ಸಾರಾಂಶ
ಸ್ವಚ್ಛ ಕೊಡಗು - ಸುಂದರ ಕೊಡಗು ಅಭಿಯಾನಕ್ಕೆ ಜಿಲ್ಲೆಯಾದ್ಯಂತ ಅತ್ಯುತ್ತಮ ಸ್ಪಂದನೆ ದೊರಕಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ಹಮ್ಮಿಕೊಂಡಿರುವ ಸ್ವಚ್ಛ ಕೊಡಗು- ಸುಂದರ ಕೊಡಗು ಅಭಿಯಾನಕ್ಕೆ ಜಿಲ್ಲೆಯಾದ್ಯಂತ ಅತ್ಯುತ್ತಮ ಸ್ಪಂದನೆ ದೊರಕಿದೆ. ಮಾಂದಲಪಟ್ಟಿ ಜೀಪು ಚಾಲಕರ ಸಂಘವು ಈ ಅಭಿಯಾನಕ್ಕೆ ಕೈಜೋಡಿಸಿತು.ಸುಮಾರು 25 ಮಂದಿ ನಾಲ್ಕೈದು ತಂಡಗಳಾಗಿ ಶ್ರಮದಾನದಲ್ಲಿ ತೊಡಗಿದ್ದು, ನಂದಿಮೊಟ್ಟೆಯಿಂದ ಮಾಂದಲಪಟ್ಟಿವರೆಗೆ 18 ಕಿ.ಮೀ ರಸ್ತೆ ಬದಿಯಲ್ಲಿನ ಕಸವನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು. ಬೆಳಗ್ಗೆ 8 ಗಂಟೆಯಿಂದಲೇ ಸ್ವಚ್ಛತಾ ಕಾರ್ಯ ಆರಂಭಗೊಂಡಿತು. ಪ್ರವಾಸಿಗರು ಹಾಗೂ ಸಾರ್ವಜನಿಕರು ರಸ್ತೆ ಬದಿ ಕಸ ಎಸೆಯದೆ ಸ್ವಚ್ಛತೆ ಕಾಪಾಡುವಂತೆ ಮಾಂದಲಪಟ್ಟಿ ಜೀಪು ಚಾಲಕರ ಸಂಘದ ಖಜಾಂಚಿ ಮೊಣ್ಣಯ್ಯ ಮನವಿ ಮಾಡಿದ್ದಾರೆ. ಮಾಂದಲಪಟ್ಟಿಗೆ ತೆರಳುವ ಪ್ರವಾಸಿಗರು ಅಲ್ಲಿ ಕಸ ಹಾಕದಂತೆ ಜೀಪು ಚಾಲಕರು ಎಚ್ಚರ ವಹಿಸಬೇಕೆಂದು ಅವರು ಹೇಳಿದರು.
ಈ ಸಂದರ್ಭ ಸಂಘದ ಪ್ರಮುಖರಾದ ಶರಣು, ಪುಷ್ಪರಾಜ್, ರವಿ, ಡೇವಿಡ್‌ರಾಜ್, ದರ್ಶನ್, ಪಾಂಡಿರ ರವಿ, ಪಾಂಡಿರ ಚೇತು, ಗಜೇಂದ್ರ, ನಾರಾಯಣ, ಮನು, ಗಣೇಶ್, ರಾಜೇಶ್, ಮುತ್ತಣ್ಣ ಸೇರಿದಂತೆ ಮತ್ತಿತರರು ಇದ್ದರು.