ನಾನು ನನ್ನ ವಾಚ್‌ ವಿಚಾರವಾಗಿ ಲೋಕಾಯುಕ್ತ ಸೇರಿ ಅಗತ್ಯವಿರುವಲ್ಲಿ ಮಾಹಿತಿ ನೀಡಿದ್ದೇನೆ. ನಾನು ಈ ವಿಚಾರದಲ್ಲಿ ಸುಳ್ಳು ಹೇಳಿದ್ದರೆ ಈಗಲೇ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ

ಬೆಂಗಳೂರು : ನಾನು ನನ್ನ ವಾಚ್‌ ವಿಚಾರವಾಗಿ ಲೋಕಾಯುಕ್ತ ಸೇರಿ ಅಗತ್ಯವಿರುವಲ್ಲಿ ಮಾಹಿತಿ ನೀಡಿದ್ದೇನೆ. ನಾನು ಈ ವಿಚಾರದಲ್ಲಿ ಸುಳ್ಳು ಹೇಳಿದ್ದರೆ ಈಗಲೇ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಇಲ್ಲದಿದ್ದರೆ ನನ್ನ ವಿರುದ್ಧ ಆರೋಪಿಸುತ್ತಿರುವ ಛಲವಾದಿ ನಾರಾಯಣಸ್ವಾಮಿ ರಾಜೀನಾಮೆ ನೀಡುತ್ತಾರೆಯೇ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದ್ದಾರೆ.

ಸವಾಲು ಹಾಕಿದ ಶಿವಕುಮಾರ್‌

ದುಬಾರಿ ವಾಚ್‌ ಧರಿಸಿದ್ದಕ್ಕೆ ಆರೋಪಿಸುತ್ತಿರುವ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿಗೆ ಶುಕ್ರವಾರ ಸವಾಲು ಹಾಕಿದ ಶಿವಕುಮಾರ್‌, ನಾರಾಯಣಸ್ವಾಮಿ ಅವರಿಗೆ ಇನ್ನೂ ಅನುಭವವಿಲ್ಲ. ಯಾವುದಾದರೂ ವಿಚಾರದ ಬಗ್ಗೆ ಮಾತನಾಡಬೇಕಾದರೆ ಕನಿಷ್ಟ ಪರಿಜ್ಞಾನ ಇರಬೇಕು. ಸುಮ್ಮನೆ ಪ್ರಚಾರಕ್ಕಾಗಿ ಮಾತನಾಡಬಾರದು. ಅವರಿಗಿಂತ ಹೆಚ್ಚು ಜವಾಬ್ದಾರಿಯಿಂದ ನಾನು ವರ್ತಿಸುತ್ತೇನೆ. ಅವರೂ ಜವಾಬ್ದಾರಿಯಿಂದ ಕೆಲಸ ಮಾಡುವುದನ್ನು ಕಲಿಯಲಿ. ನಾನು ಪ್ರದರ್ಶಿಸಿರುವ ದಾಖಲೆಗಳ ಬಗ್ಗೆ ಅವರೇ ಲೋಕಾಯುಕ್ತ ಕಚೇರಿಗೆ ಹೋಗಿ ಪರಿಶೀಲನೆ ಮಾಡಲಿ ಎಂದರು.

ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುವುದಾಗಿ ವಿಪಕ್ಷ ನಾಯಕರು ಹೇಳಿರುವ ಕುರಿತು ಪ್ರತಿಕ್ರಿಯಿಸಿ, ಸದನದಲ್ಲೂ ಪ್ರಸ್ತಾಪಿಸಲಿ, ಬೇರೆ ಎಲ್ಲಾದರೂ ಪ್ರಸ್ತಾಪಿಸಲಿ. ಯಾರೂ ಬೇಡ ಎನ್ನುವುದಿಲ್ಲ. ದೇಶದೆಲ್ಲೆಡೆ ಚರ್ಚೆ ಮಾಡಲಿ. ನನ್ನ ದಾಖಲೆ ಅವರಿಗೆ ತೋರಿಸುವ ಅಗತ್ಯವಿಲ್ಲವಾದರೂ ನಾನು ಆ ವಾಚ್‌ ಕದ್ದಿದ್ದೇನೆ ಎಂದು ಹೇಳಿದ್ದಾರಲ್ಲ. ಅದಕ್ಕಾಗಿ ದಾಖಲೆ ತೋರಿಸಿದ್ದೇನೆ ಎಂದರು.ಡಿಕೆಶಿ ಕಾರ್ಟಿಯರ್‌ ವಾಚ್‌

ಅಫಿಡವಿಟ್‌ನಲ್ಲಿಲ್ಲ: ಛಲವಾದಿ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಈಗ ಲೋಕಾಯುಕ್ತಕ್ಕೆ ನೀಡಿರುವ ಕಾರ್ಟಿಯರ್‌ ವಾಚ್‌ ಮಾಹಿತಿಯನ್ನು ಹಿಂದೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಯಾಕೆ ನೀಡಿಲ್ಲ ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.

ಅಲ್ಲದೆ, ಅಫಿಡವಿಟ್‌ನಲ್ಲಿರುವ ಹೂಬ್ಲೋಟ್‌ ವಾಚ್‌ ಲೋಕಾಯುಕ್ತರಿಗೆ ನೀಡಿರುವ ಮಾಹಿತಿಯಲ್ಲಿ ಯಾಕೆ ಕಾಣುತ್ತಿಲ್ಲ? ಅದು ಕೂಡ ಅಪರಾಧವೇ ಎಂದೂ ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಶಿವಕುಮಾರ್‌ ಅವರು ವಾಚುಗಳ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿರುವ ಕುರಿತು ಹೇಳಿದಾಗ ನನ್ನ ಹೇಳಿಕೆಯಿಂದ ಶಿವಕುಮಾರ್ ಅವರಿಗೆ ಬೇಸರವಾದರೆ ನಾನೇನೂ ಮಾಡಲಾಗದು. ರಾಜಕೀಯದಲ್ಲಿ ಎಷ್ಟೇ ಪ್ರೀತಿ-ವಿಶ್ವಾಸಗಳಿದ್ದರೂ ಹೊಂದಾಣಿಕೆಯ ನಾಟಕ ನನ್ನ ಬಳಿ ಇಲ್ಲ. ಇದನ್ನು ಬಹಳ ಬೆಳೆಸಬೇಕೆಂಬುದು ನನ್ನ ಉದ್ದೇಶವಲ್ಲ. ಸಂದರ್ಭಕ್ಕೆ ತಕ್ಕಂತೆ ವಿಷಯವನ್ನು ಜನರ ಗಮನಕ್ಕೆ ತರುವ ಕೆಲಸ ಮಾಡಿದ್ದೇನೆ ಎಂದರು.

ಮುಖ್ಯಮಂತ್ರಿಗಳಿಗೆ ಉಡುಗೊರೆಯಾಗಿ ಕೊಟ್ಟ ಹೂಬ್ಲೋಟ್ ವಾಚ್ ಹಿಂದೆ ವಿವಾದಕ್ಕೆ ಗುರಿಯಾಗಿತ್ತು. ಕೊನೆಯಲ್ಲಿ ಅದನ್ನು ಸರ್ಕಾರದ ವಶಕ್ಕೆ ಒಪ್ಪಿಸಿ ವಿಧಾನಸೌಧದ ವಸ್ತು ಸಂಗ್ರಹಾಲಯದಲ್ಲಿ ಇಡಲಾಯಿತು. ಹಾಗಾಗಿ ಈಗ ಡಿ.ಕೆ.ಶಿವಕುಮಾರ್‌ ಅವರು ಅಫಿಡವಿಟ್‍ನಲ್ಲಿ ತಿಳಿಸಿದ್ದಾಗಿ ಹೇಳಿರುವ ಕಾರ್ಟಿಯರ್‌ ವಾಚ್‌ ಮಾಹಿತಿ 2018, 2023ರ ಅಫಿಡವಿಟ್‌ ಎರಡೂ ಕಡೆ ಇಲ್ಲ ಎಂಬುದಷ್ಟೇ ನನ್ನ ಪ್ರಶ್ನೆ. ಲೋಕಾಯುಕ್ತಕ್ಕೆ ಕೊಟ್ಟ ಮಾಹಿತಿಯಡಿ ರೋಲೆಕ್ಸ್ ವಾಚ್- 9 ಲಕ್ಷ, ಕಾರ್ಟಿಯರ್ ವಾಚ್- 23.90 ಲಕ್ಷ, ಇನ್ನೊಂದು ಕಾರ್ಟಿಯರ್ ವಾಚ್- 12.06 ಲಕ್ಷ ಎಂದಿದ್ದಾರೆ. ಆದರೆ, ಈಗ ಅವರ ಹೂಬ್ಲೋಟ್ ವಾಚ್ ಕಾಣುತ್ತಿಲ್ಲ. ಎಲ್ಲಿ ಹೋಗಿದೆ? ಎಂದು ಕೇಳಿದರು.

ಇದೇ ವೇಳೆ, ನಾನು ಅವರು ಯಾವುದೇ ವಾಚು ಕದ್ದುಕೊಂಡು ಬಂದಿರುವುದು ಎಂದು ಹೇಳಿಲ್ಲ. ಶಿವಕುಮಾರ್‌ ಅವರನ್ನು ಇಂದಿನಿಂದ ನೋಡುತ್ತಿಲ್ಲ, ಕಾಲೇಜಿನಿಂದ ನೋಡುತ್ತಾ ಬಂದಿದ್ದೇನೆ. ಅವರ ಕಾಲೇಜು ಸ್ನೇಹಿತರಲ್ಲಿ ನಾನೂ ಒಬ್ಬ. ಅವರು ನೂರು ವಾಚ್‌ ಕಟ್ಟಿದರೂ ಸ್ನೇಹಿತನಾಗಿ ಸಂತೋಷಪಡುತ್ತೇನೆ. ಆದರೆ ಅವರು ಸರ್ಕಾರ, ಸಾರ್ವಜನಿಕರಿಗೆ ಕೊಟ್ಟಿರುವ ಮಾಹಿತಿ ಸರಿಯಾಗಿರಬೇಕಲ್ಲ ಎಂದರು.