ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ: ಸವಳು ನೀರಿರುವ ಊರುಗಳಲ್ಲಿ ಹಾಗೂ ಕುಡಿಯುವ ನೀರಿನ ಕೊರತೆಯ ಗ್ರಾಮಗಳು ಸೇರಿದಂತೆ ಜಿಲ್ಲಾದ್ಯಂತ ಶುದ್ಧ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಸ್ಥಾಪಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಬೇಸಿಗೆಯ ಸಮಯದಲ್ಲಿಯೇ ಸ್ಥಗಿತಗೊಂಡಿರುವುದು ಸೋಜಿಗದ ಸಂಗತಿ.ನಗರ ಪ್ರದೇಶಕ್ಕಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಈ ಘಟಕಗಳು ಜನರಿಗೆ ನೀರಿನ ಆಸರೆ ಒದಗಿಸಿವೆ. ಬಹುತೇಕ ಗ್ರಾಮೀಣಗಳಲ್ಲಿ ಕೊಳವೆ ಬಾವಿಗಳೇ ಕುಡಿಯುವ ನೀರಿಗೆ ಆಸರೆ. ಜಲಜೀವನ ಮಿಶನ್ ಅಡಿಯಲ್ಲಿ ಪ್ರತಿ ಮನೆಗೂ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಬರೀ ದಾಖಲೆಗಳಲ್ಲಿ ಮಾತ್ರ ಆಗಿದ್ದು, ಕುಡಿಯಲು ಬಹುತೇಕ ಗ್ರಾಮಗಳಲ್ಲಿ ಇದೇ ಶುದ್ಧ ಕುಡಿಯುವ ನೀರಿನ ಘಟಕಗಳೇ ಆಧಾರ.
ಕೊಳವೆ ಬಾವಿ ನೀರು ತೀರಾ ಗಡಸಾಗಿದ್ದು, ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ನಿಟ್ಟಿನಲ್ಲಿ ಕೆಲವು ವರ್ಷಗಳ ಹಿಂದೆ ಈ ಘಟಕಗಳನ್ನು ಸ್ಥಾಪಿಸಲಾಗಿತ್ತು. ಆದರೆ, ನಿರ್ವಹಣೆ ಕೊರತೆ, ಕಾಯಿನ್ ಬೂತ್ ಇಲ್ಲದಿರುವುದು, ಕೊಳವೆ ಬಾವಿ ನೀರಿನ ಕೊರತೆ, ಪೈಪಲೈನ್ ಸಮಸ್ಯೆ, ಕೆಲವು ಕಡೆಗಳಲ್ಲಿ ನೀರು ಬಳಸದೇ ಇರುವುದು ಸಹ ಈ ಘಟಕಗಳು ಸ್ತಬ್ಧವಾಗಲು ಕಾರಣವಾಗಿದೆ. ತಾಲೂಕಿನ ಯಾದವಾಡದಲ್ಲಿ ಒಂದು ಘಟಕ ಕಾರ್ಯನಿರತವಾಗಿದ್ದರೆ, ಇನ್ನೊಂದು ಬಂದ್ ಆಗಿದೆ. ಅಳ್ನಾವರ, ಅಣ್ಣಿಗೇರಿ, ಕುಂದಗೋಳ ಹೀಗೆ ಜಿಲ್ಲೆಯಲ್ಲಿ ಸಾಕಷ್ಟು ಘಟಕಗಳು ಕಾರ್ಯ ಮರೆತಿದ್ದು, ಬೇಸಿಗೆಯಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವಲ್ಲಿ ಹಿಂದೆ ಬಿದ್ದಿವೆ.123 ಘಟಕಗಳು ಬಂದ್
ಧಾರವಾಡ ಜಿಲ್ಲೆಯಲ್ಲಿ ಒಟ್ಟು 467 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಈ ಪೈಕಿ 344 ಕಾರ್ಯ ಮಾಡುತ್ತಿದ್ದು, 123 ಬಂದ್ ಆಗಿವೆ. ಅಳ್ನಾವರದಲ್ಲಿ ಇರುವ 17ರ ಪೈಕಿ 11 ಸ್ಥಗಿತಗೊಂಡಿದ್ದು, ನೀರಿನ ಸಮಸ್ಯೆ ನಿಧಾನವಾಗಿ ಶುರುವಾಗಿದೆ. ಚಾಲ್ತಿ ಇರುವ 6 ಘಟಕಗಳಿಂದಲೇ ನೀರು ಪಡೆಯುತ್ತಿದ್ದು, ಕಾಳಿ ನದಿ ನೀರಿಗಾಗಿಯೂ ಕಾಯಲಾಗುತ್ತಿದೆ. ಧಾರವಾಡದಲ್ಲಿ 130 ಘಟಕಗಳ ಪೈಕಿ 63 ಚಾಲ್ತಿಯಲ್ಲಿದ್ದು 67 ಬಂದ್ ಆಗಿವೆ. ಹುಬ್ಬಳ್ಳಿಯಲ್ಲಿ 78 ಘಟಕಗಳ ಪೈಕಿ 9 ಬಂದ್ ಆಗಿವೆ. ಕಲಘಟಗಿಯಲ್ಲಿ 88 ಘಟಕಗಳ ಪೈಕಿ 12 ಬಂದ್ ಆಗಿವೆ. ಕುಂದಗೋಳದಲ್ಲಿ 88 ಘಟಕಗಳ ಪೈಕಿ 18 ಸ್ಥಗಿತವಾಗಿವೆ. ನವಲಗುಂದದಲ್ಲಿ 43 ಘಟಕಗಳ ಪೈಕಿ 5 ಬಂದ್ ಆಗಿವೆ. ಇನ್ನು ಅಣ್ಣಿಗೇರಿಯಲ್ಲಿ 23 ಪೈಕಿ ಒಂದೇ ಬಂದ್ ಆಗಿದೆ ಎಂದು ಗ್ರಾಮೀಣ ಕುಡಿಯುವ ನೀರಿನ ಸರಬರಾಜು ಇಲಾಖೆ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.ಹೀಗೆ ಕಾರ್ಯ ಮರೆತ ಘಟಕಗಳ ಪರಿಶೀಲನೆ ಹಾಗೂ ದುರಸ್ತಿ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳು, ಗ್ರಾಪಂಗಳು ನಿರ್ಲಕ್ಷ್ಯ ಮಾಡಿರುವುದಕ್ಕೆ ಮನೆ ಮನೆಗೆ ನಳಗಳು ಬಂದಿದ್ದು, 24 ಗಂಟೆ ನೀರು ಬರಲಿದೆ ಎಂಬ ವಿಶ್ವಾಸದ ಸಬೂಬು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿ ಸೇರಿದಂತೆ ಜಿಲ್ಲೆಯ ಸಾಕಷ್ಟು ಗ್ರಾಮಗಳಲ್ಲಿ ಇನ್ನೂ 24 ಗಂಟೆ ನೀರಿನ ಲಭ್ಯತೆ ಇಲ್ಲ. ಇಂತಹ ಸಮಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳೇ ಆಧಾರ ಎನ್ನುವುದನ್ನು ಅಧಿಕಾರಿಗಳು ಮರೆತಿದ್ದಾರೆ. ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ನಿರ್ಮಿಸಿದ ಘಟಕಗಳನ್ನು ನಿರ್ವಹಿಸಲು ಸಾಧ್ಯವಾಗದೇ ಸ್ಥಗಿತಗೊಳಿಸಿರುವುದು ಆಡಳಿತದ ವೈಫಲ್ಯ ಎಂದು ಮಾಜಿ ಶಾಸಕಿ ಸೀಮಾ ಮಸೂತಿ ಬೇಸರ ವ್ಯಕ್ತಪಡಿಸುತ್ತಾರೆ.
ಗ್ರಾಮಗಳಲ್ಲಿ ನೀರಿನ ಘಟಕ ಹಾಳಾಗಿರುವುದು ನಿಜ: ದಿವ್ಯಪ್ರಭುಬೇಸಿಗೆ ವೇಳೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಕೆಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿರುವುದು ಕಂಡು ಬಂದಿವೆ. ಜಿಪಂ ಸಿಇಒ ಗ್ರಾಮಗಳಿಗೆ ಭೇಟಿ ನೀಡಿ, ಕುಡಿಯುವ ನೀರು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ವಿಶೇಷ ಸಭೆ ನಡೆಸಿದ್ದಾರೆ. 15 ದಿನಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಮಾಹಿತಿ ಸಂಗ್ರಹಿಸಿ, ಏಪ್ರಿಲ್ ತಿಂಗಳೊಳಗಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಘಟಕಗಳನ್ನು ಸರಿಪಡಿಸುವ ಕಾರ್ಯಕ್ರಮವನ್ನು ಅಭಿಯಾನದ ರೂಪದಲ್ಲಿ ಹಮ್ಮಿಕೊಂಡು, ಮುಂದಿನ 2 ತಿಂಗಳು ಕುಡಿಯುವ ನೀರಿನ ಅಭಾವವಾಗದಂತೆ ಕ್ರಮ ವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.ಶೀಘ್ರ ದುರಸ್ತಿಶುದ್ಧ ಕುಡಿಯುವ ನೀರಿನ ಘಟಕಗಳನ್ನು ಈ ಮೊದಲು ಗುತ್ತಿಗೆದಾರರು ನಿರ್ವಹಿಸುತ್ತಿದ್ದರು. ಒಂದಿಷ್ಟು ತಮ್ಮ ಇಲಾಖೆ ಹಾಗೂ ಮತ್ತೊಂದಿಷ್ಟು ಆಯಾ ಗ್ರಾಪಂಗಳೇ ನಿರ್ವಹಿಸುತ್ತಿವೆ. ಯಾವ ಘಟಕಗಳು ಸ್ಥಗಿತವಾಗಿವೆ ಎಂಬ ಮಾಹಿತಿ ಕಲೆ ಹಾಕಿದ್ದು ಆದಷ್ಟು ಶೀಘ್ರ ದುರಸ್ತಿ ಮಾಡಲಾಗುವುದು. ಯಾವುದೇ ಕಾರಣಕ್ಕೂ ಬೇಸಿಗೆಯಲ್ಲಿ ಈ ಘಟಕಗಳಿಂದ ನೀರಿನ ಕೊರತೆ ಆಗದಂತೆ ಎಚ್ಚರ ವಹಿಸಲು ಜಿಲ್ಲಾಧಿಕಾರಿಗಳು, ಜಿಪಂ ಸಿಇಓ ಸೂಚನೆ ಸಹ ನೀಡಿದ್ದಾರೆ.
- ಜಗದೀಶ ಪಾಟೀಲ, ಕಾರ್ಯನಿರ್ವಾಹಕ ಎಂಜಿನಿಯರ್, ಧಾರವಾಡ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ