳಿದ ದ್ರಾಕ್ಷಿ ಬೆಳೆಗಾರರ ನೋವು ಆಲಿಸುವ ಸ್ಪಂದನಾಶೀಲತೆಯನ್ನು ಸರ್ಕಾರಗಳು ತೋರಬೇಕು. ವೈಜ್ಞಾನಿಕ ಲಾಭ ತಂದು ಕೊಡಬಹುದಾದ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಣೆ ಮಾಡಿ ರೈತರಿಂದ ಒಣ ದ್ರಾಕ್ಷಿಯನ್ನು ನೇರವಾಗಿ ಖರೀದಿಸಲಿ. ಪಡಿತರದ ಮೂಲಕ ಸಾರ್ವಜನಿಕರಿಗೆ ವಿತರಣಾ ವ್ಯವಸ್ಥೆ ಸರ್ಕಾರ ಮಾಡಬೇಕು ಎಂದು ಸಲಹೆ ನೀಡಿದರು.ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಹುಲಕುಮಾರ ಬಾವಿದೊಡ್ಡಿ, ತೋಟಗಾರಿಕೆ ಸಹಾಯಕ ನಿರ್ದೇಶಕ ರಾಘವೇಂದ್ರ ಬಗಲಿ, ಆಯುರ್ವೇದ ಮಹಾವಿದ್ಯಾಲಯದ ಉಪನ್ಯಾಸಕ ಡಾ.ದರ್ಶನ ದೊರೆ, ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಅಶೋಕ ಸಜ್ಜನ, ಎಸ್.ವಿ.ದೇಶಪಾಂಡೆ, ರಫ್ತು ಬೆಳೆಗಾರರಾದ ವಿಶ್ವನಾಥ ಚೆನ್ನಾಳ, ಎಂ.ಬಿ ಬಿರಾದಾರ ಉಪಸ್ಥಿತರಿದ್ದರು.ಬಹು ರಾಷ್ಟ್ರಗಳಲ್ಲಿ ಬೇಡಿಕೆ ಇರುವ ರಾಸಾಯನಿಕ ತಾಜಾ ಹಾಗೂ ಒಣದ್ರಾಕ್ಷಿ ಬೆಳೆಯಲು ಉತ್ತೇಜಿಸಬೇಕು. ದ್ರಾಕ್ಷಿ ಬೆಳೆ ಉತ್ಪಾದನೆ, ಕೊಯ್ಲು, ಸಂಸ್ಕರಣೆ ಹಾಗೂ ಶೇಖರಣೆಗೆ ಸಂಬಂಧಿತ ಸುಧಾರಿತ ತಂತ್ರಜ್ಞಾನಗಳ ಸಹಯೋಗ ಪಡೆದು ಸ್ಪರ್ಧಾತ್ಮಕ ದರದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನಿರ್ದಿಷ್ಟ ಮಾರುಕಟ್ಟೆಗೆ ರಫ್ತು ಮಾಡಬೇಕು.
ಅರವಿಂದ ಕೊಪ್ಪ,ತೋಟಗಾರಿಕೆ ವಿವಿಯ ಸಂಶೋಧನಾ ಮಂಡಳಿ ಸದಸ್ಯ.