ಸತತ ಮೂರು ಬಾರಿ ಗೆಲವು ಸಾಧಿಸಿರುವ ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಕಾಂಗ್ರೆಸ್ಸಿಗೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಕೊಪ್ಪಳ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾರಡ್ಡಿ ಗಲಬಿ ಅವರು ಹೇಳಿದ್ದಾರೆ.

ಕೊಪ್ಪಳ: ಸತತ ಮೂರು ಬಾರಿ ಗೆಲವು ಸಾಧಿಸಿರುವ ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಕಾಂಗ್ರೆಸ್ಸಿಗೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಕೊಪ್ಪಳ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾರಡ್ಡಿ ಗಲಬಿ ಅವರು ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಇದುವರೆಗೂ ಸಚಿವ ಸ್ಥಾನ ಸಿಕ್ಕಿಯೇ ಇಲ್ಲ. ಜಿಲ್ಲಾ ಕೇಂದ್ರಕ್ಕೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ.

ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೂ ಹ್ಯಾಟ್ರಿಕ್ ಯಾರೂ ಬಾರಿಸಿಲ್ಲ. ಇದೇ ಮೊದಲ ಬಾರಿ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅವರಿಗೆ ಹಿರಿತನವೂ ಬಂದಿದ್ದು, ಜಿಲ್ಲೆಯ ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರದ ಹಿತದೃಷ್ಟಿಯಿಂದ ಪ್ರಸಕ್ತ ಸಚಿವ ಸಂಪುಟ ವಿಸ್ತರಣೆಯ ವೇಳೆಯಲ್ಲಿ ಸಚಿವ ಸ್ಥಾನ ನೀಡಲೇಬೇಕು. ಇಲ್ಲದಿದ್ದರೆ ನಾವು ಬ್ಲಾಕ್ ಕಾಂಗ್ರೆಸ್ ಎಲ್ಲ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಮತ್ತು ಸರ್ಕಾರದ ವಿರುದ್ಧವೇ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಪಕ್ಷ ಸಚಿವು ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆ ಸೇರಿದಂತೆ ಯಾವುದೇ ಕ್ರಮವಹಿಸಿದರೂ ಮೊದಲ ಆದ್ಯತೆಯಲ್ಲಿ ಸಚಿವ ಸ್ಥಾನವನ್ನು ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ನೀಡುವಂತೆ ಆಗ್ರಹಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಕುರಿತು ಪತ್ರವನ್ನು ಎಲ್ಲ ಪದಾಧಿಕಾರಿಗಳ ರುಜುವಿನೊಂದಿಗೆ ಕಳುಹಿಸಿಕೊಡಲಾಗುವುದು. ಹಾಗೆಯೇ ಪಕ್ಷದ ಹೈಕಮಾಂಡ್ ಗಮನಕ್ಕೂ ತರಲಾಗುವುದು ಎಂದು ಹೇಳಿದ್ದಾರೆ.