ವಿದ್ಯಾವಂತರು ಅಂಬೇಡ್ಕರ್ ಆಶಯದಂತೆ ಸಮಾಜದ ಋಣ ತೀರಿಸಿ: ಡಾ.ಎಸ್. ತುಕಾರಾಂ

| Published : Feb 19 2024, 01:35 AM IST

ವಿದ್ಯಾವಂತರು ಅಂಬೇಡ್ಕರ್ ಆಶಯದಂತೆ ಸಮಾಜದ ಋಣ ತೀರಿಸಿ: ಡಾ.ಎಸ್. ತುಕಾರಾಂ
Share this Article
  • FB
  • TW
  • Linkdin
  • Email

ಸಾರಾಂಶ

ಬುದ್ಧನ ಕುರಿತ ಪುಸ್ತಕದಿಂದಾಗಿ ಅಂಬೇಡ್ಕರ್ ಬದುಕು ಬದಲಾಯಿತು. ಅದೇ ರೀತಿ ವಿದ್ಯಾರ್ಥಿಗಳು ಪುಸ್ತಕಗಳನ್ನು ಓದಬೇಕು. ಆ ಮೂಲಕ ಅಂಬೇಡ್ಕರ್ ಅವರನ್ನು ಅರಿಯಬೇಕು. ಮಗು ನಮ್ಮಂತಾಗಬಾರದು ಎಂದು ವಿದ್ಯೆ ಕೊಡಿಸುವ ತಂದೆ- ತಾಯಿ, ಪ್ರಾಥಮಿಕ ಶಾಲೆಗೆ ದಾಖಲು ಮಾಡಿಕೊಂಡು ವಿದ್ಯೆ ನೀಡುವ ಗುರುಗಳನ್ನು ಮರೆಯಬಾರದು

ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯಾವಂತರು ಅಂಬೇಡ್ಕರ್ ಆಶಯದಂತೆ ಸಮಾಜಕ್ಕೆ ವಾಪಸ್ ಕೊಡುವ ಮೂಲಕ ಋಣ ಸಂದಾಯ ಮಾಡಬೇಕು ಎಂದು ಕರ್ನಾಟಕ ವಸತಿ ಶಿಕ್ಷಣ ಶಾಲೆಗಳ ಸಂಸ್ಥೆಯ ಸಲಹೆಗಾರರೂ ಆದ ಪ್ರಗತಿಪರ ಚಿಂತಕ ಡಾ.ಎಸ್. ತುಕಾರಾಂ ಕರೆ ನೀಡಿದರು.

ವಿನಾಯಕ ಕ್ರೀಡಾ ಹಾಗೂ ಸಮಾಜ ಸೇವಾ ಸಂಸ್ಥೆಯು ಅಶೋಕಪುರಂ ಮೂರನೇ ಕ್ರಾಸಿನ ಕೆ. ಶಿವರಾಂ ಕ್ರೀಡಾಂಗಣದ ಭೀಮ ಫಿಟ್ನೆಸ್ ವ್ಯಾಯಾಮ ಶಾಲೆಯ ಬುದ್ಧ ಧ್ಯಾನ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಬುದ್ಧನ ಕುರಿತ ಪುಸ್ತಕದಿಂದಾಗಿ ಅಂಬೇಡ್ಕರ್ ಬದುಕು ಬದಲಾಯಿತು. ಅದೇ ರೀತಿ ವಿದ್ಯಾರ್ಥಿಗಳು ಪುಸ್ತಕಗಳನ್ನು ಓದಬೇಕು. ಆ ಮೂಲಕ ಅಂಬೇಡ್ಕರ್ ಅವರನ್ನು ಅರಿಯಬೇಕು. ಮಗು ನಮ್ಮಂತಾಗಬಾರದು ಎಂದು ವಿದ್ಯೆ ಕೊಡಿಸುವ ತಂದೆ- ತಾಯಿ, ಪ್ರಾಥಮಿಕ ಶಾಲೆಗೆ ದಾಖಲು ಮಾಡಿಕೊಂಡು ವಿದ್ಯೆ ನೀಡುವ ಗುರುಗಳನ್ನು ಮರೆಯಬಾರದು ಎಂದು ಆವರು ಕಿವಿಮಾತು ಹೇಳಿದರು.

ಅಂಬೇಡ್ಕರ್ ಅವರು ಕರುಣೆ ಹಾಗೂ ಮೈತ್ರಿ ಕಲಿಸಿದ ಬುದ್ಧ, ಸಂತ ಕಬೀರ್ ಹಾಗೂ ಜ್ಯೋತಿ ಬಾಫುಲೆ ಅವರನ್ನು ಗುರುಗಳಾಗಿ ಗುರುತಿಸಿಕೊಂಡು, ಅರಿವಿನ ಜ್ಞಾನ ಹೆಚ್ಚಿಸಿಕೊಂಡು ಭಾತೃತ್ವ, ಸಮಾನತೆ, ಸೋದರತ್ವ ಬೆಳೆಸಿಕೊಂಡರು. ನೀವು ಅವರಂತಾಗಬೇಕು ಎಂದು ಅವರು ಹೇಳಿದರು.

ಸಂವಿಧಾನದಿಂದಾಗಿ ಅಸ್ಪೃಶ್ಯತೆ ಹೋಗಿದೆ ಎಂದು ಭಾವಿಸಬೇಡಿ. ಇನ್ನೂ ಕೂಡ ಹೋಗಿಲ್ಲ. ಹೀಗಾಗಿ ಪೋಷಕರು ಮಕ್ಕಳಿಗೆ ಜಾತಿ ಮೀರಿದ ಪ್ರೀತಿ ಕಲಿಸಬೇಕು. ಅಂಬೇಡ್ಕರ್ ರನ್ನು ಪೂಜಿಸುವ ಬದಲು ಓದಿ ಹೃದಯಕ್ಕೆ ತೆಗೆದುಕೊಳ್ಳಬೇಕು. ಅವರ ಅರಿವನ್ನು ಎದೆಯ ಭಾಷೆಯಾಗಿಸಿಕೊಳ್ಳಬೇಕು. ಇಲ್ಲದಿದ್ದರೆ ತಬ್ಬಲಿಗಳಾಗುತ್ತೇವೆ ಎಂದು ಅವರು ಎಚ್ಚರಿಸಿದರು.

ಬುದ್ಧ ನಿನಗೆ ನೀನೆ ಬೆಳಕು ಎಂದರು. ಅಂದರೆ ನಾವು ಕಣ್ಣು ಮುಚ್ಚಿದಾಗ ಕತ್ತಲು, ಕಣ್ಣು ತೆರೆದರೆ ಬೆಳಕು. ಅದೇ ರೀತಿ ನಾವು ಅವರಿವರಂತಾಗಬೇಕು ಎಂದು ಬಯಸದೇ ನಾನು ನನ್ನಂತಾಗಬೇಕು. ಅಂಕದ ಹಿಂದೆ ಓಡುವ ಬದಲು ಅಂಕೆಯಲ್ಲಿ ಬದುಕುವಂತಾಗಬೇಕು. ಸಮ ಸಮಾಜ, ಸಾಮರಸ್ಯ, ಶಾಂತಿ, ಸೌಹಾರ್ದತೆ, ಸಹಬಾಳ್ವೆ, ಸೋದರತ್ವ ಇರಬೇಕು. ಅಂಬೇಡ್ಕರ್ರ್‌ ಅವರು ಸಂವಿಧಾನದಲ್ಲಿ ಹೇಳಿರುವುದು ಇದೇ ಅಂಶಗಳನ್ನು ಎಂದು ಅವರು ನೆನಪಿಸಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಮಾನಸ ಗಂಗೋತ್ರಿ ಕಾನೂನು ವಿಭಾಗದ ಪ್ರಾಧ್ಯಾಪಕ ಡಾ.ರಮೇಶ್ ಮುಖ್ಯ ಅತಿಥಿಗಳಾಗಿದ್ದರು. ವಿನಾಯಕ ಕ್ರೀಡಾ ಮತ್ತು ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷ ಎಸ್. ಆನಂದಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಂ.ಕೆ. ರೇವಣ್ಣ ಪ್ರಾಸ್ತಾವಿಕ ಭಾಷಣ ಮಾಡಿದರು. ಗೌರವಾಧ್ಯಕ್ಷ ಎಂ. ಮಾದಯ್ಯಉಪಸ್ಥಿತರಿದ್ದರು.

ಸಂಸ್ಥೆಯ ಸದಸ್ಯರು ಬುದ್ಧ ವಂದನೆ ಸಲ್ಲಿಸಿದರು. ಕೆಂಪಸಿದ್ದಯ್ಯ ಪ್ರಾರ್ಥಿಸಿದರು. ಪುರುಷೋತ್ತಮ ಸ್ವಾಗತಿಸಿದರು. ಶಾಂತರಾಜು ನಿರೂಪಿಸಿದರು. ಮಹಾಲಿಂಗಣ್ಣ, ಶಿವಣ್ಣ, ಚಂದ್ರಯ್ಯ, ಚಂದ್ರಶೇಖರ, ಮಹಾದೇವಸ್ವಾಮಿ ಮೊದಲಾದವರು ಇದ್ದರು.

---