ಸ್ವಚ್ಛ ಕೊಡಗು ಸುಂದರ ಕೊಡಗು ಎಂಬ ಅಭಿಯಾನ ಹಮ್ಮಿಕೊಂಡಿದ್ದು ಇದರ ಮೊದಲ ಪೂರ್ವಭಾವಿ ಸಭೆ ಕಚೇರಿಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಯಿಂದ ಸ್ವಚ್ಛ ಕೊಡಗು ಸುಂದರ ಕೊಡಗು ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇದರ ಮೊದಲ ಪೂರ್ವಬಾವಿ ಸಭೆ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆಯಿತು. ಸಭೆಯಲ್ಲಿ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅರುಣ್ ಕೊತ್ತನಳ್ಳಿ ಮಾತನಾಡಿ, ಸ್ವಚ್ಛ ಕೊಡಗು ಸುಂದರ ಕೊಡಗು ಅಭಿಯಾನಕ್ಕೆ ಇಲ್ಲಿನ ಎಲ್ಲಾ ನಾಗರಿಕರು ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಅಭಿಯಾನಕ್ಕೆ ಕೈಜೋಡಿಸಬೇಕು. ಈಗಾಗಲೇ ಬಹುತೇಕ ಖಾಸಗಿ ಸಂಸ್ಥೆಗಳು ನಮ್ಮೊಂದಿಗೆ ಕೈಜೋಡಿಸಲು ಮುಂದಾಗಿದ್ದಾರೆ. ಇದು ಆಶಾದಾಯಕ ಬೆಳವಣಿಗೆ ಎಂದರು.ನಮ್ಮ ಕೊಡಗು ದೇಶದಲ್ಲೇ ಪರಿಶುದ್ಧವಾದ ಗಾಳಿ ನೀಡುವ ಪ್ರದೇಶವಾಗಿದೆ. ಇದನ್ನು ಕಲುಷಿತ ಮಾಡುವುದು ಬೇಡ. ಕೊಡಗಿನಲ್ಲಿ ಹೆಚ್ಚು ಪ್ರವಾಸಿ ತಾಣಗಳಿವೆ. ಹಾಗಾಗಿ ಇಲ್ಲಿಗೆ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅವರು ತಂದ ತಿಂಡಿ ತಿನಿಸು ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ಎಲ್ಲಂದರಲ್ಲಿ ಬಿಸಾಡಿ ಹೋಗುತ್ತಾರೆ. ಇದರಿಂದ ವಾತಾವರಣ ಕಲುಷಿತಗೊಳ್ಳುತ್ತದೆ. ಹಾಗಾಗಿ ಮೊದಲಿಗೆ ನಮ್ಮ ಮನೆಗಳಿಂದಲೇ ಸ್ವಚ್ಛ ಕೊಡಗು ಎಂಬ ಅಭಿಯಾನ ಪ್ರಾರಂಭವಾಗಬೇಕಿದೆ ಎಂದರು.ಹೋಂ ಸ್ಟೇ ಮತ್ತು ರೆಸಾರ್ಟ್ ಅಸೋಸಿಯೇಷನ್ ಜಿಲ್ಲಾ ಉಪಾಧ್ಯಕ್ಷ ಸುಂದರ್, ತಾಲೂಕು ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ರೋಹಿತ್, ನಾವು ಪ್ರತಿಷ್ಠಾನ ಸಂಸ್ಥೆಯ ಸುಮನ, ತಾಲೂಕು ಪಂಚಾಯಿತಿ ಅಧಿಕಾರಿಗಳಾದ ಶ್ರೀನಿವಾಸ್, ರೋಟರಿ ಸಂಸ್ಥೆಯ ಅಧ್ಯಕ್ಷೆ ವೀಣಾ ಮನೋಹರ್, ಜೆಸಿಐ ಅಧ್ಯಕ್ಷೆ ಜಗದಾಂಭ ಗುರುಪ್ರಸಾದ್, ಯಿಫಾದಿಂದ ಸಜ್ಜನ್, ಕೆಟಿಡಿಓ ಅಧ್ಯಕ್ಷ ವಸಂತ್ ಇದ್ದರು.