ಸಾರಾಂಶ
ನರಗುಂದ: ವಿದ್ಯಾರ್ಥಿಗಳಲ್ಲಿ ದೃಢ ಸಂಕಲ್ಪ ಹಾಗೂ ಸಾಧಿಸುತ್ತೇನೆಂಬ ಛಲವಿದ್ದರೆ ಜೀವನದಲ್ಲಿ ಎಂತಹ ಮಹತ್ಕಾರ್ಯವನ್ನಾದರೂ ಸಾಧಿಸಬಹುದು. ಸಾಧನೆಗೆ ಆತ್ಮ ವಿಶ್ವಾಸವೂ ಅಗತ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಗುರುನಾಥ ಹೂಗಾರ ಹೇಳಿದರು. ಅವರು ಪಟ್ಟಣದ ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಆಯೋಜಿಸಿದ್ದ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಪೂರ್ವ ಸಿದ್ಧತೆ ಹಾಗೂ ಅಧ್ಯಯನದಲ್ಲಿ ಏಕಾಗ್ರತೆ ಕುರಿತು ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಅದಮ್ಯ ಶಕ್ತಿ ಇರುತ್ತದೆ. ನಿಮ್ಮ ಶಕ್ತಿಯ ಬಗ್ಗೆ ನಿಮಗೆ ನಂಬಿಕೆ ಇರಬೇಕು, ಪರೀಕ್ಷೆಯಲ್ಲಿ ಯಶಸ್ಸು ಸುಮ್ಮನೆ ಬರದು, ಅದಕ್ಕೆ ನಿರಂತರ ಪ್ರಯತ್ನ ಹಾಗೂ ಶ್ರದ್ಧೆ, ಬದ್ಧತೆ ಮುಖ್ಯ, ಅಧ್ಯಯನ ನಿರತರಾದಾಗ ನಕಾರಾತ್ಮಕ ಭಾವನೆಗಳಿಗೆ ಅವಕಾಶ ನೀಡಬಾರದು. ಅದು ನಿಮ್ಮ ಶಕ್ತಿಯನ್ನು ಕುಗ್ಗಿಸುತ್ತದೆ, ಕ್ರಮಬದ್ಧ ಅಧ್ಯಯನದಿಂದ ಏಕಾಗ್ರತೆ ಲಭಿಸಲು ಸಾಧ್ಯ ಎಂದು ತಿಳಿಸಿದರು.ಧಾರವಾಡದ ಕ.ವಿ.ವ. ಸಂಘದ ಶಿಕ್ಷಣ ಮಂಪಟದ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಅಭ್ಯಾಸದ ಬಗ್ಗೆ ಹಸಿವು ಹಾಗೂ ಹಂಬಲ ಮುಖ್ಯ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಬಲ್ಲೆ ಆ ಸಾಮರ್ಥ್ಯ ನನ್ನಲ್ಲಿದೆ ಎಂಬ ಭಾವನೆ ಮುಖ್ಯ, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ ಜೀವನದ ಒಂದು ಮಹತ್ವದ ತಿರುವು ಅದು ನಿಮ್ಮ ಮುಂದಿನ ಭವಿಷ್ಯ ನಿರ್ಧರಿಸುತ್ತದೆ. ಅರ್ಥ ಮಾಡಿಕೊಂಡು ಓದುವುದರಿಂದ ನಿಮ್ಮಲ್ಲಿ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಓದಿದ್ದನ್ನು ಸಾರಾಂಶ ರೂಪದಲ್ಲಿ ಬರೆಯುವುದರಿಂದ ಸ್ಮರಣ ಶಕ್ತಿ ಕುದುರುವುದು ಎಂದು ಹೇಳಿದರು.
ಧಾರವಾಡದ ಹೊಂಬೆಳಕು ಪ್ರತಿಷ್ಠಾನದ ಅಧ್ಯಕ್ಷೆ ಡಾ.ವೀಣಾ ಬಿರಾದಾರ ಉಪನ್ಯಾಸ ನೀಡಿ, ಪರೀಕ್ಷಾ ಸಂದರ್ಭದಲ್ಲಿ ಕ್ರಮ ಬದ್ಧ ಅಧ್ಯಯನ ಮುಖ್ಯ ಪುನರಾವರ್ತನೆ ಗುಂಪು ಚರ್ಚೆ ಮಾಡುವುದರಿಂದ ವಿಷಯದ ಗ್ರಹಿಕೆ ಹೆಚ್ಚಾಗುತ್ತದೆ. ಕಂಠ ಪಾಠ ಮಾಡವದು, ಸಮಯ ಪರಿಪಾಲನೆ, ಕರ್ತವ್ಯ ಪ್ರಜ್ಞೆ ಪ್ರಾಮಾಣಿಕತೆ ಸತತ ಅಭ್ಯಾಸದಿಂದ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲುಬಹುದು. ಸಾತ್ವಿಕ ಆಹಾರ ಸೇವನೆ, ಅಲ್ಪ ವಿಶ್ರಾಂತಿಯೂ ಮುಖ್ಯ ವಿದ್ಯಾರ್ಥಿಗಳಿಗೆ ಓದುವುದು ಎಷ್ಟು ಮುಖ್ಯವೋ ಬರವಣಿಗೆಯೂ ಅಷ್ಟೇ ಮುಖ್ಯಎಂಬುದನ್ನು ತಿಳಿಯಬೇಕು. ಪರೀಕ್ಷೆಯ ಬಗ್ಗೆ ಭಯ ಪಡದೇ ಹಬ್ಬದಂತೆ ವಿಜೃಂಭಿಸಬೇಕೆಂದು ಹೇಳಿದರು.ಉಪ ಪ್ರಾಚಾರ್ಯ ಎಸ್.ಬಿ. ಹರಪನಹಳ್ಳಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಬಗ್ಗೆ ಆತ್ಮವಿಶ್ವಾಸ ಹೆಚ್ಚಿಸಲು ಧಾರವಾಡದ ಕ.ವಿ.ವ. ಸಂಘದ ಈ ಪ್ರಯತ್ನ ಅಭಿನಂದನೀಯ, ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಲು ಬೇಕಾದ ವಿವಿಧ ಆಯಾಮಗಳು ಅರ್ಥ ಮಾಡಿಕೊಳ್ಳಬೇಕು ಎಂದರು.
ಬಿ.ಇ.ಓ ಕಚೇರಿಯ ಶಿಕ್ಷಣ ಸಂಯೋಜಕ ಡಾ. ಎಂ.ಎಚ್. ಚೂರಿ, ಎಸ್.ಎಸ್. ಸಜ್ಜನರ, ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ, ಮುಖ್ಯಾಧ್ಯಾಯ ಝೆಡ್.ಎಂ.ಖಾಜಿ, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ, ಮುಖ್ಯಾಧ್ಯಾಯ ಪಿ.ಸಿ. ಕಲಹಾಳ, ವಿವಿಧ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಸೇರಿದಂತೆ ಮುಂತಾದವರಿದ್ದರು ಇದ್ದರು.ಎಫ್.ಎಂ. ಹಾಡಕಾರ ಸ್ವಾಗತಿಸಿದರು. ಶಿಕ್ಷಕ ಎಸ್.ಜಿ. ಮಣ್ಣೂರಮಠ ನಿರೂಪಿಸಿದರು. ಆರ್.ಎಸ್. ಗೆಜ್ಜಿ ವಂದಿಸಿದರು.