ವಿದ್ಯಾರ್ಥಿಗಳಿಗೆ ಸಮಸ್ಯೆಗೆ ನಗರಸಭೆ ಅಧಿಕಾರಿಗಳ ಸ್ಪಂದನೆ
ಕನ್ನಡಪ್ರಭ ವರದಿ ಪರಿಣಾಮಕನ್ನಡಪ್ರಭ ವಾರ್ತೆ ಕಾರವಾರ
ನಗರದ ಕೋಡಿಭಾಗದಲ್ಲಿ ಗಟಾರದಲ್ಲಿ ಹೂಳು ತುಂಬಿ ರಸ್ತೆಯ ಮೇಲೆ ನಿಲ್ಲುತ್ತಿದ್ದ ಮಳೆಯ ಕೊಳಚೆ ಮಿಶ್ರಿತ ಮಳೆಯ ನೀರಿನಲ್ಲಿ ವಿದ್ಯಾರ್ಥಿಗಳು ಓಡಾಡಬೇಕಾದ ದುಃಸ್ಥಿತಿಯ ಕುರಿತು ಮಂಗಳವಾರ ಕನ್ನಡಪ್ರಭ ವರದಿ ಮಾಡಿತ್ತು. ಈ ಬೆನ್ನಲ್ಲೇ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಗಟಾರವನ್ನು ಸ್ವಚ್ಛಗೊಳಿಸಿಕೊಟ್ಟಿದ್ದಾರೆ.ಕೋಡಿಭಾಗದ ಹೆಂಜಾ ನಾಯ್ಕ ಪುತ್ಥಳಿಯ ಎಡಭಾಗದಲ್ಲಿನ ರಸ್ತೆಗೆ ನಿರ್ಮಿಸಲಾಗಿದ್ದ ಕಿರಿದಾದ ಗಟಾರವು ಕಳೆದ ಬಾರಿಯ ಮಳೆಗೆ ಸಂಪೂರ್ಣ ಹೂಳು ತುಂಬಿ ಮುಚ್ಚಿಹೋಗಿದ್ದು, ಪರಿಣಾಮ ಈ ಬಾರಿ ಸಣ್ಣ ಮಳೆ ಬಿದ್ದಾಗಲೂ ರಸ್ತೆಯಲ್ಲಿ ನೀರು ನಿಂತು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಗಟಾರ ಸ್ವಚ್ಛಗೊಳಿಸಿಕೊಡುವಂತೆ ಸ್ಥಳೀಯ ನಿವಾಸಿಗಳು ಸಾಕಷ್ಟು ಬಾರಿ ನಗರಸಭೆಗೆ ಮನವಿ ಮಾಡಿದ್ದು, ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ.ಸ್ಥಳೀಯ ನಿವಾಸಿ ದಿನೇಶ್ ಎಂಬವರು ಕನ್ನಡಪ್ರಭ ಪತ್ರಿಕೆಗೆ ಮಾಹಿತಿ ನೀಡಿದ್ದು, ಪ್ರತಿನಿತ್ಯ ವಿದ್ಯಾರ್ಥಿಗಳು ಕೆಸರು, ಕೊಳಚೆ ಮಿಶ್ರಿತ ನೀರಿನಲ್ಲಿ ಪಕ್ಕದ ಕಾಂಪೌಂಡ್ ಗೋಡೆ ಹಿಡಿದುಕೊಂಡು ಹರಸಾಹಸಪಟ್ಟು ಶಾಲೆಗೆ ತೆರಳುವ ಪರಿಸ್ಥಿತಿಯ ಕುರಿತು ಅಳಲು ತೋಡಿಕೊಂಡಿದ್ದರು. ಈ ಕುರಿತು ಕನ್ನಡಪ್ರಭ ವಿಸ್ತೃತ ವರದಿ ಪ್ರಸಾರ ಮಾಡಿದ್ದು, ವರದಿಗೆ ಸ್ಪಂದಿಸಿದ ನಗರಸಭೆ ಅಧಿಕಾರಿಗಳು ಕೂಡಲೇ ಸಿಬ್ಬಂದಿ ಕಳುಹಿಸಿ ಹೂಳು ತುಂಬಿದ್ದ ಗಟಾರವನ್ನು ಸ್ವಚ್ಛಗೊಳಿಸಿಕೊಟ್ಟಿದ್ದಾರೆ.ತಮ್ಮ ಸಮಸ್ಯೆ ಕುರಿತು ಸವಿವರವಾದ ವರದಿ ಭಿತ್ತರಿಸಿ ಪರಿಹಾರ ಸಿಗುವಂತೆ ಮಾಡಿದ ಕನ್ನಡಪ್ರಭ ಪತ್ರಿಕೆಗೆ ಹಾಗೂ ಕೂಡಲೇ ಸ್ಪಂದಿಸಿದ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕೋಡಿಭಾಗ ನಿವಾಸಿಗಳು ಧನ್ಯವಾದ ತಿಳಿಸಿದ್ದಾರೆ.