ಶುದ್ಧ ಮತ್ತು ಹಸಿರು ತಂತ್ರಜ್ಞಾನವೇ ಇಂದಿನ ಅವಶ್ಯಕತೆಯಾಗಿದೆ ಎಂದು ರೇಣುಕಾ ಶುಗರ್ಸ್‌ನ ಉಪಾಧ್ಯಕ್ಷ ಡಾ.ಗೋವಿಂದ ಮಿಸಾಲೆ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಶುದ್ಧ ಮತ್ತು ಹಸಿರು ತಂತ್ರಜ್ಞಾನವೇ ಇಂದಿನ ಅವಶ್ಯಕತೆಯಾಗಿದೆ ಎಂದು ರೇಣುಕಾ ಶುಗರ್ಸ್‌ನ ಉಪಾಧ್ಯಕ್ಷ ಡಾ.ಗೋವಿಂದ ಮಿಸಾಲೆ ಹೇಳಿದರು.ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ರಜತ ಮಹೋತ್ವವದ ಭವನದಲ್ಲಿ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (ಎಸ್‌ಐಎಚ್) 2025- ಸಾಫ್ಟ್‌ವೇರ್ ಎಡಿಷನ್ ಗ್ರ್ಯಾಂಡ್ ಫಿನಾಲೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಐಸಿಟಿಇ ಮತ್ತು ಎಸ್‌ಐಎಚ್‌ಗಳು ವಾಯು ಮಾಲಿನ್ಯ, ಶುದ್ಧ ಇಂಧನ ಮತ್ತು ಪರಿಸರ ಶಾಶ್ವತತೆ ಕುರಿತ ಪರಿಣಾಮಕಾರಿಯ ಪರಿಹಾರಗಳನ್ನು ಕಂಡುಹಿಡಿಯುವಂತೆ ಶಾಶ್ವತ ಆವಿಷ್ಕಾರದ ಅಗತ್ಯವನ್ನು ಒತ್ತಿ ಹೇಳಿದರು.ವಿಟಿಯು ಕುಲಪತಿ ಡಾ.ಎಸ್.ವಿದ್ಯಾಶಂಕರ್ ಮಾತನಾಡಿ, ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಕೇವಲ ಒಂದು ಕಾರ್ಯಕ್ರಮವಲ್ಲ. ಇದೊಂದು ಭಾರತೀಯ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ತೋರಲು ಇರುವ ವೇದಿಕೆಯಾಗಿದೆ. ಮುಂದಿನ ಎರಡು ದಿನಗಳಲ್ಲಿ ವಿದ್ಯಾರ್ಥಿಗಳು ಕೇವಲ ಕೋಡಿಂಗ್ ಮಾಡುವುದಲ್ಲ, ಭವಿಷ್ಯದ ಭಾರತ ರೂಪಿಸುತ್ತಿದ್ದಾರೆ ಎಂದು ಬಣ್ಣಿಸಿದರು.ಕೇಂದ್ರ ಶಿಕ್ಷಣ ಸಚಿವಾಲಯ ಆಯ್ಕೆ ಮಾಡಿದ ಪ್ರತಿಷ್ಠಿತ ನೋಡಲ್ ಕೇಂದ್ರಗಳಲ್ಲಿ ಒಂದಾಗಿ ವಿಟಿಯು ದೇಶದ ವಿವಿಧ ಭಾಗಗಳಿಂದ ಬಂದ 20 ತಂಡಗಳು, 120 ಯುವ ಆವಿಷ್ಕಾರಕರನ್ನು ಆತಿಥ್ಯ ನೀಡಿತು. ಈ ಕಾರ್ಯಕ್ರಮದಲ್ಲಿ ವಿಟಿಯು ಕುಲಸಚಿವ ಡಾ.ಪ್ರಸಾದ್ ಬಿ.ರಾಂಪುರೆ, ಕುಲಸಚಿವ(ಮೌಲ್ಯಮಾಪನ) ಡಾ.ಯು.ಜೆ.ಉಜ್ವಲ್ ಸೇರಿದಂತೆ ಶಿಕ್ಷಣ ಸಚಿವಾಲಯದ ಇನೋವೇಶನ್ ಸೆಲ್, ಎಐಸಿಟಿಇ, ಕೈಗಾರಿಕಾ ಪಾಲುದಾರರು, ತೀರ್ಪುಗಾರರು, ಸಂಯೋಜಕರು ಭಾಗವಹಿಸಿದ್ದರು.
ವಿಟಿಯು ಆವಿಷ್ಕಾರ ಆಧಾರಿತ ಕಲಿಕೆಗೆ ಬದ್ಧವಾಗಿದೆ. ಹ್ಯಾಕಥಾನ್‌ನಲ್ಲಿ ಭಾಗವಹಿಸುವ ಮೂಲಕ ನವ ಭಾರತವನ್ನು ನಿರ್ಮಾಣ ಮಾಡಬೇಕು. 2047 ರೊಳಗೆ ವಿಕಸಿತ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಕೊಡುಗೆ ಮಹತ್ವದ್ದಾಗಲಿದೆ.-ಡಾ.ಎಸ್.ವಿದ್ಯಾಶಂಕರ್,
ವಿಟಿಯು ಕುಲಪತಿ.